ಹಳಿ ಸ್ಫೋಟ ಸಂಚಿನ ಮಾಸ್ಟರ್ ಮೈಂಡ್ ಯಾರು?

ಗುಲ್ಬರ್ಗ: ರೈಲು ಹಳಿಗುಂಟ ಸ್ಫೋಟಕ ಹರಡಿ ಭಾರಿ ವಿಧ್ವಂಸಕ ಕೃತ್ಯ ಎಸಗುವ ಪ್ರಯತ್ನದ ಹಿಂದಿನ ಕಾಣದ ಕೈ ದುಷ್ಕರ್ಮಿಗಳದ್ದೋ, ನಕ್ಸಲರದ್ದೋ? ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಳಿ ಸ್ಫೋಟಿಸುವ ಉದ್ದೇಶವೇ ಆಗಿದ್ದರೆ ಡಿಟೋನೇಟರ್, ಬ್ಯಾಟರಿ ಸೇರಿದಂತೆ ಯಾವುದೇ ಜೋಡಣೆ ಇಲ್ಲದ ಸ್ಫೋಟಕಗಳನ್ನಷ್ಟೇ ಯಾಕೆ ಹರಡಲಾಗಿತ್ತು? ತಮ್ಮ ವಿಧ್ವಂಸಕ ಯೋಜನೆ ಅದ್ಹೇಗೆ ಕಾರ್ಯಗತವಾಗುತ್ತದೆ ಎಂಬುದನ್ನು ಪರೀಕ್ಷಿಸುವ ಪ್ರಯತ್ನ ದುಷ್ಕರ್ಮಿಗಳದ್ದಾಗಿತ್ತೆ? ಇದರಲ್ಲಿ ಯಶ ಕಂಡಿದ್ದರೆ ಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ವಿಧ್ವಂಸಕ ಕೃತ್ಯ ಎಸಗಲು ಅವರು ಅಣಿಗೊಳ್ಳುವವರಿದ್ದರೆ? ಚಿತ್ತಾಪುರ ಹಾಗೂ ಮಳಖೇಡ ರೈಲು ಮಾರ್ಗದಲ್ಲಿ ಹಳಿ ಸ್ಫೋಟಿಸುವ ಸಂಚಿನ ಪ್ರಕರಣದ ಹಿನ್ನೆಲೆಯಲ್ಲಿ ಉದ್ಭವವಾಗಿರುವ ಪ್ರಶ್ನೆಗಳಿವು.
ಶನಿವಾರ ಬೆಳಗ್ಗೆ 7 ಗಂಟೆಗೆ ವಿಧ್ವಂಸಕ ಕೃತ್ಯ ಬೆಳಕಿಗೆ ಬಂದಿದ್ದು, ಇದರ ಹಿಂದಿರುವ ಕೈಗಳ ಬಗ್ಗೆ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಜಿಲೆಟಿನ್ ಸ್ಫೋಟಕ ಬಳಸಿ ಮಳಖೇಡಕ್ಕೆ 2 ಕಿ.ಮೀ ಅಂತರದಲ್ಲಿನ ರೈಲು ಸೇತುವೆ ಮತ್ತು ಚಿತ್ತಾಪುರದಿಂದ 4 ಕಿ.ಮೀ ಅಂತರದ ಮೋಗಲಾ ಬಳಿ ಇರುವ ರೈಲು ಸೇತುವೆ ಸ್ಫೋಟಿಸಲು ಸಂಚು ನಡೆದಿತ್ತು ಎಂಬುದು ಅಲ್ಲಿ ನಡೆದಿರುವ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತದೆ.
ಮಳಖೇಡ ಹತ್ತಿರ 17.25 ಕಿ.ಮೀ ಹಳಿಯ ಮೇಲೆ ಶನಿವಾರ ಬೆಳಗ್ಗೆ 7 ಗಂಟೆಗೆ ಮತ್ತು ಚಿತ್ತಾಪುರ ದಿಂದ 4 ಕಿ.ಮೀ ಅಂತರದ ಮೋಗಲಾ ಹತ್ತಿರ 21.25 ಕಿ.ಮೀನಲ್ಲಿ ಬೆಳಗ್ಗೆ 10.15ಕ್ಕೆ ನಾಲ್ವರಿದ್ದ ದುಷ್ಕರ್ಮಿಗಳ ತಂಡ ಜಿಲೆಟಿನ್ ಮಾದರಿಯ ಸ್ಫೋಟಕ ಬಳಸಿ ಹಳಿ ಸ್ಫೋಟಕ್ಕೆ ಯತ್ನಿಸಿದ್ದಲ್ಲದೆ ರೇಲ್ವೆ ಕೀ ಮ್ಯಾನ್ ತುಳಜಾರಾಂ ಜೊತೆ ಮಾರಾಮಾರಿ ನಡೆಸಿದ್ದನ್ನು ಗಮನಿಸಿದರೆ ದುಷ್ಕೃತ್ಯ ಎಸಗುವುದೇ ತಂಡದ ಉದ್ದೇಶವಾಗಿತ್ತು ಎನ್ನಲಾಗುತ್ತಿದೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಅಪರಾಧ) ಎಂ.ಎನ್. ರೆಡ್ಡಿ, ಎಡಿಜಿಪಿ (ಆಂತರಿಕ ಭದ್ರತೆ) ಅಮರಕುಮಾರ ಪಾಂಡೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಚೆನ್ನೈ ರೈಲು ಸ್ಫೋಟದ ಘಟನೆಗೂ ಇದಕ್ಕೂ ಸಾಮ್ಯತೆ ಇರುವ ಬಗ್ಗೆ ಈಗಲೇ ಹೇಳಲಾಗದು. ತಜ್ಞರ ವರದಿ ಬಂದ ನಂತರ ಸ್ಪಷ್ಟವಾಗಿ ತಿಳಿಯಲಿದೆ. ಘಟನೆಗೆ ಕಾರಣರಾಗಿರುವ ದುಷ್ಕರ್ಮಿಗಳ ಪತ್ತೆಯನ್ನು ಆದಷ್ಟು ಶೀಘ್ರ ಮಾಡಲಾಗುವುದು.
ಟಿ ಎಂ.ಎನ್.ರೆಡ್ಡಿ, ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಅಪರಾಧ)
ಸಿಸಿ ಟೀವಿ ಕ್ಯಾಮೆರಾದತ್ತ ಪೊಲೀಸ್ ದೃಷ್ಟಿ
ಸ್ಫೋಟಕ್ಕೆ ಸಂಚು ರೂಪಿಸಿದ್ದ ತಂಡದ 4 ಜನ 35 ರಿಂದ 40 ವರ್ಷದವರಾಗಿದ್ದು, ಮರಾಠಿಯಲ್ಲಿ ಮಾತನಾಡುತ್ತಿದ್ದ ಅವರು, ಹೊರಗಡೆ ತೆಲಗು ಮಾತನಾಡುತ್ತಿದ್ದರು. ಟೀ ಶರ್ಟ್, ಜೀನ್ಸ್ ಪ್ಯಾಂಟ್ ಹಾಕಿದ್ದರು, ಕಪ್ಪು ಬಣ್ಣದ ಟಾಟಾ ಸುಮೋ ವಾಹನದಲ್ಲಿ ಆಗಮಿಸಿದ್ದರು ಎಂದು ದುಷ್ಕರ್ಮಿಗಳೊಂದಿಗೆ ಕಾದಾಡಿರುವ ಕೀ ಮ್ಯಾನ್ ತುಳಜಾರಾಂ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಪತ್ತೆಗೆ ಜಾಲ ಬೀಸಿದ್ದಾರೆ. ಕಪ್ಪು ಬಣ್ಣದ ಸುಮೋ ಎಲ್ಲಿಯಾದರೂ ಇಂಧನ ತುಂಬಿಸಿಕೊಂಡಿರಬಹುದೇ ಅಥವಾ ಟೋಲ್ ನಾಕಾದಲ್ಲಿ ಆ ವಾಹನ ಸಾಗಿಹೋದ ದೃಶ್ಯ ಸೆರೆಯಾಗಿದೆಯಾ ಎಂಬುದನ್ನು ತಿಳಿಯಲು ಪೊಲೀಸರು ವಾಗ್ದರಿ - ರಿಬ್ಬನಪಲ್ಲಿ ಹೆದ್ದಾರಿಯಲ್ಲಿ ಇರುವ ನಾಲ್ಕು ಟೋಲ್ ನಾಕಾಗಳಲ್ಲಿನ ಸೀಸಿ ಟೀವಿ ಕ್ಯಾಮೆರಾ ಹಾಗೂ ಇದೇ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ಗಳಲ್ಲಿನ ಸೀಸಿ ಟೀವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.
ನಕ್ಸಲರಿಗೆ ಈ ಹಿಂದೆ ಸುರಕ್ಷಿತ ತಾಣ
ಈ ಸಂಚಿನ ಹಿಂದೆ ನಕ್ಸಲ್ ಪಾತ್ರವಿದೆಯೆ ಎಂಬ ಶಂಕೆ ಮೂಡಿದೆ. ಹಿಂದೆಲ್ಲಾ ಈ ಪ್ರದೇಶದಲ್ಲಿ ನಕ್ಸಲರು ತಲೆಮರೆಸಿಕೊಂಡಿರುತ್ತಿದ್ದರು. ಅನೇಕ ಅಪರಾಧ ಕೆಲಸಗಳಿಗೂ ಈ ತಾಣವನ್ನು ಬಳಸಿದ್ದುಂಟು. ಇತ್ತೀಚಿನ ವರ್ಷಗಳಲ್ಲಿ ನಕ್ಸಲ್ ಚಟುವಟಿಕೆ ಇಲ್ಲಿ ವರದಿಯಾಗಿಲ್ಲವಾದರೂ ರೈಲು ಸ್ಫೋಟದೊಂದಿಗೆ ಮತ್ತೆ ಬಾಲ ಬಿಚ್ಚಲು ಮುಂದಾಗಿದ್ದರೆ? ಈ ಭಾಗದಲ್ಲಿ ರಕ್ತದೋಕುಳಿ ಹರಿಸಲು ಸಿದ್ಧತೆಯಲ್ಲಿದ್ದರೆ ಎಂಬ ಪ್ರಶ್ನೆಗಳೂ ಕಾಡುತ್ತಿವೆ.
- ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


