ರೈಲು ಹಳಿ ಸ್ಫೋಟಕ್ಕೆ ಸಂಚು

ಮಳಖೇಡ ಹತ್ತಿರ ರಾಜಶ್ರೀ ಸಿಮೆಂಟ್ ಫ್ಯಾಕ್ಟರಿಯಿಂದ 2 ಕಿಮೀ ದೂರದಲ್ಲಿರುವ ಸೇತುವೆ ಬಳಿ ಅಳವಡಿಸಲಾಗಿದ್ದ ಸ್ಫೋಟಕದ ನೋಟ. ಇದು ಪಟಾಕಿ ತರಹ ಕಂಡರೂ ತುಂಬ ಶಕ್ತಿಯುತ ಸಿಡಿಮದ್ದು, ಕೋಲ್ ಮೈನಿಂಗ್ನಲ್ಲಿ ಕಲ್ಲಿಗೆ ರಂಧ್ರ ಕೊರೆಯಲು ಬಳಸುವ ಸ್ಫೋಟಕ ಇದು ಎಂದು ಪೊಲೀಸರು ಶಂಕಿಸಿದ್ದಾರೆ.
ಗುಲ್ಬರ್ಗ: ಚೆನ್ನೈ ರೈಲು ಸ್ಫೋಟದ ಬೆನ್ನಲ್ಲೇ ಈಗ ಗುಲ್ಬರ್ಗದಲ್ಲಿ ಹಳಿಯಲ್ಲಿ ಭಾರಿ ಪ್ರಮಾಣದಲ್ಲಿ ಸ್ಫೋಟಕ ಹರಡಿ ವಿಧ್ವಂಸಕ ಕೃತ್ಯ ಎಸಗುವ ಸಂಚೊಂದು ರೇಲ್ವೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ಶನಿವಾರ ಬಯಲಾಗಿದೆ. ಈ ಮೂಲಕ ಮತ್ತೆ ರಕ್ತದೋಕುಳಿ ಹರಿಸುವ ದುಷ್ಕರ್ಮಿಗಳ ಸಂಚು ವಿಫಲವಾಗಿದೆ. ಸಿಕಂದರಾಬಾದ್ ರೇಲ್ವೆ ವಲಯದಡಿ ಬರುವ ಚಿತ್ತಾಪುರ, ಮಳಖೇಡ ರೈಲು ಮಾರ್ಗದಲ್ಲಿ ಈ ವಿಧ್ವಂಸಕ ಕೃತ್ಯ ನಡೆಸಲು ಉದ್ದೇಶಿಲಾಗಿತ್ತು. ಪೊಲೀಸರು ಸ್ಫೋಟಕ ಸಾಮಗ್ರಿ, ಡಿಟೋನೇಟರ್, ವೈರ್, ಬ್ಯಾಟರಿ ಸೇರಿದಂತೆ ಸ್ಫೋಟಕ್ಕೆ ಬಳಸಲಾಗುವ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಈ ದುಷ್ಕೃತ್ಯದ ಹಿಂದೆ ಯಾರಿದ್ದಾರೆ ಎನ್ನುವುದು ಇನ್ನಷ್ಟೇ ಬಹಿರಂಗವಾಗಬೇಕಿದೆ.
ರೈಲು ಅಧಿಕಾರಿಗಳ ನಿರ್ಲಕ್ಷ್ಯ: ಬೆಳಗ್ಗೆ 7 ಗಂಟೆ ಹೊತ್ತಿಗೆ ಮಳಖೇಡ ರಾಜಶ್ರೀ ಸಿಮೆಂಟ್ ಕಾರ್ಖಾನೆಯಿಂದ 2 ಕಿ.ಮೀ. ಅಂತರದಲ್ಲಿ ಹಳಿ ಮೇಲೆ ಪಟಾಕಿ ಹೋಲುವ ಸ್ಫೋಟಕ ಕಂಡಿದೆ. ಈ ಹಳಿಗುಂಟ ಕೆಲಸದಲ್ಲಿದ್ದ ಕೀ ಮ್ಯಾನ್ ಮೋಹನ ಎಂಬಾತ ಇದನ್ನು ಗುರುತಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ. ಆದರೆ, ಅಧಿಕಾರಿಗಳು ಈ ಮಾಹಿತಿಯನ್ನು ಹಗುರವಾಗಿ ಪರಿಗಣಿಸಿ ಅದ್ಯಾವುದೋ ಮಕ್ಕಳು ಸಿಡಿಸುವ ಪಟಾಕಿ ಇರಬೇಕು, ಕಟ್ಟಿಗೆ ಬಳಸಿ ಆಚೆ ಬಿಸಾಕು ಎಂದಿದ್ದರು. ಮೋಹನ ಅಧಿಕಾರಿಗಳ ಆದೇಶವನ್ನು ಪಾಲಿಸಿದ್ದನಾದರೂ ಈ ಸಂಗತಿಯನ್ನು ತನ್ನ ನಂತರ ಬರುವ (ಶಿಫ್ಟ್ ಡ್ಯೂಟಿ) ಸಿಬ್ಬಂದಿ ಗಮನಕ್ಕೂ ತಂದಿದ್ದ. ಆಗ ಎಲ್ಲರೂ ಈ ಸ್ಫೋಟಕ ಪರೀಕ್ಷಿಸಿದ್ದಾರೆ.
ಫೈಟಿಂಗ್ ನಡೆಸಿದ ತುಳಜಾರಾಂ: ಮೋಹನನ ನಂತರ ಕೆಲಸಕ್ಕೆ ಬಂದಿದ್ದ ಕೀ ಮ್ಯಾನ್ ತುಳಜರಾಂ ಚಿತ್ತಾಪುರ ಬಳಿ ಹಳಿಯಲ್ಲಿ ಸಾಗುತ್ತಿದ್ದಾಗ ಇಬ್ಬರು ಶಂಕಾಸ್ಪದವಾಗಿ ಹಳಿ ಬಳಿ ಕುಳಿತಿದ್ದನ್ನು
ಗಮನಿಸಿದ್ದಾರೆ. ತಕ್ಷಣ ಅಲ್ಲಿಗೆ ಹೋಗಿ ಅವರನ್ನು ವಿಚಾರಿಸಿದ್ದಾರೆ. ಹಳಿಬಳಿ ಇದ್ದವರು ತಮ್ಮ ಗುರುತು ಪತ್ತೆ ಹೇಳದೆ ಈ ಮಾರ್ಗದಲ್ಲಿ ಸಾಗುವ ರೈಲುಗಳ ಮಾಹಿತಿ ಕೋರಿದ್ದಾರೆ. ಇದರಿಂದ ಮತ್ತಷ್ಟು ಅನುಮಾನಗೊಂಡ ತುಳಜಾರಾಂ ಅವರೊಂದಿಗೆ ವಾಗ್ವಾದಕ್ಕೆ ಮುಂದಾಗಿದ್ದಾರೆ. ವಾಗ್ವಾದ ವಿಕೋಪಕ್ಕೆ ಹೋಗಿದ್ದಲ್ಲದೆ ಮಾರಾಮಾರಿಯೂ ಆಗಿದೆ. ಇದೇ ಸಂದರ್ಭದಲ್ಲಿ ಸುತ್ತಮುತ್ತ ಹರಿಡಿಕೊಂಡಿದ್ದ ಡಿಟೋನೇಟರ್, ವೈರ್ ತುಂಡುಗಳು, ಬ್ಯಾಟರಿ ಇತ್ಯಾದಿ ತುಳಜಾರಾಂ ಗಮನಕ್ಕೆ ಬಂದಿದೆ. ಜತೆಗೆ ಬೆಳಗ್ಗೆ ಮಳಖೇಡ ಹಳಿಬಳಿ ಕಂಡಿದ್ದ ಸ್ಫೋಟಕ ಹೋಲುವ ವಸ್ತುಗಳೂ ಇವರ ಚೀಲದಲ್ಲಿ ಸಾಕಷ್ಟಿರುವುದು ತುಳಜಾರಾಂ ಗಮನಿಸಿದ್ದಾರೆ.
ಅಪಾಯದ ಅರಿವಾಗಿ ತುಳಜಾರಾಂ ಜೋರು ಜಗಳ ತೆಗೆದಾಗ ಹಳಿ ಮೇಲೆಯೇ ಠಳಾಯಿಸಿದ್ದ ದುಷ್ಕರ್ಮಿಗಳು ತಾವು ತಂದಿದ್ದ ಸ್ಫೋಟಕ ಸಲಕರಣೆಗಳನ್ನು ಅಲ್ಲೇ ಬಿಟ್ಟು ಕೈಚೀಲದೊಂದಿಗೆ ದೂರದಲ್ಲಿ ನಿಂತಿದ್ದ ಕಪ್ಪು ಬಣ್ಣದ ಕಾರ್ ಹತ್ತಿ ಪರಾರಿಯಾಗಿದ್ದಾರೆ.
ಕಲ್ಲಿದ್ದಲು ಮೈನಿಂಗ್ನಲ್ಲಿ ರಂಧ್ರ ಕೊರೆಯಲು ಇಂಥ ಸ್ಫೋಟಕ ಬಳಸುವುದು ಇದೆ. ಆದರೂ ಸ್ಫೋಟಕದ ಸಾಮರ್ಥ್ಯ, ನಮೂನೆ ಬಗ್ಗೆ ತಜ್ಞರ ಪರಿಶೀಲನೆಯ ನಂತರವಷ್ಟೇ ಪಕ್ಕಾ ಮಾಹಿತಿ ಸಿಗಲಿದೆ. ಆದರೆ, ಇದು ಶಕ್ತಿಶಾಲಿ ಸ್ಫೋಟಕ.
- ಸಿಪಿಐ ಶಂಕರಗೌಡ ಪಾಟೀಲ್
ಬೃಹತ್ ವಿಧ್ವಂಸಕ ಕೃತ್ಯಕ್ಕೆ ಯೋಜಿಸಲಾಗಿತ್ತು?
ಬೆಳಗ್ಗೆ 7 ಗಂಟೆಗೆ ಈ ಮಾರ್ಗದಲ್ಲಿ ಪ್ಯಾಸೆಂಜರ್, ಫಲಕನಾಮಾ ಎಕ್ಸ್ಪ್ರೆಸ್, ಸಿಕಿಂದ್ರಾಬಾದ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು, ಹುಸೇನ್ ಸಾಗರ್ ಎಕ್ಸ್ಪ್ರೆಸ್ನಂಥ ಪ್ರಯಾಣಿಕರಿಂದ ತುಂಬಿರುತ್ತವೆ. ಸ್ಫೋಟಕ ಪತ್ತೆಯಾದ ಸ್ಥಳದಲ್ಲಿ ರೇಲ್ವೆ ಸೇತುವೆಗಳು ಇವೆ. ಹೀಗಾಗಿ ದುಷ್ಕರ್ಮಿಗಳು ರೇಲ್ವೆ ಹಳಿಯ ಸೇತುವೆಗಳನ್ನೇ ಆರಿಸಿಕೊಂಡು ಸ್ಫೋಟಕ್ಕೆ ಸಂಚು ರೂಪಿಸಿದ್ದು ಮೇಲ್ನೋಟಕ್ಕೆ ಖಚಿತವಾಗಿದೆ. ಕೇವಲ ಸ್ಫೋಟ ಮಾಡಿದರೆ ಹಾನಿ ಅಷ್ಟಾಗದು, ಸೇತುವೆ ಕುಸಿದಲ್ಲಿ ಹಳಿ ಸಂಪೂರ್ಣ ನಾಶವಾಗುತ್ತದೆ. ಆಗ ಹಾನಿಯ ಪ್ರಮಾಣ ಹೆಚ್ಚಾಗಬಹುದು ಎಂಬ ಲೆಕ್ಕಾಚಾರ ದುಷ್ಕರ್ಮಿಗಳದು ಎನ್ನುವುದು ಪೊಲೀಸರ ಶಂಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


