ಸಚಿವ ಸ್ಥಾನ ಬಿಡಿ, ರಾಜ್ಯಾಧ್ಯಕ್ಷ ಸ್ಥಾನವೂ ಬೇಡ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಾರೆ ಎಂದು ಊಹಿಸಿದ್ದವರಿಗೆ ಅಚ್ಚರಿ ಕಾದಿದೆ. ಕೇಂದ್ರದಲ್ಲಿ ಸಚಿವ ಸ್ಥಾನವಷ್ಟೇ ಅಲ್ಲ, ರಾಜ್ಯಾಧ್ಯಕ್ಷ ಸ್ಥಾನ ಕೂಡ ಬೇಡ ಎಂದು ಹೇಳಿದ್ದಾರೆ.
ಯಾವುದೇ ಅಧಿಕಾರವಿಲ್ಲದೇ ಕೇವಲ ಸಂಸದನಾಗಿ ಪಕ್ಷದ ಸಂಘಟನೆ ಮಾಡುವುದು ಸಾಧ್ಯವಿದೆ. ಅದನ್ನು ಸಾಧಿಸಿ ತೋರಿಸುತ್ತೇನೆ. ಮೋದಿ ಅವರ ಮಾತಿನಿಂದ ಪ್ರಭಾವಿತನಾಗಿ ಸಂಘಟನೆಯತ್ತ ಒಲವು ತೋರಿದ್ದೇನೆಯೇ ಹೊರತು ಬೇರಾವುದೇ ಉದ್ದೇಶ ಅಥವಾ ದುರುದ್ದೇಶ ಇಲ್ಲ ಎಂದು ಯಡಿಯೂರಪ್ಪ 'ಕನ್ನಡಪ್ರಭ'ಕ್ಕೆ ಸ್ಪಷ್ಟಪಡಿಸಿದ್ದಾರೆ.
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಪತ್ರ ಬರೆದ ನಂತರ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, 'ದಿಲ್ಲಿಯಲ್ಲಿ ನಾವು ಕೆಲವು ನಾಯಕರು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದಾಗ, ಸಂಘಟನೆ ಬಲಪಡಿಸುವ ಬಗ್ಗೆ ಕೆಲಸ ಮಾಡಬೇಕು. ಕೆಲವರಾದರೂ ಸಚಿವ ಸ್ಥಾನದ ಆಸೆಬಿಟ್ಟು, ಪಕ್ಷಕ್ಕೆ ದುಡಿಯುವ ನಿರ್ಧಾರ ಕೈಗೊಳ್ಳಬೇಕು. ನೀವೇ ಸ್ವಇಚ್ಛೆಯಿಂದ ಈ ನಿರ್ಧಾರ ಕೈಗೊಳ್ಳುವಂತಾಗಬೇಕು' ಎಂದು ಹೇಳಿದ್ದರು.
ರಾಜ್ಯಾಧ್ಯಕ್ಷ ಸ್ಥಾನವೂ ಬೇಡ: ಅವರ ಮಾತುಗಳಿಂದ ಪ್ರಭಾವಿತನಾಗಿ ನಾನು ಸ್ವಯಂ ಪ್ರೇರಿತನಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಪಕ್ಷದ ಸಂಘಟನೆ ಅಂದಾಕ್ಷಣ ಕೆಲವರು ನಾನು ರಾಜ್ಯಾಧ್ಯಕ್ಷ ಸ್ಥಾನ ಬಯಸುತ್ತಿದ್ದೇನೆ ಎಂದು ಊಹಿಸುತ್ತಿದ್ದಾರೆ. ಆದರೆ ನಾನು ಆಕಾಂಕ್ಷಿ ಅಲ್ಲ. ನನಗೆ ಯಾವುದೇ ಹುದ್ದೆ, ಅಧಿಕಾರ ಬೇಕಾಗಿಲ್ಲ. ಜನ ಭರ್ಜರಿ ಗೆಲುವಿನೊಂದಿಗೆ ನೀಡಿದ ಸಂಸದ ಸ್ಥಾನವೇ ಸಾಕು. ಪಕ್ಷ ಮತ್ತು ಜನರ ಸೇವೆ ಮಾಡಲು ಅಧಿಕಾರ ಅಥವಾ ಹುದ್ದೆಯ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
'ದಕ್ಷಿಣ' ಬಲಕ್ಕೆ ಮೋದಿ ಒಲವು: ದಕ್ಷಿಣ ಭಾರತದಲ್ಲಿ ಬಿಜೆಪಿ ಬಲಪಡಿಸಲು ನರೇಂದ್ರ ಮೋದಿ ಒಲವು ಹೊಂದಿದ್ದಾರೆ ಎಂಬ ಮಾತಿದೆ. ಅದಕ್ಕೆ ಯಡಿಯೂರಪ್ಪ ನೇತೃತ್ವ ವಹಿಸಲಿದ್ದಾರೆಯೇ ಎಂಬ ಪ್ರಶ್ನೆಗೆ, 'ಮೋದಿ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ. ಅವರು ಸೂಚಿಸಿದ ಜವಾಬ್ದಾರಿ ನಿಭಾಯಿಸಲು ನಾನು ಸಿದ್ಧ. ಹುದ್ದೆ ಬಗ್ಗೆ ಗಮನ ಕೊಡದೆ ಪಕ್ಷಕ್ಕಾಗಿ ದುಡಿಯಲು ನಿರ್ಧರಿಸಿದ್ದೇನೆ. ಈ ನಿರ್ಧಾರದ ಹಿಂದೆ ಬೇರೆ ಕಾರಣಗಳಿದೆ ಎಂದು ಊಹೆ ಮಾಡುವ ಅಗತ್ಯವಿಲ್ಲ' ಎಂದರು.
ಪ್ರಕರಣಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕೈತಪ್ಪಲಿದೆ ಎಂಬ ಕಾರಣಕ್ಕೆ ಈ ತೀರ್ಮಾನವೇ ಎಂಬ ಪ್ರಶ್ನೆಗೆ, 'ಪ್ರಕರಣಗಳನ್ನು ನ್ಯಾಯಾಲಯ ರದ್ದುಪಡಿಸಿದೆ ಎಂಬುದು ಮಾಧ್ಯಮಕ್ಕೆ ಮತ್ತು ಜನರಿಗೆ ತಿಳಿದಿರುವ ಸಂಗತಿ. ಅವುಗಳ ಬಗ್ಗೆ ಸತ್ಯ ಸಂಗತಿಯನ್ನು ನಾನು ಮಾಧ್ಯಮಗಳ ಮುಂದಿಟ್ಟಿದ್ದೇನೆ. ಆದರೂ ಅವುಗಳ ಬಗ್ಗೆಯೇ ಚರ್ಚೆ ಮಾಡಬೇಕು ಎಂಬುದು ಮಾಧ್ಯಮಗಳ ಬಯಕೆಯಾದರೆ ಅದಕ್ಕೆ ನಾನೇನೂ ಹೇಳಲಾರೆ. ಆದರೆ ಜನ ನನಗೆ ಭಾರೀ ಅಂತರದ ಗೆಲುವು ನೀಡುವ ಮೂಲಕ ಅದಕ್ಕೆಲ್ಲ ಉತ್ತರಿಸಿದ್ದಾರೆ ಅಂದುಕೊಂಡಿದ್ದೇನೆ' ಎಂದಿದ್ದಾರೆ.
ಮೋದಿಗೆ ಬಿಎಸ್ವೈ ಪತ್ರ
ಬೆಂಗಳೂರು: ರಾಜ್ಯದಲ್ಲಿ ಪಕ್ಷ ಬಲವರ್ಧನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ.
ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ, ರಾಜ್ಯದಲ್ಲಿ ಪಕ್ಷವನ್ನು ಬೆಳೆಸುವ ಜವಾಬ್ದಾರಿ ಕೊಡಿ ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಲವು ತೋರಿಸಿದ್ದಾರೆ.
ನಿಯೋಜಿತ ಪ್ರಧಾನಿ ನರೇಂದ್ರ ಮೋದಿಗೆ ಗುರುವಾರ ಪತ್ರ ಬರೆದಿರುವ ಯಡಿಯೂರಪ್ಪ, ತಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಕೇಂದ್ರ ಸಚಿವ ಸಂಪುಟಕ್ಕಾಗಿ ರಾಜ್ಯದಿಂದ ಲಾಬಿ ನಡೆಸುತ್ತಿರುವವರ ಪಟ್ಟಿಯಲ್ಲಿ ಯಡಿಯೂರಪ್ಪ ಅವರೇ ಹಿಂದೆ ಸರಿದಂತಾಗಿದೆ. ಮತ್ತೊಂದೆಡೆ ರಾಜ್ಯದ ಬಿಜೆಪಿ ಸಾರಥ್ಯವನ್ನು ವಹಿಸಿಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ಮೋದಿಯೇ ಸೂಚಿಸಿರುವುದು ಪತ್ರದಿಂದ ತಿಳಿದುಬರುತ್ತದೆ.
ಬಿಎಸ್ವೈ ಪತ್ರದ ಸಾರಾಂಶ: ಗುಜರಾತ್ ಭವನದಲ್ಲಿ ಮೋದಿ ಜತೆ ಮೇ 20ರಂದು ಮಾತುಕತೆ ನಡೆಸಿದ್ದೇನೆ. ಮೋದಿ ಹೇಳಿದಂತೆ ಬಿಜೆಪಿಗೆ ಈ ಬಾರಿ ಯುವಕರು, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟರು ಮತ ನೀಡಿದ್ದಾರೆ. ಅವರಿಗಾಗಿ ಕೆಲಸ ಮಾಡಬೇಕಿದೆ.
ಈ ಹಿನ್ನೆಲೆಯಲ್ಲಿ ಜನರ ನಿರೀಕ್ಷೆಯೂ ಹೆಚ್ಚಿದೆ. ಆದ್ದರಿಂದ ಕೆಲ ಪ್ರಭಾವಿ ಹಾಗೂ ಸಮರ್ಥ ನಾಯಕರು ಮುಂದೆ ಬಂದು ಆಯಾ ರಾಜ್ಯಗಳಲ್ಲಿ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕಿದೆ ಎನ್ನುವುದು ಮೋದಿ ಹಾಗೂ ನನ್ನ ನಡುವಿನ ಮಾತುಕತೆಯ ಸಾರಾಂಶವಾಗಿದೆ. ಕರ್ನಾಟಕದಲ್ಲಿ ಬಿಜೆಪಿಯ ಬಲವರ್ಧನೆಗೆ ಸ್ವಯಂಪ್ರೇರಿತನಾಗಿ ಕೆಲಸ ಮಾಡಬಯಸುತ್ತೇನೆ. ಹಾಗೆಯೇ ಈ ದೇಶದ ಯಶಸ್ವಿ ಪ್ರಧಾನಿಯನ್ನಾಗಿ ಮೋದಿಯನ್ನು ನೋಡಬಯಸುತ್ತೇನೆ.
ವಿನಾಯಕ ಭಟ್ಟ, ಮೂರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


