ಸಂಪುಟ ರಚನೆ: ಮೋದಿ ನಡೆ ಇನ್ನೂ ನಿಗೂಢ

ನವದೆಹಲಿ: ಸಂಪುಟ ರಚನೆ ವಿಚಾರದಲ್ಲಿ ಮೋದಿ ಮನಸ್ಸಿನಲ್ಲಿ ಏನಿದೆ ಎನ್ನುವುದು ಅವರ 'ಕೋರ್ ಟೀಂ'ನ ಊಹೆಗೂ ನಿಲುಕುತ್ತಿಲ್ಲ. ಈ ಸಂಬಂಧ ರಾಜನಾಥ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಜತೆ ಮೋದಿ ಸಮಾಲೋಚನೆ ನಡೆಸಿದ್ದಾರೆ. ಆದರೆ ಖಾತೆ ವಿಚಾರದಲ್ಲಿ ಮನದಿಂಗಿತ ಪ್ರಕಟಿಸಿಲ್ಲ.
ಮೂಲಗಳ ಪ್ರಕಾರ, ರಾಜನಾಥ ಸಿಂಗ್ಗೆ ಗೃಹ ಖಾತೆ ನೀಡುವ ಇರಾದೆ ಮೋದಿಗಿದೆ. ಶನಿವಾರ ಬಿಜೆಪಿ ಸಂಸದೀಯ ಮಂಡಳಿ ಸಭೆ ಮುಗಿಸಿ ವಾರಾಣಸಿಗೆ ರಾಜನಾಥ್ ಅವರನ್ನು ಕರೆದೊಯ್ದದ್ದು 'ಅವರೇ ಸೆಕೆಂಡ್ ಮ್ಯಾನ್' ಎನ್ನುವ ಸಂದೇಶ ನೀಡಲು ಎಂದು ವಿಶ್ಲೇಷಿಸಲಾಗುತ್ತಿದೆ. ಮೋದಿ ನಂತರ ಪ್ರಮಾಣ ಸ್ವೀಕರಿಸಲಿರುವುದು ಸಹ ರಾಜನಾಥ ಅವರೇ ಎನ್ನಲಾಗುತ್ತಿದೆ.
ಮಹತ್ವದ ಹಣಕಾಸು ಖಾತೆ ಅರುಣ್ ಜೇಟ್ಲಿ ಹೆಗಲೇರುವುದು ಖಚಿತ. ಜೇಟ್ಲಿ ಅಮೃತಸರದಲ್ಲಿ ಸೋತಿರಬಹುದು, ಆದರೆ ಅವರ ರಾಜ್ಯಸಭೆ ಸದಸ್ಯತ್ವ ಅವಧಿ ಇನ್ನೂ ಇದೆ.
ನಖ್ವಿ ಅದೃಷ್ಟ: ಸೋತಿರುವ ಬಿಹಾರದ ಶಹನವಾಜ್ ಹುಸೇನ್ಗೆ ಮಂತ್ರಿಪಟ್ಟ ನೀಡಿ, ನಂತರ ರಾಜ್ಯಸಭೆ ಸದಸ್ಯರನ್ನಾಗಿಸಲು ಅವರ ಬೆಂಬಲಿಗರು ಪ್ರದರ್ಶನ ನಡೆಸಿದ್ದಾರೆ. ಜೇಟ್ಲಿಗೆ ನೀಡಿದ ರಿಯಾಯಿತಿ ಶಹನವಾಜ್ಗೂ ಕಷ್ಟ. ಹೀಗಾಗಿ ಅಲ್ಪಸಂಖ್ಯಾತ ಕೋಟಾದಿಂದ ರಾಜ್ಯಸಭೆ ಸದಸ್ಯ ಮುಖ್ತಾರ್ ಅಬ್ಬಾಸ್ ನಖ್ವಿಗೆ ಸಾಧ್ಯತೆ ಹೆಚ್ಚು.
ಪಕ್ಷದ ಏಕೈಕ ಸಿಖ್ ಸಂಸದ, ಪಶ್ಚಿಮ ಬಂಗಾಳ ಡಾರ್ಜಿಲಿಂಗ್ನ ಎಸ್.ಎಸ್.ಅಹ್ಲುವಾಲಿಯಾ ಸಹ ಸಂಪುಟ ಸೇರಲಿದ್ದಾರೆ. ವರುಣ್ ಗಾಂಧಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೇ ಉಳಿಸಿ ಮನೇಕಾ ಗಾಂಧಿಗೆ ಸ್ಥಾನ ನೀಡಲು ಟೀಂ ಒಲವು ತೋರಿದೆ.
ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಹೆಚ್ಚು ಸ್ಥಾನ ಗಳಿಸಿಕೊಟ್ಟ ಉತ್ತರ ಪ್ರದೇಶ, ಬಿಹಾರಗಳಿಗೆ ಹೆಚ್ಚು ಪ್ರಾತಿನಿಧ್ಯ ಸಿಗಲಿದೆ. 17 ಸಂಸದರ ನೀಡಿರುವ ಕರ್ನಾಟಕಕ್ಕೆ 6 ಸ್ಥಾನದ ಸಾಧ್ಯತೆ ಇದೆ.
ಆರ್ಎಸ್ಎಸ್ ಮುಂದೇನು ಮಾಡಬಹುದು ಎನ್ನುವ ಕುತೂಹಲ ಕಾಂಗ್ರೆಸ್ಗಿದೆ. ವಾಜಪೇಯಿ ಸರ್ಕಾರ ರಚಿಸುವಾಗಲೂ ಇಂಥ ವದಂತಿ ಹರಡಿಸಲಾಗಿತ್ತು. ನನ್ನ ಸರ್ಕಾರಕ್ಕೆ ನಾನೇ ರಿಮೋಟ್ ಕಂಟ್ರೋಲ್ ಎಂದು ಅಟಲ್ಜಿ ಎಲ್ಲರ ಬಾಯಿ ಮುಚ್ಚಿಸಿದ್ದರು. ಈಗಲೂ ಸಹ ಆರ್ಎಸ್ಎಸ್ ಸರ್ಕಾರವನ್ನು ರಿಮೋಟ್ ಕಂಟ್ರೋಲರ್ ರೀತಿ ನಿಯಂತ್ರಿಸುವುದಿಲ್ಲ.
- ರಾಮ್ ಮಾಧವ್, ಆರ್ಎಸ್ಎಸ್ ರಾಷ್ಟ್ರೀಯ ವಕ್ತಾರ
ಸುಷ್ಮಾಗೆ ಏನು?
ಸುಷ್ಮಾ ಸ್ವರಾಜ್ ಸಂಪುಟ ಸೇರುವುದು ಖಚಿತವಾದರೂ ಖಾತೆ ವಿಚಾರದಲ್ಲಿ ಅಸ್ಟಷ್ಟತೆ ಇದೆ. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಸುಷ್ಮಾ ಸ್ವರಾಜ್ ಅವರು ತಾನು ಮೋದಿ ಸಂಪುಟ ಸೇರಲಾರೆ ಎಂದು ತಿಳಿಸಿದ್ದರು. ಆದರೆ ರಾಜನಾಥ, ಜೇಟ್ಲಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರೆನ್ನಲಾಗಿದೆ. ಈಗ ಸುಷ್ಮಾ ವಿದೇಶಾಂಗ ಖಾತೆ ಅಪೇಕ್ಷಿಸಿದ್ದಾರೆ. ವಿದೇಶಾಂಗ ಸಚಿವರು ಭದ್ರತೆ ಕುರಿತ ಸಂಪುಟ ಸಮಿತಿ ಸದಸ್ಯರೂ ಆಗಿರುತ್ತಾರೆ. ಆದರೆ ಮೋದಿ ಈ ಖಾತೆಯನ್ನು ಸುಷ್ಮಾಗೆ ನೀಡುವುದು ಅನುಮಾನ. ಹೀಗಾಗಿ ಸಂಪುಟದಲ್ಲಿ ಸುಷ್ಮಾ ಪಾತ್ರವೇನು ಎನ್ನುವುದು ಸದ್ಯಕ್ಕೆ ನಿಗೂಢ.
ಆಡ್ವಾಣಿ ಶಾಂತ
ತಮ್ಮ ವಿರುದ್ಧ ಮುನಿಸಿಕೊಂಡಿದ್ದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರನ್ನು ಓಲೈಸುವ ಪ್ರಯತ್ನವನ್ನೂ ಮೋದಿ ಭಾನುವಾರ ನಡೆಸಿದರು. ದೆಹಲಿಯ ಗುಜರಾತ್ ಭವನದಲ್ಲಿ ತಂಗಿದ್ದ ಅವರು, ಬೆಳಗ್ಗೆಯೇ ಆಡ್ವಾಣಿ ನಿವಾಸಕ್ಕೆ ತೆರಳಿ ದೀರ್ಘ ಸಮಾಲೋಚನೆ ನಡೆಸಿದರು. ಆಡ್ವಾಣಿ ಮುಂದಿನ ಪಾತ್ರದ ಕುರಿತು ಚರ್ಚಿಸಲಾಯಿತು, ಲೋಕಸಭೆ ಸ್ಪೀಕರ್ ಆಗಲು ಆಡ್ವಾಣಿ ಸಮ್ಮತಿಸಿದರು ಎಂದು ತಿಳಿದುಬಂದಿದೆ. ಶನಿವಾರ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಅವರು ಆಡ್ವಾಣಿ ಕಾಲಿಗೆರಗಿ ಆಶೀರ್ವಾದ ಪಡೆದಿದ್ದರು.
ಸಂಘದಿಂದ ರಿಮೋಟ್ ಕಂಟ್ರೋಲ್ ಇಲ್ಲ
ಸಂಪುಟ ರಚನೆಯಲ್ಲಿ ತನ್ನ ಪಾತ್ರವಿಲ್ಲ. ಆದರೆ ಮೋದಿ ಬಯಸಿದರೆ ಸಲಹೆ ನೀಡಲು ಸಿದ್ಧ ಎಂದು ಹೇಳಿರುವ ಆರ್ಎಸ್ಎಸ್, ತಾನು ಮೋದಿ ಸಂಪುಟದ 'ರಿಮೋಟ್ ಕಂಟ್ರೋಲರ್' ಅಲ್ಲ ಎಂದೂ ಸ್ಪಷ್ಟಪಡಿಸಿದೆ. ಫಲಿತಾಂಶ ಪ್ರಕಟ ಬಳಿಕ ಮೋದಿ ಮತ್ತು ರಾಜನಾಥ ಸಿಂಗ್ ಆರ್ಎಸ್ಎಸ್ ವರಿಷ್ಠ ಮೋಹನ್ ಭಾಗವತ್ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಸಂಪುಟ ಸೇರಲು ಕೆಲ ನಾಯಕರು ಆರ್ಎಸ್ಎಸ್ ಕೇಂದ್ರಕ್ಕೆ ಎಡತಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 'ಸಂಪುಟ ರಚನೆಗೆ ಆರ್ಎಸ್ಎಸ್ ಯಾವುದೇ ಮಾರ್ಗದರ್ಶಿ ಸೂತ್ರ ನೀಡಿಲ್ಲ. ಸರ್ಕಾರ ಮತ್ತು ರಾಜಕೀಯ ವಿಚಾರದಲ್ಲಿ ಮೂಗು ತೂರಿಸುವುದೂ ಇಲ್ಲ' ಎಂದು ಸ್ಪಷ್ಟಪಡಿಸಿದೆ.
ಮತ್ತೆ ಆಪ್ ಸರ್ಕಾರ?
ಲೋಕಸಭೆ ಚುನಾವಣೆಯಲ್ಲಿ ನಡೆಯದ ಆಮ್ ಆದ್ಮಿ ಪಕ್ಷದ ಆಟ
ದೆಹಲಿಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಕೇಜ್ರಿವಾಲ್ ಸರ್ಕಾರ ಸಾಧ್ಯತೆ?
ಆಪ್ ಮೂಲಗಳಿಂದ ಮಾಹಿತಿ, ಇಂಥ ಪ್ರಸ್ತಾಪವಿಲ್ಲ ಎಂದ ಕಾಂಗ್ರೆಸ್
ದೆಹಲಿ ವಿಧಾನಸಭೆ ವಿಸರ್ಜಿಸಿ, ಚುನಾವಣೆಗೆ ಹೋಗೋಣ ಎಂದ ಹರ್ಷವರ್ಧನ್
ಸರ್ಕಾರ ರಚನೆ ಮಾಡಲ್ಲ, ಚುನಾವಣೆ ಎದುರಿಸುತ್ತೇವೆ: ಮನೀಷ್ ಸಿಸೋಡಿಯಾ
ಬಿಹಾರ ಗಜಿಬಿಜಿ
ಬಿಹಾರದಲ್ಲಿ ಜೆಡಿಯು - ಕಾಂಗ್ರೆಸ್- ಆರ್ಜೆಡಿ ಸಮ್ಮಿಶ್ರ ಸರ್ಕಾರ?
ಶರದ್ ಯಾದವ್ ಪ್ರಸ್ತಾಪಕ್ಕೆ ಬೆಂಬಲ
ರಾಜಿನಾಮೆ ಪ್ರಹಸನ, ಭಾನುವಾರ ಸಂಜೆ ಜೆಡಿಯು ಶಾಸಕಾಂಗ ಸಭೆ
ನಿತೀಶ್ ಕುಮಾರ್ ಅವರನ್ನೇ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ
ಶಾಸಕರ ಒತ್ತಡ, ರಾಜಿನಾಮೆ ವಾಪಸ್ಗೆ ಸೋಮವಾರದ ಗಡುವು ಕೋರಿಕೆ
ಮೈತ್ರಿ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದ ಲಾಲು
ಮೂವರು ಆರ್ಜೆಡಿ ಶಾಸಕರ ರಾಜಿನಾಮೆ
ಕೊಟ್ಟು, ವಾಪಸ್
ತಮಿಳುನಾಡಿನಲ್ಲಿ ಡಿಎಂಕೆ ಶೂನ್ಯ ಸಾಧನೆ ಹಿನ್ನೆಲೆ
ಡಿಎಂಕೆಯ ಎಲ್ಲ ಹುದ್ದೆಗಳಿಗೆ ಸ್ಟಾಲಿನ್ ರಾಜಿನಾಮೆ
ಸೋಲಿನ ಹೊಣೆ ಹೊತ್ತು ರಾಜಿನಾಮೆ ಎಂದ ಸ್ಟಾಲಿನ್
ಸಂಜೆ ವೇಳೆಗೆ ಪರಿಸ್ಥಿತಿ ಬದಲು, ರಾಜಿನಾಮೆ ವಾಪಸ್
ಕರುಣಾನಿಧಿ ರಾಜಿನಾಮೆ ಸ್ವೀಕರಿಸದಿದ್ದರಿಂದ ಹಿಂತೆಗೆತ
ಮಾಧ್ಯಮ ಪ್ರತಿನಿಧಿಗಳ ಮೇಲೆ ಡಿಎಂಕೆ ಕಾರ್ಯಕರ್ತರ ಕಲ್ಲು
ಆನಂದಿಬೆನ್ ಸಿಎಂ?
21ಕ್ಕೆ ಗುಜರಾತ್ ವಿಧಾನಸಭೆಯ ವಿಶೇಷ ಅಧಿವೇಶನ
ನಿಯೋಜಿತ ಪ್ರಧಾನಿ ಮೋದಿಗೆ ಅಭಿನಂದನೆ
ಅಂದೇ ಮೋದಿ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ
ನರೇಂದ್ರ ಮೋದಿ ಸ್ಥಾನಕ್ಕೆ ಬೆಂಬಲಿಗರಾದ ಆನಂದಿಬೆನ್ ನಿಯುಕ್ತಿ
ಮುಖ್ಯಮಂತ್ರಿ ಆರಿಸಲು ಮೋದಿಗೆ ಅಧಿಕಾರ ಕೊಟ್ಟಿದ್ದ ಬಿಜೆಪಿ
ಮತ್ತೆ ನವೀನ್ ಸಿಎಂ
ಸತತ 4ನೇ ಬಾರಿಗೆ ಸಿಎಂ ಆಗುತ್ತಿರುವ ನವೀನ್ ಪಟ್ನಾಯಕ್
ಭುವನೇಶ್ವರದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ನಾಯಕನಾಗಿ ನವೀನ್ ಆಯ್ಕೆ
2000 ದಿಂದ ಒಡಿಶಾದ ಸಿಎಂ ಆಗಿರುವ ಪಟ್ನಾಯಕ್
147 ಕ್ಷೇತ್ರಗಳ ಪೈಕಿ 117 ಸ್ಥಾನ ಗೆದ್ದಿರುವ ಬಿಜೆಡಿ
ಕಾಂಗ್ರೆಸ್ 16, ಬಿಜೆಪಿ 10 ಸ್ಥಾನಗಳಲ್ಲಿ ಗೆಲವು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


