ಸಮಸ್ಯೆಗಳ ಕೂಪವಾಗಿದೆ ಗೌಡರ ಕ್ಷೇತ್ರ

ಹೊಳೆನರಸೀಪುರ: ಇದು ನಿರಂತರ ಹೋರಾಟದ ರಾಜಕಾರಣವೋ ಅಂತೂ ಎಚ್.ಡಿ.ದೇವೇಗೌಡರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೂ ಆಯಿತು... ಗೆಲವಿನ ಅಂತರ ಕಡಿಮೆಯೋ? ಹೆಚ್ಚೋ? ಗೌಡರೂ ಗೆದ್ದಿದ್ದೂ ಆಯಿತು. ತಮ್ಮ ಸ್ವ ಕ್ಷೇತ್ರ ಹೊಳೆನರಸೀಪುರ ತಾಲೂಕಿನಲ್ಲಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕೆಂಬುದು ಇಲ್ಲಿನ ಜನರ ನಿರೀಕ್ಷೆಯಾಗಿದೆ.
ಹೆಚ್ಚೂ ಕಡಿಮೆ ಐದು ದಶಕಗಳ ರಾಜಕೀಯ ಉನ್ನತಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಈ ತಾಲೂಕಿನ ಎಲ್ಲ ವರ್ಗದ ಮತದಾರರು ನೀಡಿದ್ದಾರೆ. ದಶಕಗಳ ಕಾಲ ಶಾಸಕರಾಗಿ, ಪ್ರಭಾವಿ ಮಂತ್ರಿಗಳಾಗಿ, ವಿರೋಧ ಪಕ್ಷದ ನಾಯಕರಾಗಿ ಹತ್ತು-ಹಲವು ಆಯಾಮಗಳಲ್ಲಿ ಗೌಡರು ಹಾಗೂ ಅವರ ಜೊತೆಯಲ್ಲಿಯೇ ಅವರ ಪುತ್ರ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೂ ದಿ.ಜಿ.ಪುಟ್ಟಸ್ವಾಮಿಗೌಡ ಅವರಿದ್ದಾಗಲೂ ಹಾಗೂ ಅವರ ನಂತರದಲ್ಲೂ ಈ ಕ್ಷೇತ್ರ ಕಾಂಗ್ರೆಸ್ ಪ್ರಭಾವವಿದ್ದರೂ ಜೆಡಿಎಸ್ ಕೈ ಹಿಡಿದದ್ದೇ ಹೆಚ್ಚು.
ರಾಜಕಾರಣದ ಎಲ್ಲ ಮಜಲುಗಳನ್ನೂ, ಎಲ್ಲ ಮಗ್ಗುಲುಗಳನ್ನೂ ಬಿಟ್ಟೂ ಬಿಡದೇ ಅನುಭವಿಸಲು ಮತ ನೀಡಿ ಆಶೀರ್ವದಿಸಿದ್ದು ಹೊಳೆನರಸೀಪುರ ಕ್ಷೇತ್ರದ ಮತದಾರರು, ಏಕೆಂದರೆ ಇದು ದೇವೇಗೌಡರ ತವರು ಕ್ಷೇತ್ರ. ಇಂತಹ ಕ್ಷೇತ್ರ ಮಾಜಿ ಪ್ರಧಾನಿಯನ್ನು ನಾಡಿಗೆ ನೀಡಿದ ಹೆಮ್ಮೆಯನ್ನು ಹೊಂದಿರುವ ಹಾಗೆಯೇ, ಹಲವು ಸಮಸ್ಯೆಗಳಿಂದ ಹೊರಬರಲಾರದೇ ದಶಕಗಳಿಂದ ತತ್ತರಿಸುತ್ತಿರುವ ದೌರ್ಭಾಗ್ಯದ ಕ್ಷೇತ್ರವೂ ಆಗಿದೆ ಎಂದರೆ ಅಚ್ಚರಿಯಾಗಬಹುದು.
ತಾಲೂಕನ್ನು ಹಾದು ಹೋಗುವ ರಾಜ್ಯ ಹೆದ್ದಾರಿ, ಅಕ್ಕ-ಪಕ್ಕದ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಷ್ಟೇ ಚೆನ್ನಾಗಿದ್ದರೆ ಸಾಲದು, ತಾಲೂಕಿನ ಗ್ರಾಮೀಣ ರಸ್ತೆಗಳಿಗೆಲ್ಲಾ ಈ ಭಾಗ್ಯ ಸಿಕ್ಕಿಲ್ಲ ಎನ್ನುವುದು ಕೂಡ ಸುಳ್ಳಲ್ಲ. ಅಲ್ಲದೇ ಪಟ್ಟಣದ ತುಂಬೆಲ್ಲಾ ಇದ್ದ ಡಾಂಬರು ರಸ್ತೆಗಳು ಮಾಯವಾಗಿ ಕಾಂಕ್ರೀಟ್ ರಸ್ತ್ತೆಗಳಾಗುವ ಭಾಗ್ಯ ಸಿಕ್ಕಾಗ ಉತ್ತಮ ರಸ್ತೆಯನ್ನು ಕಂಡ ಪಟ್ಟಣ ಎಂಬ ಹೆಮ್ಮೆ ಇಲ್ಲಿನ ಜನರಲ್ಲಿತ್ತಾದರೂ, ಕಾಂಕ್ರಿಟ್ ರಸ್ತ್ತೆಗಳು ನಿರ್ಮಾಣವಾದ ನಾಲ್ಕಾರು ತಿಂಗಳಿಗೇ ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳೆಲ್ಲಾ ಕಿತ್ತು ಬರುತ್ತಿರುವ ಮಾದರಿಯಲ್ಲಿಯೇ ಜನರಲ್ಲಿದ್ದ ನಂಬಿಕೆಗಳು ದೂರಾಗುತ್ತಾ ಹೋಗಿವೆ.
ಹಿಂದಿನಿಂದಲೂ ಇಲ್ಲಿನ ಬೀದಿ ಬದಿಯ ವ್ಯಾಪಾರಿಗಳು ನಿತ್ಯವೂ ಮಳೆ-ಬಿಸಿಲೆನ್ನದೇ ಬೀದಿಯಲ್ಲಿ ಕುಳಿತೇ ವ್ಯಾಪಾರ ಮಾಡುತ್ತಿದ್ದರೂ, ದೇವೇಗೌಡರು ರಾಜಕಾರಣಕ್ಕೆ ಬಂದು ಐದು ದಶಕಗಳು ಕಳೆದರೂ ಒಂದು ಸುಸಜ್ಜಿತ ತರಕಾರಿ ಮಾರುಕಟ್ಟೆ ಹಾಗೂ ವಾರದ ಸಂತೆಗೆ ಶಾಶ್ವತ ನೆಲೆ ಕಲ್ಪಿಸಲು ಸಾಧ್ಯವಾಗಿಲ್ಲ. ಊರ ತುಂಬೆಲ್ಲಾ ಮಳಿಗೆಗಳನ್ನು ನಿರ್ಮಿಸಿರುವ ಇಲ್ಲಿನ ಪುರಸಭೆಯು ಅವಶ್ಯಕವಾಗಿ ಬೇಕಾದ ವಾಹನಗಳ ಪಾರ್ಕಿಂಗ್ಗೆ ಒಂದು ಜಾಗ ನೀಡಲು ಇಂದಿಗೂ ಸಾಧ್ಯವಾಗಿಲ್ಲ.
ಪಟ್ಟಣದಲ್ಲಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶೆಲ್ಟರ್ ಹಾಗೂ ಹೆಚ್ಚುವರಿ ಪ್ಲಾಟ್ಫಾರಂ ಇಲ್ಲದ ಕಾರಣದಿಂದಾಗಿ ಪ್ರಯಾಣಿಕರು ಇಲ್ಲಿ ಅನುಭವಿಸುತ್ತಿರುವ ನರಕ ಅಷ್ಟಿಷ್ಟಲ್ಲ. ಅಲ್ಲದೇ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಯೂ ನಿಲ್ದಾಣ ಕಟ್ಟಿದಾಗಿನಿಂದಲೂ ಡಾಂಬರು ಕಾಣಲು ಸಾಧ್ಯವಾಗಿಲ್ಲ ಎಂದರೆ ಇಲ್ಲಿನ ನಾಗರಿಕರ ದೌರ್ಭಾಗ್ಯಕ್ಕೆ ಹೊಣೆ ಯಾರು.
ಇನ್ನು ಪಟ್ಟಣಕ್ಕೆ ಸಮೀಪವಿರುವ ಸೂರನಹಳ್ಳಿ ಗ್ರಾಮದ ಬಳಿಯಲ್ಲಿ ಇಲ್ಲಿನ ರೈತರ ಸಮೃದ್ಧವಾದ ಕೃಷಿ ಭೂಮಿಯನ್ನು ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂ-ಸ್ವಾಧೀನಪಡಿಸಿಕೊಂಡು ದಶಕಗಳೇ ಕಳೆದರೂ ಭೂಮಿ ಕಳೆದುಕೊಂಡ ರೈತರಿಗೆ ಇದುವರೆವಿಗೂ ನಿಯಮಾನುಸಾರ ಪರಿಹಾರ ಧನವೂ ಇಲ್ಲ, ಇತ್ತ ಭೂಮಿಯೂ ಇಲ್ಲ ಎನ್ನುವಂತಾಗಿದೆ.
ಸಮಸ್ಯೆಗಳ ಪಟ್ಟಿ ನೀಡಲು ಹೊರಟರೆ ದೊಡ್ಡದಾಗಿ ಬೆಳೆಯುತ್ತಲೇ ಹೋಗುತ್ತದೆ. ಪರಿಹಾರವೇ ಇಲ್ಲದ ಸಮಸ್ಯೆಗಳು ಯಾವುದೂ ಇಲ್ಲ, ಆದರೆ ಪರಿಹರಿಸುವ ಮುಕ್ತ ಮನಸ್ಸಿರಬೇಕು ಅಷ್ಟೇ. ಮಾಜಿ ಪ್ರಧಾನಿ ದೇವೇಗೌಡರಿಗೆ ಇದು ಕಡೆಯ ಚುನಾವಣೆಯಾಗಿರಬಹದು, ಆದರೆ ಮತದಾರನಿಗೆ ಚುನಾವಣೆಗಳು ಕಡೆಯದೇನಲ್ಲ. ಇನ್ನಾ ದರೂ ದೇವೇಗೌಡರು ತಾವು ಹುಟ್ಟಿದ ತವರು ನೆಲ, ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವರೇ ಎಂಬುದಷ್ಟೇ ಮತದಾರರ ಮಿಲಿಯನ್ ಡಾಲರ್ಪ್ ಪ್ರಶ್ನೆಯಾಗಿದೆ.
ಎಚ್.ಡಿ.ಗುರುಪ್ರಸಾದ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


