ಪ್ರಧಾನ ಸುದ್ದಿ

ವರುಣನ ಆರ್ಭಟಕ್ಕೆ ನಗರ ತತ್ತರ

ವರುಣನ ಆರ್ಭಟಕ್ಕೆ ನಗರ ತತ್ತರ
Published On :

-ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು

ಬೆಂಗಳೂರು:
ಬೇಸಿಗೆ ಝಳದಿಂದ ಬಸವಳಿದು ಹೋಗಿದ್ದ ನಗರದ ದಕ್ಷಿಣ-ಪೂರ್ವ ಭಾಗದಲ್ಲಿ ಬುಧವಾರ ಭಾರಿ ಮಳೆ ಸುರಿದಿದ್ದು, ಜನಜೀವನವನ್ನು ದುಸ್ತರಗೊಳಿಸಿತು. ಹತ್ತಾರು ಮರಗಳು ಬುಡಮೇಲಾದರೆ, ವಿದ್ಯುತ್ ಕಂಬಗಳೂ ಧರೆಗುರುಳಿದವು. ದಕ್ಷಿಣ ಭಾಗದ ಬಹುತೇಕ ಪ್ರದೇಶಗಳಲ್ಲಿ ಕತ್ತಲೆ ಆವರಿಸಿತು.
ಮಳೆಗೆ ಕಂಗಾಲು: ಭಾರಿ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿತು. ಬೆಂಗಳೂರು ದಕ್ಷಿಣ ಭಾಗದ ಹನುಮಂತನಗರ, ಎನ್.ಆರ್.ಕಾಲೊನಿ, ವಿದ್ಯಾಪೀಠ, ಶ್ರೀನಿವಾಸನಗರ, ಶ್ರೀನಗರ, ಗಿರಿನಗರ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಜನರು ಪರದಾಡುವಂತಾಯಿತು.
ಮಳೆ ಮತ್ತು ಗಾಳಿ ರಭಸಕ್ಕೆ ವಿದ್ಯುತ್ ಕಂಬಗಳೂ ನೆಲಕಚ್ಚಿದ್ದರಿಂದ ಹನುಮಂತನಗರ, ಬನಶಂಕರಿ ಸುತಮುತ್ತ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಇದರಿಂದ ಬೆಂಗಳೂರು ದಕ್ಷಿಣ ಭಾಗವೇ ಕತ್ತಲಲ್ಲಿ ಮುಳುಗಿತು. ಒಟ್ಟಾರೆ ನಗರದಲ್ಲಿ ಸುಮಾರು 53 ಮಿ.ಮೀವರೆಗೂ ಮಳೆ ಸುರಿದಿದ್ದು, ಇದೇ ರೀತಿ ಮಳೆ ಗುರುವಾರವೂ ಮುಂದುವರಿಯುವ ಸಾಧ್ಯತೆ ಇದೆ. ಅಲ್ಲದೆ ಈ ವಾರ ಪೂರ್ಣ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆ ಮಳೆ, ಹೇಗಿತ್ತು?: ಸಂಜೆ 6ರ ಸಮಯದಲ್ಲಿ ಬೆಂಗಳೂರು ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಆರಂಭವಾದ ಮಳೆ ಸತತ 1 ತಾಸು ಜಿಡಿ ಹಿಡಿಯಿತು. ಇದರಿಂದಾಗಿ ಚಾಮರಾಜಪೇಟೆ, ತ್ಯಾಗರಾಜನಗರ, ಬನಶಂಕರಿ 3ನೇ ಹಂತ, ಹನುಮಂತನಗರ, ವಿಜಯನಗರ, ಬಸವೇಶ್ವರನಗರ, ಜಗಜೀವನರಾಮ್‌ನಗರ, ದೀಪಾಂಜಲಿನಗರ ಸೇರಿದಂತೆ ಅನೇಕ ಕಡೆ ಸಂಚಾರ ಸಂಪೂರ್ಣ ಸ್ತಬ್ಧವಾಗುವಂತೆ ಮಳೆ ಸುರಿಯಿತು. ಒಂದು ತಾಸಿನ ನಂತರ ಈ ಎಲ್ಲ ಪ್ರದೇಶಗಳಲ್ಲೂ ಮರಗಳು ಉರುಳಿ ಬಿದ್ದಿದ್ದವು.
ಕಾರು, ಬಸ್ಸು ಜಖಂ: ವಿದ್ಯಾಪೀಠದ ಬಳಿ ಬೃಹತ್ ಮರವೊಂದು ಬಿಎಂಟಿಸಿ ಬಸ್ಸಿನ ಮೇಲೆ ಉರುಳಿ ಬಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಅದೇ ರೀತಿ ಜೆ.ಸಿ.ರಸ್ತೆಯಲ್ಲಿ ಕಾರಿನ ಮೇಲೆ ಮತ್ತು ಗಿರಿನಗರದಲ್ಲಿ ಮನೆ ಮೇಲೆ ಮರಗಳು ಬಿದ್ದು ದೊಡ್ಡ ಅವಾಂತರವೇ ಉಂಟಾಯಿತು. ಇದರಿಂದಾಗಿ ಕೆ.ಆರ್.ಮಾರುಕಟ್ಟೆ, ಮೈಸೂರು ರಸ್ತೆ, ಹನುಮಂತಗನಗರ ಮುಖ್ಯರಸ್ತೆ, ಮಾಗಡಿ ರಸ್ತೆ, ಕಾರ್ಡ್ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ದಿಕ್ಕುತಪ್ಪಿ ವಾಹನ ಸವಾರರು ಪರದಾಡಿದರು. ನಗರದ ಸುತ್ತಮುತ್ತ ಸುರಿದ ಅನಿರೀಕ್ಷಿತ ಮಳೆ ಜನರ ಕಂಗೆಡಿಸಿತು. ಅನೇಕಲ್ ಮತ್ತು ಜಿಗಣಿಯಲ್ಲಿ 22.5 ಮಿ.ಮೀ. ಮಳೆಯಾಗಿದ್ದು, ಗಾಳಿ ಆಂಜನೇಸ್ವಾಮಿ ದೇವಸ್ಥಾನ ಬಳಿ 52.5 ಮಿ.ಮೀ. ಮತ್ತು ಕೆಂಗೇರಿ ಬಳೀ 45 ಮಿ.ಮೀ. ಮಳೆ ಸುರಿದಿದೆ.
ಮಳೆಗೆ ಸಜ್ಜಾಗದ ಬಿಬಿಎಂಪಿ
ಮಳೆಯ ಮೊದಲ ಅವಾಂತರವನ್ನೇ ನಿಭಾಯಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಮಳೆಗಾಲ ಆರಂಭವಾಗುವ ತಿಂಗಳ ಮುನ್ನವೇ ಸಜ್ಜಾಗಬೇಕಿದ್ದ ಬಿಬಿಎಂಪಿ ಇನ್ನೂ ನಿರೀಕ್ಷಿತ ಸಿದ್ಧತೆ ನಡೆಸದೇ ಇದ್ದುದು ಹೆಚ್ಚಿನ ಅನಾಹುತಗಳಿಗೆ ಕಾರಣ. ಅದರಲ್ಲೂ ಹನುಮಂತನಗರವೊಂದರಲ್ಲೇ 10 ಮರಗಳು ನೆಲಕ್ಕುರಳಿ, ವಿದ್ಯುತ್ ಕಂಬಗಳು ಮುರಿದು ಬಿದ್ದಿತ್ತು. ಇದರಿಂದ ಸಮಸ್ಯೆಗೆ ಸಿಲುಕಿದ ಜನತೆ ಬಿಬಿಎಂಪಿ ದಕ್ಷಿಣ ವಲಯ ನಿಯಂತ್ರಣಾ ಕೊಠಡಿಗೆ ಕರೆ ಮಾಡಿದಾಗ ಯಾವೊಬ್ಬ ಸಿಬ್ಬಂದಿಯೂ ಸ್ಪಂದಿಸಲಿಲ್ಲ. ಇದರಿಂದ ಆಕ್ರೋಶಗೊಂಡ ಸಂತ್ರಸ್ತರು ಮಾಧ್ಯಮಗಳಿಗೆ ಕರೆ ಮಾಡಿ ದೂರು ನೀಡಿದರು. ನಿಯಂತ್ರಣ ಕೊಠಡಿ ಸಿಬ್ಬಂದಿ ಕೇವಲ ದೂರುಗಳನ್ನು ಸ್ವೀಕರಿಸಿದರೇ ವಿನಾ ಅವುಗಳಿಗೆ ಸ್ಪಂದಿಸಲಿಲ್ಲ. ಏಕೆಂದರೆ ಮಳೆ ಅವಾಂತರ ತಡೆಯಲು ಮತ್ತು ಪರಿಹಾರ ಕಾರ್ಯ ಕೈಗೊಳ್ಳಲು ಅಗತ್ಯ ಸಿಬ್ಬಂದಿ ಇರಲಿಲ್ಲ. ಈ ಬಗ್ಗೆ ಕರೆ ಮಾಡಿ ದೂರಿದರೆ, ಮಳೆ ಸಮಸ್ಯೆ ಪರಿಹರಿಸುವ ಒಂದೇ ತಂಡ ಸಕ್ರಿಯವಾಗಿರುವುದರಿಂದ ಏನೂ ಮಾಡಲಾಗುತ್ತಿಲ್ಲ ಎಂದು ಬಿಬಿಎಂಪಿ ಸಿಬ್ಬಂದಿ ನೊಂದವರಿಗೆ ಸಬೂಬು ಹೇಳಿದರು. ಆದರೆ ಸ್ಥಳೀಯ ಕಾರ್ಪೊರೇಟರ್ ಚಂದ್ರಶೇಖರ್, ಮಳೆ ಅವಾಂತರ ಪ್ರದೇಶಕ್ಕೆ ಭೇಟಿ ನೀಡಿದರು. ಪರಿಹಾರ ಕಾರ್ಯಪಡೆ ಸಿಬ್ಬಂದಿ ಇಲ್ಲದೆ ಅವರೂ ಪರದಾಡಬೇಕಾಯಿತು.

ಕೆರೆಯಂತಾಗಿರುವ ವೀರಭದ್ರನಗರ ಮುಖ್ಯರಸ್ತೆ.
ಶ್ರೀನಿವಾಸನಗರ ಬ್ಯಾಂಕ್ ಕಾಲೊನಿಯಲ್ಲಿ ಬಿದ್ದ ಆಲಿಕಲ್ಲನ್ನು ಸಂಗ್ರಹಿಸಿರುವ ಮಕ್ಕಳು.
ಶಂಕರಪುರದ ರಂಗಾರಾವ್ ರಸ್ತೆಯಲ್ಲಿ ಮನೆಯ ಕಾಂಪೌಂಡ್ ಮೇಲೆ ತೆಂಗಿನ ಮರ ಉರುಳಿರುವುದು.
ಕಾಳಿದಾಸ ನಗರದಲ್ಲಿ ಮನೆಗೆ  ನುಗ್ಗಿರುವ ಚರಂಡಿನೀರನ್ನು ಹೊರ ಹಾಕುತ್ತಿರುವುದು.
ಹೊಸಕೆರೆಹಳ್ಳಿಯಲ್ಲಿ ಕಾರಿನ ಮೇಲೆ ಮರ ಬಿದ್ದಿರುವುದು.
ಶಂಕರಮಠದ ರಸ್ತೆಯಲ್ಲಿ ವಿದ್ಯುತ್ ಕಂಬ ಉರುಳಿರುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.