ಇಲ್ಮಿ, ಗೋಪಿನಾಥ್ ಆಪ್ಗೆ ಗುಡ್ಬೈ

ನವದೆಹಲಿ/ಬೆಂಗಳೂರು: ಒಂದೆಡೆ ಆಪ್ ನಾಯಕ ಅರವಿಂದ ಕೇಜ್ರಿವಾಲ್ ನ್ಯಾಯಾಲಯದಲ್ಲಿ ಉದ್ಧಟತನ ಪ್ರದರ್ಶಿಸುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಎರಡು ಪ್ರಮುಖ ತಲೆಗಳು ಉರುಳಿವೆ. ಹೌದು. ಆಮ್ ಆದ್ಮಿ ಪಕ್ಷಕ್ಕೆ ಒಂದೇ ದಿನ ಎರಡು ಹೊಡೆತ ಬಿದ್ದಿದೆ. ಪಕ್ಷದ ಸ್ಥಾಪಕ ಸದಸ್ಯೆ ಶಾಜಿಯಾ ಇಲ್ಮಿ ಹಾಗೂ ಕ್ಯಾ. ಜಿ.ಆರ್. ಗೋಪಿನಾಥ್ ಅವರು ಶನಿವಾರ ಆಪ್ಗೆ ಗುಡ್ಬೈ ಹೇಳಿದ್ದಾರೆ. ಕೇಜ್ರಿವಾಲ್ ಅವರ 'ಜೈಲು ರಾಜಕೀಯ' ಮತ್ತು ಪಕ್ಷದ ನಾಯಕತ್ವದ ಬಗೆಗಿನ ಭಿನ್ನಾಭಿಪ್ರಾಯದ ಕಾರಣ ಹೇಳಿ ಈ ಪ್ರಮುಖ ನಾಯಕರು ಪಕ್ಷ ತೊರೆದಿದ್ದಾರೆ. ಕೇಜ್ರಿವಾಲ್ ಬಗ್ಗೆ ಜನರಷ್ಟೇ ಅಲ್ಲ, ಪಕ್ಷದ ನಾಯಕರೂ ರೋಸಿಹೋಗಿದ್ದಾರೆ ಎಂಬುದು ಈ ಮೂಲಕ ಸಾಬೀತಾಗಿದೆ.
ಆಂತರಿಕ ಪ್ರಜಾಪ್ರಭುತ್ವವಿಲ್ಲ
ಲೋಕಸಭೆ ಚುನಾವಣೆಯಲ್ಲಿ ಸೋಲುಂಡ ಬಳಿಕ ಪಕ್ಷದೊಳಗೆ ಎದ್ದಿದ್ದ ಅಸಮಾಧಾನದ ಹೊಗೆ ಇಲ್ಮಿ, ಗೋಪಿನಾಥ್ ರಾಜಿನಾಮೆಯ ಮೂಲಕ ಬಹಿರಂಗವಾಗಿದೆ. ಶನಿವಾರ ಪಕ್ಷದ ಎಲ್ಲ ಹುದ್ದೆಗಳಿಗೂ ರಾಜಿನಾಮೆ ನೀಡಿದ ಇಲ್ಮಿ, 'ನಾನು ಸರಿಯಾಗಿ ಯೋಚಿಸಿಯೇ ಈ ನಿರ್ಧಾರಕ್ಕೆ ಬಂದಿದ್ದೇನೆ. ಸ್ವರಾಜ್ ಬಗ್ಗೆ ಮಾತನಾಡುವ ಪಕ್ಷದ ಒಳಗೆಯೇ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಕೆಲವೇ ಕೆಲವರು ತಮಗಿಷ್ಟಬಂದಂತೆ ನಿರ್ಧಾರ ಕೈಗೊಳ್ಳುತ್ತಾರೆ. ನನಗೆ ಕೇಜ್ರಿವಾಲ್ ಅವರ ಬಗ್ಗೆ ಈಗಲೂ ಗೌರವವಿದೆ' ಎಂದರು. ಇದೇ ವೇಳೆ, ಬೇರೆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದೂ ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಪಕ್ಷ ತೊರೆಯದಂತೆ ಇಲ್ಮಿ ಅವರನ್ನು ಆಪ್ ನಾಯಕರು ಒತ್ತಾಯಿಸಿದರೂ ಅವರು ತಮ್ಮ ನಿರ್ಧಾರ ಬದಲಿಸಲಿಲ್ಲ.
ಕೇಜ್ರಿ ವಿರುದ್ಧ ವಾಗ್ದಾಳಿ
ಜನವರಿಯಲ್ಲಷ್ಟೇ ಆಪ್ಗೆ ಸೇರಿದ್ದ ಮತ್ತೊಬ್ಬ ನಾಯಕ ಕ್ಯಾ. ಗೋಪಿನಾಥ್ ಅವರು ಫ್ರಾನ್ಸ್ನಿಂದಲೇ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದು, ಪಕ್ಷದ ನಾಯಕತ್ವದಲ್ಲಿ ಭಿನ್ನಾಭಿಪ್ರಾಯ ಹೆಚ್ಚುತ್ತಿರುವುದೇ ತನ್ನ ನಿರ್ಧಾರಕ್ಕೆ ಕಾರಣ ಎಂದಿದ್ದಾರೆ. ಜತೆಗೆ ಪಕ್ಷ ಹೋಗುತ್ತಿರುವ ಹಾದಿ ಸರಿಯಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಕೇಜ್ರಿವಾಲ್ ವಿರುದ್ಧ ಹರಿಹಾಯ್ದ ಅವರು, ಯಾವತ್ತೂ ಪಕ್ಷದ ನಾಯಕ ಒಂದು ಗುರಿಯಿಟ್ಟ ಮೇಲೆ ಪಲಾಯನ ಮಾಡಬಾರದು. ಅವರು ಆತ್ಮಾವಲೋಕನ ಮಾಡಬೇಕು ಎಂದಿದ್ದಾರೆ. ಅಲ್ಲದೆ, ಕೋರ್ಟ್ನಲ್ಲಿ ವೈಯಕ್ತಿಕ ಬಾಂಡ್ ನೀಡಲು ನಿರಾಕರಿಸಿದ್ದನ್ನು ಖಂಡಿಸಿದ್ದಾರೆ.
ಶಾಜಿಯಾ ಇಲ್ಮಿ ಪಕ್ಷ ತ್ಯಜಿಸಿರುವುದು ಬೇಸರದ ಸಂಗತಿ. ಅವರನ್ನು ಪಕ್ಷ ಬಿಡದಂತೆ ಸಾಧ್ಯವಾದಷ್ಟು ಮನವೊಲಿಸಲಾಯಿತು. ಆದರೆ, ಅವರು ಒಪ್ಪಲಿಲ್ಲ. ಆಕೆಯ ಗೊಂದಲಗಳೆಲ್ಲ ಪರಿಹಾರವಾದ ಬಳಿಕ ಮತ್ತೆ ಆಪ್ಗೆ ಸೇರಬಹುದು. ಪಕ್ಷದ ಬಾಗಿಲು ತೆರೆದಿರುತ್ತದೆ.
- ಯೋಗೇಂದ್ರ ಯಾದವ್, ಆಪ್ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


