ಮಾತೃ ಕಾಳಜಿ ಮರೆತ ಸರ್ಕಾರ ಮಂಡಿಯೂರಿತು

ಬೆಂಗಳೂರು: ಮಾತೃಭಾಷೆ ಕನ್ನಡ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಕಲಿಕಾ ಮಾಧ್ಯವಾಗಬೇಕೆಂದು ಎರಡೂವರೆ ದಶಕಗಳ ಹಿಂದೆ ಫರ್ಮಾನು ಹೊರಡಿಸಿದ್ದ ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್ ಮುಂದೆ ಅಷ್ಟೇ ಹಳೆಯ ವಾದವನ್ನು ಮಂಡಿಸಿ, ಮುಖಭಂಗ ಅನುಭವಿಸಿದೆ.
ಸರ್ಕಾರದ ಅಸಮರ್ಥ ಕಾನೂನು ಸಮರ ಹಾಗೂ ಪೂರಕ ತಯಾರಿ ಕೊರತೆಯಿಂದ ಇಂದು ಕೋರ್ಟ್‌ನಲ್ಲಿ ಮಂಡಿಯೂರಿ ನಿಲ್ಲುವ ಪರಿಸ್ಥಿತಿ. ಭಾರತಕ್ಕೆ ಜಾಗತೀಕರಣ ಪ್ರವೇಶಿಸುವ ಸಂದರ್ಭದಲ್ಲಿ ಈ ಸುತ್ತೋಲೆ ಹೊರಬಿದ್ದಿತ್ತು. ಆ ಬಳಿಕ ರಾಜ್ಯದಲ್ಲಿ ಏಳು ಸರ್ಕಾರಗಳು ಬಂದು ಹೋದವು. ಇವೆಲ್ಲವೂ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನ ನಾನಾ ಸ್ಥರಗಳಲ್ಲಿ ಕಾನೂನು ಹೋರಾಟ ನಡೆಸಿದವೇ ವಿನಾ ಕನ್ನಡ ಮಾಧ್ಯಮ ಅನಿವಾರ್ಯ ಎಂಬುದನ್ನು ಸಾಬೀತು ಮಾಡಲು ಪ್ರಯತ್ನಿಸಲೇ ಇಲ್ಲ. ಮತ್ತೊಂದೆಡೆ ಕೇಂದ್ರದ ಮಧ್ಯ ಪ್ರವೇಶಕ್ಕೆ ಒತ್ತಡ ಹೇರುವ ಕೆಲಸವನ್ನೂ ಮಾಡಲಿಲ್ಲ.
ಈ ಹಿನ್ನೆಲೆಯಲ್ಲಿ ಕಲಿಕಾ ಮಾಧ್ಯಮ ಪಾಲಕರ ಆಯ್ಕೆ ಎನ್ನುವುದಷ್ಟೇ ಕೋರ್ಟ್‌ಗೆ ಗಂಭೀರವೆನಿಸಿದೆ. ರಾಜ್ಯ ಕಾನೂನು ಹೋರಾಟವನ್ನು ಕೇವಲ ಸಂವಿಧಾನದ ಪರಿಧಿಯಲ್ಲಿ ನೋಡಿರುವುದು ತೀರ್ಪಿನಲ್ಲಿ ಕಾಣುತ್ತದೆ. ಸಂವಿಧಾನದ ಪರಿಧಿಯಲ್ಲಿ ನೋಡಿದಾಗ 1994ರ ಸುತ್ತೋಲೆಗೆ ಮಹತ್ವ ಬರಲು ಸಾಧ್ಯವೇ ಇಲ್ಲ.
ಪೂರ್ಣ ಪೀಠದೆದುರು ರಾಜ್ಯ ವಾದ ಮಂಡಿಸುವಾಗ 1949ರಲ್ಲಿ ನಡೆದ ಶಿಕ್ಷಣ ಸಚಿವರ ಸಮ್ಮೇಳನದ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಇದಾಗಿ 40 ವರ್ಷದ ಬಳಿಕ ಕಲಿಕಾ ಮಾಧ್ಯಮದ ಸುತ್ತೋಲೆ ಬಂದಿದೆ. ಮತ್ತೆ ಎರಡೂವರೆ ದಶಕಗಳ ಬಳಿಕ ಸುಪ್ರೀಂ ತೀರ್ಪು ನೀಡಿದೆ. ಆದಾಗ್ಯೂ ರಾಜ್ಯದ ವಾದ ಒಂದೇ ರೀತಿಯಾಗಿದ್ದರೆ ಯಾವ ಕೋರ್ಟ್ ಕೂಡ ಕಲಿಕಾ ಮಾಧ್ಯಮ ಕುರಿತ ನೀತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿರಲಿಲ್ಲ.
ಮಾತೃಭಾಷೆಗೆ ಆಧಾರವೇನು?
ಜನ ಇಂಗ್ಲಿಷ್ ಮಾಧ್ಯಮ ಬೇಕು ಎನ್ನುವುದನ್ನು ನಿರ್ವಿವಾದ. ಇಂದಿನ ಉದ್ಯೋಗ ಪ್ರಪಂಚ ಇದನ್ನೇ ಬಯಸುತ್ತಿದೆ ಎಂಬುದೂ ಸತ್ಯ. ಆದರೆ, ಮಾತೃಭಾಷೆ ಶಿಕ್ಷಣ ಅನಿವಾರ್ಯ ಎನ್ನಲು ಯಾವೊಂದು ವೈಜ್ಞಾನಿಕ ಆಧಾರವನ್ನೂ ಇರಿಸಿಕೊಂಡಿಲ್ಲ. ಒಂದೊಮ್ಮೆ ಇರಿಸಿಕೊಂಡಿದ್ದರೂ ಸುಪ್ರೀಂನಲ್ಲಿ ಆ ವಾದವನ್ನು ಮಂಡಿಸಿಲ್ಲ.
ವಿದ್ಯಾರ್ಥಿಯೊಬ್ಬನ ಶೈಕ್ಷಣಿಕ, ಬೌದ್ಧಿಕ ಅಭಿವೃದ್ಧಿಗೆ ಕನ್ನಡ ಅಥವಾ ಮಾತೃಭಾಷೆ ಹೇಗೆ ಅನಿವಾರ್ಯ ಎನ್ನುವುದಕ್ಕೆ ಸರ್ಕಾರ ಅಧ್ಯಯನವನ್ನೇ ನಡೆಸಲಿಲ್ಲ. ಇದೇ ಕಾರಣದಿಂದ ಸಾಹಿತಿಗಳು, ಶಿಕ್ಷಣ ತಜ್ಞರು ಹೇಳಿದಾಕ್ಷಣ ಕಲಿಕಾ ಮಾಧ್ಯಮವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಹೇಳಿದೆ. ಈ ಸಂಬಂಧ ಯುನೆಸ್ಕೋ ಅಧ್ಯಯನವೂ ವಾದದಲ್ಲಿ ಪ್ರಸ್ತಾಪವಾಗಲಿಲ್ಲ.
ಕಲಿಕಾ ಮಾಧ್ಯಮ ಕನ್ನಡವಾದರೆ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆ ಎನ್ನುವುದು ಸುಪ್ರೀಂ ಕಾಳಜಿ. ಆದರೆ ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಇದು ಮಾರಕವಾಗುವುದಿಲ್ಲ ಎನ್ನುವುದನ್ನು ಸಾಬೀತು ಮಾಡಲು ಸರ್ಕಾರ ಪೂರ್ಣ ವಿಫಲವಾಗಿದೆ. ಈ ಮಾನ್ಯತೆ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವ ಶೈಕ್ಷಣಿಕ ವ್ಯಾಪಾರವನ್ನು ಕೋರ್ಟ್ ಎದುರಿಡುವ ಧೈರ್ಯವನ್ನು ಸರ್ಕಾರವೂ ತೋರಿಲ್ಲ.
-ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


