ಜಾಮೀನು ನಿರಾಕರಿಸಿ ಜೈಲಿಗೆ ಹೋದ ಕೇಜ್ರಿ

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಬಿಜೆಪಿ ನಾಯಕ ನಿತಿನ್ ಗಡ್ಕರಿ ಸಲ್ಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಜಾಮೀನು ಪಡೆಯಲು ನಿರಾಕರಿಸಿದ ಆಪ್ ನಾಯಕ ಅರವಿಂದ ಕೇಜ್ರಿವಾಲ್ರನ್ನು 2 ದಿನ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
ದೆಹಲಿ ನ್ಯಾಯಾಲಯ ಮೇ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ನ್ಯಾಯಾಲಯದ ಆದೇಶದ ನಂತರ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿಗೆ ರವಾನಿಸಲಾಗಿದೆ. ಚುನಾವಣೆಗೂ ಮುನ್ನ ಭ್ರಷ್ಟ್ರರ ಪಟ್ಟಿ ಬಿಡುಗಡೆ ಮಾಡಿದ್ದ ಅರವಿಂದ್ ಕೇಜ್ರಿವಾಲ್ ನಿತಿನ್ ಗಡ್ಕರಿ ಅವರ ಹೆಸರನ್ನು ಸೇರಿಸಿದ್ದರು. ನಿತಿನ್ ಗಡ್ಕರಿ ದೆಹಲಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾದೀಶರಾದ ಗೋಮತಿ ಮನೋಚ, 10 ಸಾವಿರ ವೈಯಕ್ತಿಕ ಬಾಂಡ್ ನೀಡಿ ಜಾಮೀನು ಪಡೆಯುವಂತೆ ಕೇಜ್ರಿವಾಲ್ಗೆ ಸೂಚಿಸಿದರು. ಆದರೆ, ಅವರು ಅದಕ್ಕೆ ಒಪ್ಪಲಿಲ್ಲ. ನಾನೇಕೆ ಜಾಮೀನು ಪಡೆಯಲಿ ಎಂದು ಪ್ರಶ್ನಿಸಿದರು. ಅನಿವಾರ್ಯವಾಗಿ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದರು. ಕೇಜ್ರಿವಾಲ್ರನ್ನು ಜೈಲಿಗೆ ಹಾಕಿದ್ದನ್ನು ಅವರ ನಿವಾಸ, ತಿಹಾರ್ ಜೈಲಿನ ಮುಂಭಾಗದಲ್ಲಿ ಆಪ್ ಕಾರ್ಯಕರ್ತರು ಪ್ರತಿಭಟಿದರು.
ತಂತ್ರಗಾರಿಕೆ: ಕೇಜ್ರಿವಾಲ್ ಜಾಮೀನು ಪಡೆಯಲು ನಿರಾಕರಿಸಿದ್ದಕ್ಕೆ ಕಾರಣ ಸ್ಪಷ್ಟ. ಪಕ್ಷವನ್ನು ದೆಹಲಿ ಅಸೆಂಬ್ಲಿ ಚುನಾವಣೆಗೆ ಸಿದ್ದಗೊಳಿಸಬೇಕಿದೆ. ಭ್ರಷ್ಟಾಚಾರ ವಿರುದ್ಧ ಹೋರಾಡಿ ಜೈಲಿಗೆ ಹೋಗಿ ಬಂದೆ ಎಂದು ಪ್ರಚಾರ ಮಾಡುವ ತಂತ್ರವೂ ಅವರದ್ದು.
ಹಜಾರೆ ಇದ್ದ ಸೆಲ್ನಲ್ಲಿ ಕೇಜ್ರಿ
2011ರಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಇದ್ದ ಸೆಲ್ನಲ್ಲಿ ಕೇಜ್ರಿವಾಲ್ರನ್ನು ಇರಿಸಲಾಗುತ್ತದೆ. ಸೆಲ್ ಸಂಖ್ಯೆ 4ರಲ್ಲಿ ಅವರಿಗೆ ಜೈಲಿನ ನಿಗದಿತ ಆಹಾರವನ್ನೇ ನೀಡಲಾಗುತ್ತದೆ. 2 ದಿನ ಅವರು ನೆಲದಲ್ಲೇ ನಿದ್ರಿಸಬೇಕಾಗಿದೆ. 2011ರಲ್ಲಿ ಲೋಕಪಾಲ ಜಾರಿಗಾಗಿ ಹೋರಾಟ ನಡೆಸಿದ್ದ ಸಂದರ್ಭದಲ್ಲಿ ಬಂಧನಕ್ಕೊಳಗಾಗಿದ್ದ ಹಜಾರೆ ಅವರನ್ನು ಇದೇ ಸೆಲ್ನಲ್ಲಿರಿಸಲಾಗಿತ್ತು.
ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ ನೀಡುವುದಿಲ್ಲ ಎನ್ನುವುದು ಸ್ಪಷ್ಟ. ಕೇಜ್ರಿವಾಲ್ ಅಧಿಕಾರಕ್ಕಾಗಿ ಹಂಬಲಿಸುತ್ತಿದ್ದಾರೆ. ಕೇಜ್ರಿವಾಲ್ ಜನಲೋಕಪಾಲ ಮತ್ತು ಇತರ ಯಾವುದೇ ವಿಚಾರಗಳಿಗೆ ಚಿಂತೆ ಮಾಡುತ್ತಿಲ್ಲ. ಕೋರ್ಟ್ನಲ್ಲಿ ಅವರ ವರ್ತನೆಯನ್ನು ಖಂಡಿಸುತ್ತೇವೆ.
-ಮುಕೇಶ್ ಶರ್ಮಾ, ದೆಹಲಿ ಕಾಂಗ್ರೆಸ್ ವಕ್ತಾರ
ಕೇಜ್ರಿವಾಲ್ ಹೊಸ ರಾಜಕೀಯ ನಾಟಕ ನಡೆಸಲು ಹೊರಟಿದ್ದಾರೆ. ಅವರ ನಾಟಕವನ್ನು ಜನರು ತಿರಸ್ಕರಿಸಿದ್ದರೂ ಮತ್ತೂ ಅದನ್ನೇ ಮುಂದುವರಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಇದರಿಂದ ಅವರಿಗೆ ಯಾವುದೇ ರೀತಿಯ ಅನುಕಂಪ ಸಿಗುವುದಿಲ್ಲ.
-ಡಾ.ಹರ್ಷವರ್ಧನ್, ಬಿಜೆಪಿ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


