ಪ್ರಧಾನ ಸುದ್ದಿ

ಎಳೆ ಮಕ್ಕಳಿಗೆ ದೌರ್ಜನ್ಯದ ಲೈಂಗಿಕತೆ

Published On :

ಬೆಂಗಳೂರು: ಜಗತ್ತು ಏನೆಂಬುದನ್ನೇ ಅರಿಯದ ಒಂದನೇ ತರಗತಿ ಮಕ್ಕಳಿಗೆ ಲೈಂಗಿಕ ದೌರ್ಜನ್ಯದ ಪಾಠ ಹೇಳಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮುಂದಾಗಿವೆ. ಅಷ್ಟೇ ಅಲ್ಲ, ಕಾನೂನಿನ ಕಲಂಗಳನ್ನು ಮುದ್ರಿಸಿ ಅವರಿಗೆ ನೀಡುತ್ತಿದೆ.
ರಾಜ್ಯದಲ್ಲಿರುವ 65 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲೈಂಗಿಕ ಕಾನೂನಿನ ಮಾಹಿತಿಯ ಕರಪತ್ರ ಮುದ್ರಿಸಿ ನೀಡಲು ಕೋಟ್ಯಂತರ ರುಪಾಯಿ ವೆಚ್ಚ ಮಾಡಲೂ ನಿರ್ಧರಿಸಿದೆ. ಇದರಲ್ಲಿ ಈಗಾಗಲೇ ಲಕ್ಷಾಂತರ ವೆಚ್ಚವನ್ನೂ ಮಾಡಲಾಗಿದೆ.
1ರಿಂದ 10ನೇ ತರಗತಿ ಮಕ್ಕಳಿಗೆ ಲೈಂಗಿಕ ದೌರ್ಜನ್ಯದ ಅರಿವು ನೀಡುವ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಈಗಾಗಲೇ ಕರಪತ್ರ ಸಿದ್ಧಪಡಿಸಿದೆ. ಆದರೆ, ಆ ಕರಪತ್ರದಲ್ಲಿ ಲೈಂಗಿಕ ದೌರ್ಜನ್ಯದ ಸೂಕ್ತ ಮಾಹಿತಿಯೇ ಇಲ್ಲ. ಪ್ರಾಥಮಿಕ ಮಕ್ಕಳಿಗೆ ಅರ್ಥವಾಗುವಂತಹ ಮಾಹಿತಿಯೇ ಇಲ್ಲ. ಬದಲಾಗಿ ಪ್ರೌಢಶಾಲಾ ಮಕ್ಕಳಿಗೆ ಮಾತ್ರ ಅರ್ಥವಾಗುವಂತಹ ಮಾಹಿತಿಗಳಿವೆ.
ಆದರೂ ಇದನ್ನು ಒಂದನೇ ತರಗತಿ ಮಕ್ಕಳಿಂದ 10ನೇ ತರಗತಿ ಮಕ್ಕಳಿಗೆ ನೀಡಲು ಉದ್ದೇಶಿಸಿರುವುದು ಮಾತ್ರ ವಿಪರ್ಯಾಸ. ಆ ಕರಪತ್ರದಲ್ಲಿರುವ ಮಾಹಿತಿ ಹಿರಿಯ ವಿದ್ಯಾರ್ಥಿಗಳಿಗೇ ಅರ್ಥವಾಗುವುದು ಕಷ್ಟವಿರುವಾಗ ಲೈಂಗಿಕ ದೌರ್ಜನ್ಯ ಎಂದರೇನು ಎಂಬುದನ್ನೇ ತಿಳಿಯದ ಸಣ್ಣ ಮಕ್ಕಳಿಗೆ ಅಂದರೆ 1ನೇ ತರಗತಿ ಮಗುವಿಗೂ ಈ ಬಗ್ಗೆ ಅರಿವು ಮೂಡಿಸಲು ಇಲಾಖೆ ಸಜ್ಜಾಗಿದೆ.
ಸುಲಭವಾಗಿ ಅರ್ಥವಾಗದು: ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಆಯೋಗ ಹಮ್ಮಿಕೊಂಡಿರುವ ಈ ಕಾರ್ಯ ಶ್ಲಾಘನೀಯ. ಆದರೆ, ಅದರಲ್ಲಿರುವ ಮಾಹಿತಿ ಸುಲಭವಾಗಿ ಮಕ್ಕಳಿಗೆ ಅರ್ಥವಾಗುವುದಿಲ್ಲ. ಹಾಗಾಗಿ ಅದನ್ನು ಮಕ್ಕಳ ಭಾಷೆಯಲ್ಲಿ ಮತ್ತಷ್ಟು ಸರಳವಾಗಿ ಮುದ್ರಿಸುವ ಕೆಲಸ ಆಗಬೇಕು. ಮೊದಲು ಮಗುವಿಗೆ ಲೈಂಗಿಕ ಕಿರುಕುಳ ಎಂದರೇನು ಎಂದು ಅರಿವು ಮೂಡಿಸಬೇಕು. ನೇರವಾಗಿ ಕರಪತ್ರ ನೀಡಿದರೆ ಮಕ್ಕಳಿಗೆ ತಿಳಿಯುವುದಿಲ್ಲ. ಕನಿಷ್ಠ ಒಂದು ರೇಖಾಚಿತ್ರವೂ ಇದರಲ್ಲಿಲ್ಲ.
ಅಲ್ಲದೆ ಕರಪತ್ರದಲ್ಲಿ ಚಿತ್ರಗಳಿಲ್ಲ, ಸುಲಭ ಭಾಷೆಯಲ್ಲಿಲ್ಲ. ಅಲ್ಲದೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ ಮತ್ತು ನಿಯಮಗಳು 2012ರ ಮಾಹಿತಿಯೇ ಹೆಚ್ಚು ತುಂಬಿವೆ. ಹಾಗಾಗಿ ಇದು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಸರ್ಕಾರಿ ಹಾಗೂ ಕಾನೂನು ಭಾಷೆಯಲ್ಲೇ ಕರಪತ್ರ ಮುದ್ರಣವಾಗಿದೆ.
ಪ್ರತಿ ಮಗುವಿಗೆ: ಲೈಂಗಿಕ ದೌರ್ಜನ್ಯದ ಅರಿವು ಮೂಡಿಸಲು ಕೈಪಿಡಿ ಅಥವಾ ಕರಪತ್ರ ಸಿದ್ಧಪಡಿಸಿದ್ದು, ಅದರಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಈ ಮೂಲಕ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣ ತಡೆಗಟ್ಟಲು ಸಿದ್ಧತೆ ನಡೆದಿದೆ. ಲೈಂಗಿಕ ದೌರ್ಜನ್ಯ ತಡೆ ಕುರಿತ ಮಾಹಿತಿ/ಸಲಹೆ ಇರುವ ಕರಪತ್ರ ರಾಜ್ಯದ ಎಲ್ಲ ಶಾಲೆಯ ಪ್ರತಿ ಮಗುವಿನ ಕೈಗೂ ಸಿಗಲಿದೆ. ಈ ಕೆಲಸವನ್ನು ಶೈಕ್ಷಣಿಕ ವರ್ಷ ಆರಂಭದ ದಿನಗಳಲ್ಲೇ ವಿತರಿಸಲಾಗುತ್ತದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ ಮತ್ತು ನಿಯಮಗಳು 2012 (ಪೋಸ್ಕೋ ಕಾಯ್ದೆ ಮತ್ತು ನಿಯಮಗಳು) ಅಡಿಯಲ್ಲಿ ಮಗುವಿನ ಮೇಲಾಗುವ ಲೈಂಗಿಕ ದೌರ್ಜನ್ಯ ಮತ್ತು ಶಿಕ್ಷೆ ಬಗ್ಗೆಯೂ ಕರಪತ್ರದಲ್ಲಿ ಮಾಹಿತಿ ಇರುತ್ತದೆ. ಅದಕ್ಕಾಗಿ ಆಯೋಗ ಲಕ್ಷಾಂತರ ರುಪಾಯಿ ವ್ಯಯಿಸಿ ಮಕ್ಕಳಿಗೆ ಕರಪತ್ರ ಸಿದ್ಧಪಡಿಸಿದ್ದು, ಅತಿಶೀಘ್ರದಲ್ಲಿ ಈ ಕರಪತ್ರಗಳು ಮಕ್ಕಳ ಕೈಸೇರಲಿವೆ.
ಬಿಇಓ ಮುಖಾಂತರ ಶಾಲೆಗೆ: ಶಾಲಾ ಮಕ್ಕಳಿಗೆ ನೀಡಬೇಕಿರುವ ಕರಪತ್ರಗಳು ಸಿದ್ಧವಾಗಿದ್ದು, ಆಯೋಗವು ನೇರವಾಗಿ ಮಕ್ಕಳಿಗೆ ಕರಪತ್ರ ತಲುಪಿಸುವುದಿಲ್ಲ. ಬದಲಾಗಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಓ) ತಲುಪಿಸುತ್ತದೆ. ನಂತರ ಅಲ್ಲಿಂದ ಎಲ್ಲ ಶಾಲೆಗಳಿಗೂ ಕಳುಹಿಸಿಕೊಡಲಾಗುತ್ತದೆ.
ಮೊದಲ ಹಂತದಲ್ಲಿ ಒಂದರಿಂದ 10ನೇ ತರಗತಿವರೆಗಿನ ಸರ್ಕಾರಿ ಶಾಲಾ ಮಕ್ಕಳಿಗೆ ಕರಪತ್ರ ನೀಡಲಾಗುತ್ತದೆ. ನಂತರ 2ನೇ ಹಂತದಲ್ಲಿ ಖಾಸಗಿ ಶಾಲೆಗಳಿಗೆ ನೀಡಲಾಗುತ್ತದೆ. ಅಗತ್ಯಬಿದ್ದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಅಂತಹ ಘಟನೆ ನಡೆದರೆ ಕೈಗೊಳ್ಳಬೇಕಾದ ಕಾನೂನು ಕ್ರಮದ ಬಗ್ಗೆಯೂ ತಿಳಿಸಲಾಗಿದೆ ಎನ್ನುತ್ತಾರೆ ಆಯೋಗದ ಹಿರಿಯ ಅಧಿಕಾರಿಗಳು.

ಪೋಷಕರು ತಿಳಿಹೇಳಲಿ

ರಾಜ್ಯದಲ್ಲಿ ಸುಮಾರು 65 ಸಾವಿರ ಶಾಲೆಗಳಿದ್ದು, ಜಿಲ್ಲೆಗೆ ಲಕ್ಷಗಟ್ಟಲೆ ವೆಚ್ಚ ತಗಲುತ್ತದೆ. ಮೊದಲನೇ ಹಂತದಲ್ಲಿ ಒಟ್ಟು 10 ಲಕ್ಷದಲ್ಲಿ ಒಂದೂವರೆ ಲಕ್ಷ ಕರಪತ್ರ ಸಿದ್ಧವಾಗಿವೆ. ಎರಡನೇ ಹಂತದಲ್ಲಿ ಮತ್ತಷ್ಟು ಕರಪತ್ರ ಸಿದ್ಧಪಡಿಸಲಾಗುತ್ತದೆ. ಹೀಗೆ ಹಂತಹಂತವಾಗಿ ಎಲ್ಲ ಶಾಲಾ ಮಕ್ಕಳಿಗೂ ಕರಪತ್ರ ತಲುಪಿಸಲಾಗುತ್ತದೆ. ಪೋಷಕರು ಕರಪತ್ರದಲ್ಲಿರುವುದನ್ನು ಮಕ್ಕಳಿಗೆ ತಿಳಿಸಿದರೆ ಮತ್ತಷ್ಟು ಅನುಕೂಲವಾಗುತ್ತದೆ. ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಗಟ್ಟುವುದು ಇದರ ಉದ್ದೇಶ. ಕರಪತ್ರ ಹೊರತುಪಡಿಸಿ ಈ ಬಗ್ಗೆ ಬೇರೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವುದಿಲ್ಲ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಎಚ್.ಆರ್. ಉಮೇಶ್ ಆರಾಧ್ಯ ಹೇಳುತ್ತಾರೆ.

ಕರಪತ್ರದಲ್ಲಿ ಇರುವ ಮಾಹಿತಿ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಹಾಗಾಗಿ ಅದರಲ್ಲಿನ ಮಾಹಿತಿ ಮಕ್ಕಳಿಗೆ ಅರ್ಥವಾಗುವಂತೆ ಇದ್ದರೆ ಉತ್ತಮ. ಕೇವಲ ಕಾನೂನು ಮಾಹಿತಿ ಇದ್ದರೆ ಪ್ರಯೋಜನವಾಗುವುದಿಲ್ಲ.
-ನಾಗಸಿಂಹ ಜಿ.ರಾವ್. ಆರ್‌ಟಿಇ ಕಾರ್ಯಪಡೆ ಮುಖ್ಯಸ್ಥ

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.