ಪ್ರಧಾನ ಸುದ್ದಿ

ಕಾಂಗ್ರೆಸ್ ಸೋಲಿಗೆ ರಾಹುಲ್ ಕಾರಣ

ಕಾಂಗ್ರೆಸ್ ಸೋಲಿಗೆ ರಾಹುಲ್ ಕಾರಣ
Published On :

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಬೆಂಬಲಿಗರು ಕಾರಣರಲ್ಲ. ನಾಯಕ ರಾಹುಲ್ ಗಾಂಧಿಯವರೇ ನೇರವಾಗಿ ಸೋಲಿಗೆ ಕಾರಣ ಎಂದು ಗುಜರಾತ್‌ನ ಕಾಂಗ್ರೆಸ್ ನಾಯಕ ಶಂಕರ್‌ಸಿಂಗ್ ವಾಘೇಲ ಬಹಿರಂಗವಾಗಿ ಟೀಕಿಸಿದ್ದಾರೆ.
ಪಕ್ಷದ ಹೀನಾಯ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಿಲಿಂದ್ ದೆವೊರಾ, ರಾಹುಲ್ ಸಲಹೆಗಾರರು ಬೇರುಮಟ್ಟದ ನಾಯಕರ ಮಾತಿಗೆ ಕಿವಿಗೊಡದಿದ್ದುದೇ ಪರಾಭವಕ್ಕೆ ಕಾರಣ ಎಂದಿದ್ದರು.
ಮಿಲಿಂದ್ ಅವರ ಹೇಳಿಕೆಗೆ ಪ್ರತಿಹೇಳಿಕೆ ದಾಖಲಿಸಿರುವ ವಾಘೇಲ, 'ಸೋಲಿಗೆ ರಾಹುಲ್ ಸಲಹೆಗಾರರು ಕಾರಣರಲ್ಲ. ಅವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಅನನುಭವಿ ವ್ಯಕ್ತಿಗಳನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದ ರಾಹುಲ್ ಅವರೇ ಸೋಲಿಗೆ ನೇರ ಕಾರಣ' ಎಂದು ಜರಿದಿದ್ದಾರೆ.  ಆದರೆ, ಇಲ್ಲಿ ಟೀಕೆಗಿಂತ ಹೆಚ್ಚಾಗಿ ಗಮನ ಸೆಳೆದಿದ್ದು ವಾಘೇಲಾ ಅವರು ತೋರಿಸಿರುವ ಧೈರ್ಯದ ಬಗ್ಗೆ.  
ಹೌದು. ಪಕ್ಷದ ನಾಯಕತ್ವದ ಬಗ್ಗೆ ಅದರಲ್ಲೂ ಸೋನಿಯಾ ಅವರ ಮುದ್ದಿನ ಮಗನ ಬಗ್ಗೆ ಹೀಗೆ ಬಹಿರಂಗವಾಗಿ, ಮಾಧ್ಯಮಗಳೆದುರು ಈ ಹಿಂದೆ ಟೀಕಿಸುವ ಧೈರ್ಯ ಯಾರೂ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ, ವಾಘೇಲಾ ಈ ದಿಟ್ಟತನ ತೋರಿದ್ದಾರೆ. ಅಷ್ಟೇ ಅಲ್ಲ, ಇದು ಪಕ್ಷವನ್ನು ಮುನ್ನೆಡೆಸುತ್ತಿದ್ದವರು ತೋರುತ್ತಿದ್ದ ಸರ್ವಾಧಿಕಾರದ ವಿರುದ್ಧ ಎದ್ದಿರುವ ಮೊದಲ ಕೂಗು ಎನ್ನಲಡ್ಡಿಯಿಲ್ಲ.
ಏಕೆಂದರೆ, ಕಾಂಗ್ರೆಸ್‌ನ ಹಿರಿಯ ನಾಯಕರಾದ ಶಶಿ ತರೂರ್ ಅವರೇ ಪಕ್ಷದೊಳಗಿನ ವಾತಾವರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಕಾಂಗ್ರೆಸ್ ಪಕ್ಷದೊಳಗಡೆ ಬಿಗುವಿನ ವಾತಾವರಣವಿದ್ದು, ಯಾವುದೇ ನಾಯಕರು ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ನಿರ್ಬಂಧವಿದೆ. ನನಗೂ ಈ ಹಿಂದೆ ಇದೇ ನಿರ್ಬಂಧ ವಿಧಿಸಲಾಗಿತ್ತು' ಎಂದು ತರೂರ್ ಹೇಳಿರುವುದು ವಾಕ್ ಸ್ವಾತಂತ್ಯ್ರಕ್ಕೆ ಪಕ್ಷದೊಳಗಿದ್ದ ಇತಿ-ಮಿತಿಗಳನ್ನು ಎತ್ತಿ ತೋರಿಸಿದೆ.
ಇವರಿಬ್ಬರ ನಂತರ, ಇದೀಗ ಟೀಕಾಸ್ತ್ರಗಳ ಮಳೆ ಆರಂಭಗೊಂಡಿದೆ. ಶುಕ್ರವಾರ ಅಮೃತಸರದಿಂದ ಆಯ್ಕೆಯಾಗಿರುವ ಸಂಸದ ಅಮರಿಂದರ್ ಸಿಂಗ್ ಅವರೂ ನಾಯಕತ್ವವನ್ನು ಟೀಕಿಸಿದ್ದಾರೆ. ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರತಾಪ್ ಸಿಂಗ್ ಬಾಜ್ವಾ ವಿರುದ್ಧ ಟೀಕಾಪ್ರಹಾರ ನಡೆಸಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿಗೆ ಪ್ರತಾಪ್ ಅವರ ಅದಕ್ಷತೆಯೇ ಕಾರಣ ಎಂದು ಜರಿದಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಕಾಂಗ್ರೆಸ್‌ನಲ್ಲಿನ ಉಸಿರುಗಟ್ಟುವ ಸನ್ನಿವೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  
ಮಿಲಿಂದ್ ದೆವೊರಾ ಅವರ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ಪಕ್ಷದ ಹಿರಿಯರು ಬೇರುಮಟ್ಟದಲ್ಲಿನ ನಾಯಕರ ಕೂಗನ್ನು ಕೇಳಲಿಲ್ಲ ಎಂದು ಈಗ ಹೇಳುತ್ತಿದ್ದಾರೆ. ಇದನ್ನು ಅವರು ಚುನಾವಣೆಗೂ ಮುನ್ನವೇ ಬಹಿರಂಗವಾಗಿ ಹೇಳಬೇಕಿತ್ತು' ಎಂದರು.
ಅತ್ತ, ಯುಪಿಎನ ಅಂಗಪಕ್ಷವಾದ ಎನ್‌ಸಿಪಿಯ ನಾಯಕ ಪ್ರಫುಲ್ ಪಟೇಲ್, 'ಚುನಾವಣೆ ಬಗ್ಗೆ ತನ್ನ ಅಂಗಪಕ್ಷಗಳೊಂದಿಗೆ ನಡೆಸಬೇಕಿದ್ದ ಔಪಚಾರಿಕ ಮಾತುಕತೆಯನ್ನೂ ಸರಿಯಾಗಿ ನಡೆಸಲಿಲ್ಲ.
ಅಂಗಪಕ್ಷಗಳ ನಾಯಕರನ್ನು ಒಮ್ಮತಕ್ಕೆ ತೆಗೆದುಕೊಳ್ಳದೇ ಕಾಂಗ್ರೆಸ್ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿತು. ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರೊಂದಿಗೆ ಸಮರ್ಪಕವಾಗಿ ಸಂವಹನವನ್ನು ನಡೆಸಲಿಲ್ಲ' ಎಂದು ಅವರು ದೂರಿದ್ದಾರೆ.
ರಾಹುಲ್ ಪರ- ವಿರೋಧಿಗಳ ಗುಂಪು
ಕಾಂಗ್ರೆಸ್‌ನ ಸೋಲಿನ ನಂತರ ಪಕ್ಷದ ಆಂತರಿಕ ವಲಯದಲ್ಲೇ ಭುಗಿಲೆದ್ದಿರುವ ಅಸಮಾಧಾನ, ಮತ್ತಷ್ಟು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಯಿದೆ. ಪಕ್ಷದ ಹೀನಾಯ ಪರಾಭವಕ್ಕೆ ರಾಹುಲ್ ಅವರನ್ನು ಟೀಕಿಸುವ ಗುಂಪು ಒಂದೆಡೆಯಾದರೆ, ಮತ್ತೊಂದು ರಾಹುಲ್ ಅವರ ಪರ ಗುರಾಣಿಯಂತೆ ಕಾರ್ಯ ನಿರ್ವಹಿಸುತ್ತಿದೆ.  ಚುನಾವಣೆ ಪ್ರಚಾರಕ್ಕೆ ರಾಹುಲ್ ಬರದಿದ್ದರೆ ಪಕ್ಷ ಇನ್ನಷ್ಟು ಹೀನಾಯ ಸ್ಥಿತಿ ತಲುಪುತ್ತಿತ್ತು ಎಂದು ಹೇಳುವ ಮೂಲಕ ರಾಹುಲ್ ನಾಯಕತ್ವವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಒಪ್ಪದ ಕೆಲವರು, ರಾಹುಲ್‌ಗಿಂತ ಪ್ರಿಯಾಂಕಾ ಗಾಂಧಿಯವರೇ ಉತ್ತಮ ಎನ್ನುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಲಭಿಸಿದ್ದು ಎರಡೇ ಲೋಕಸಭೆ ಸ್ಥಾನ. ಇಲ್ಲಿ ಗೆದ್ದಿರುವುದು ಸೋನಿಯಾ ಹಾಗೂ ರಾಹುಲ್. ಇವರ ಗೆಲವಿಗೆ ಪ್ರಿಯಾಂಕಾ ಗಾಂಧಿಯೇ ಕಾರಣ ಎನ್ನುತ್ತಿದೆ ಒಂದು ಬಣ.  ಈ ಮಾತುಗಳನ್ನು ಪುಷ್ಟೀಕರಿಸಿರುವ ನಿರ್ಗಮಿತ ಸರ್ಕಾರದ ಆಹಾರ ಖಾತೆ ಸಚಿವ ಥಾಮಸ್, ಪ್ರಿಯಾಂಕಾ ಗಾಂಧಿ ಅವರು ಅವರ ಅಜ್ಜಿ ಇಂದಿರಾ ಗಾಂಧಿಯವರನ್ನೇ ಹೋಲುತ್ತಿರುವುದು ಮತದಾರರಲ್ಲಿ ಉತ್ಸಾಹ ಮೂಡಿಸಿತು. ಅವರಿಂದಲೇ ಸೋನಿಯಾ ಹಾಗೂ ರಾಹುಲ್ ಜಯಗಳಿಸಿರಬಹುದು ಎಂದಿದ್ದಾರೆ.
'ಪ್ರಿಯಾಂಕಾಗೆ ನಾಯಕತ್ವ ಬೇಡ'
ರಾಹುಲ್ ಅವರ ಬದಲಿಗೆ ಸೋದರಿ ಪ್ರಿಯಾಂಕಾ ಗಾಂಧಿಯವರಿಗೆ ಪಕ್ಷದ ಸಾರಥ್ಯ ವಹಿಸಬೇಕು ಎಂದು ರಾಹುಲ್ ವಿರೋಧಿಗಳ ಎತ್ತಿರುವ ಕೂಗಿಗೆ ಆ ಗುಂಪಿನಲ್ಲೇ ಅಪಸ್ವರ ವ್ಯಕ್ತವಾಗಿದೆ.  ರಾಹುಲ್ ನಾಯಕತ್ವನ್ನು ಬಹಿರಂಗವಾಗಿಯೇ ಟೀಕಿಸಿರುವ ಶಂಕರ್‌ಸಿಂಗ್ ವಾಘೇಲ, ಪ್ರಿಯಾಂಕಾ ಗಾಂಧಿಯವರನ್ನು ಪಕ್ಷದ ಜವಾಬ್ದಾರಿಯುತ ಸ್ಥಾನಕ್ಕೆ ಕರೆತಂದು ಕೂರಿಸುವುದು ಸೂಕ್ತವಾದ ನಿರ್ಧಾರವಲ್ಲ ಎಂದಿದ್ದಾರೆ.  ಅತ್ತ, ಶಶಿ ತರೂರ್ ಅವರೂ ಪರೋಕ್ಷವಾಗಿ ಪ್ರಿಯಾಂಕಾ ಗಾಂಧಿಯವರ ನಾಯಕತ್ವವನ್ನು ಬೇಡ ಎಂದಿದ್ದು, 'ಚುನಾವಣೆಯಲ್ಲಿ ಪ್ರಚಾರಕ್ಕಿಳಿದಿದ್ದ ಪ್ರಿಯಾಂಕಾ ಅವರಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಇದು ಹೇಗಿದೆಯೆಂದರೆ, ಒಂದೂ ಚಿತ್ರದಲ್ಲಿ ನಟಿಸದ ನಟಿಯೊಬ್ಬಳಿಗೆ ಆಸ್ಕರ್ ನೀಡಲು ನಿರ್ಧರಿಸಿದಂತಿದೆ' ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.