ರೆಡ್ಡಿ ಬಿಡುಗಡೆಗೆ ನಾಯ್ಡು ಅಡ್ಡಿ?

ಶ್ರೀರಾಮುಲು, ಸೋಮಶೇಖರರೆಡ್ಡಿಗೆ ಅನುಮಾನ
ಬಳ್ಳಾರಿ: ಸ್ವಾಭಿಮಾನಿ ಶ್ರೀರಾಮುಲು ಲೋಕಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ. ನಿರೀಕ್ಷೆಯಂತೆ ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದರೂ ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಆಪ್ತರನ್ನು ಹೊರಗಡೆ ತರುವ ಪ್ರಯತ್ನಕ್ಕೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮುಳ್ಳಾಗುವರೇ ಎಂಬ ಅನುಮಾನ ಶುರುವಾಗಿದೆ.
ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಆಂಧ್ರಪ್ರದೇಶದಲ್ಲಿ ಜಗನ್ಮೋಹನ ರೆಡ್ಡಿಗೆ ಆಪ್ತರು. ಅವರ ತಂದೆ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಕೃಪಾಕಟಾಕ್ಷ ಜನಾರ್ದನ ರೆಡ್ಡಿ ಮತ್ತಿತರರ ಮೇಲಿತ್ತು. ಈಗಲೂ ಜಗನ್ಮೋಹನ ರೆಡ್ಡಿ ಜತೆ ಆಪ್ತವಾಗಿರುವುದೇ ಜನಾರ್ದನ ರೆಡ್ಡಿ ಬಿಡುಗಡೆಗೆ ಹಿನ್ನಡೆ ಆಗುತ್ತದೆ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಕಾಡುತ್ತಿದೆ.
ಆಂಧ್ರ ಇಬ್ಭಾಗದ ಬಳಿಕ ನಡೆದ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಸೀಮಾಂಧ್ರ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಟಿಡಿಪಿ- ವೈಎಸ್ಸಾರ್ ಕಾಂಗ್ರೆಸ್ ಮಧ್ಯೆ ತೀರಾ ಪೈಪೋಟಿ ಏರ್ಪಟ್ಟಿದೆ. ಸೀಮಾಂಧ್ರದಲ್ಲಿ ಟಿಡಿಪಿ ಅಧಿಕಾರಕ್ಕೆ ಬಂದಿದ್ದರೂ ಚಂದ್ರಬಾಬು ನಾಯ್ಡುಗೆ ಅಲ್ಲಿ ವೈಎಸ್ಆರ್ ಜಗನ್ ಪ್ರಬಲ ಪೈಪೋಟಿದಾರ. ಜಗನ್ ಏಳ್ಗೆ ನಾಯ್ಡುಗೆ ಇಷ್ಟವಿಲ್ಲ.
ರೆಡ್ಡಿ ಹೊರಬಂದರೆ ಜಗನ್ಗೆ ಬಲ: ಶ್ರೀರಾಮುಲುಗೆ ತನ್ನ ಆಪ್ತಮಿತ್ರ ಜನಾರ್ದನ ರೆಡ್ಡಿ ಅವರನ್ನು ಹೊರಗಡೆ ತರುವ ಮಹದಾಸೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟವೂ ನಡೆಯುತ್ತಿದೆ. ಈಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದರಿಂದ ಹೋರಾಟಕ್ಕೆ ಪರೋಕ್ಷ ಬಲ ಬಂದಿದೆ. ಆದರೆ, ಜನಾರ್ದನ ರೆಡ್ಡಿ ಹೊರಗಡೆ ಬಂದರೆ ರಾಮುಲು ಮಾತ್ರವಲ್ಲ, ವೈ.ಎಸ್. ಜಗನ್ಗೂ ಬಲ ಬಂದಂತಾಗುತ್ತದೆ. ಟಿಡಿಪಿಗೆ ಪೈಪೋಟಿ ನೀಡುತ್ತ, ಕೇಂದ್ರದಲ್ಲಿ ಮೋದಿಗೆ ಆಪ್ತರಾಗುತ್ತ ಜಗನ್ ಸಂಕಷ್ಟದಿಂದ ದೂರವಾಗಲು ಪ್ರಯತ್ನಿಸಬಹುದು. ಈ ಊಹೆ ಚಂದ್ರಬಾಬು ನಾಯ್ಡು ಅವರಿಗೂ ಇರುವುದರಿಂದ, ರೆಡ್ಡಿ ಬಿಡುಗಡೆಗೆ ಅವರು ಅಡ್ಡಿಯಾಗಬಹುದು ಎನ್ನಲಾಗುತ್ತಿದೆ.
ಯಾವುದೇ ರಾಜಕೀಯ ಪಕ್ಷವಿರಲಿ, ತಮ್ಮ ಎದುರಾಳಿ ಬಲಿಷ್ಠರಾಗುವುದನ್ನು ಸಹಿಸಿಕೊಳ್ಳುವುದಿಲ್ಲ. ಶ್ರೀರಾಮುಲು ಹಾಗೂ ಸೋಮಶೇಖರ ರೆಡ್ಡಿ ಅವರು ಜನಾರ್ದನ ರೆಡ್ಡಿ ಅನುಪಸ್ಥಿತಿಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಹೊರಗಡೆ ತರುವ ಕಾನೂನು ಹೋರಾಟಕ್ಕೆ ಚಂದ್ರಬಾಬು ನಾಯ್ಡು ಯಾವ ರೀತಿ ಪ್ರತಿತಂತ್ರ ಹೆಣೆಯುತ್ತಾರೋ ಎಂಬ ಕುತೂಹಲವಿದೆ.
ಎರಡು ದಿನಗಳ ಹಿಂದೆ ವೈ.ಎಸ್. ಜಗನ್ಮೋಹನ ರೆಡ್ಡಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ, ಗೆಲುವಿಗೆ ಅಭಿನಂದನೆ ಸಲ್ಲಿಸಿರುವುದು. ಜಗನ್ ಮೋದಿಗೆ ಹತ್ತಿರವಾಗುವ ಪ್ರಯತ್ನ ಮಾಡುತ್ತಿರುವುದು ಚಂದ್ರಬಾಬು ನಾಯ್ಡು ಅಸಮಾಧಾನಕ್ಕೆ ಕಾರಣವಾಗಬಹುದು. ಜನಾರ್ದನ ರೆಡ್ಡಿ ಹೊರಗಡೆ ಬಂದರೆ ನರೇಂದ್ರ ಮೋದಿಗೆ ಜಗನ್ ಮತ್ತಷ್ಟು ಹತ್ತಿರವಾಗುತ್ತಾರೆ. ಈ ದೃಷ್ಟಿಯಿಂದ, ಜನಾರ್ದನ ರೆಡ್ಡಿ ಬಿಡುಗಡೆಯನ್ನು ಚಂದ್ರಬಾಬು ನಾಯ್ಡು ವಿರೋಧಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


