ಮೋದಿ ಕಾರಿನ ಮೋಡಿ ಹೀಗಿದೆ ನೋಡಿ...

ನವದೆಹಲಿ: ನೂತನ ಪ್ರಧಾನಿ ನರೇಂದ್ರ ಮೋದಿಯವರಿಗೆ ನಿರ್ಗಮಿತ ಪ್ರಧಾನಿ ಮನಮೋಹನ್ ಸಿಂಗ್
ಅವರಿಂದ ಏನಾದರೂ ಬಳುವಳಿ ಸಿಗಲಿದೆಯೇ...? ಹೌದು, ಸಿಗಲಿದೆ. ಅದ್ಯಾವುದು ಗೊತ್ತಾ ? ಬಿಎಂಡಬ್ಲ್ಯೂ ಕಾರು! ಹೌದು. ದೇಶದಲ್ಲೇ ಗರಿಷ್ಠ ಭದ್ರತೆಯ ಕಾರು ಎಂಬ ಹೆಗ್ಗಳಿಕೆ ಗಳಿಸಿರುವ ಬಿಎಂಡಬ್ಲ್ಯೂ 7 ಸೀರಿಸ್ ಕಾರು. ಪ್ರಧಾನಿ ಮನಮೋಹನ್ ಸಿಂಗ್ ಬಳಸುತ್ತಿದ್ದ ಈ ಕಾರು ಸೋಮವಾರದಿಂದ ಮೋದಿ ಸೇವೆಗೆ ಸಿದ್ಧ.
ಮೋದಿ ಆಯ್ಕೆಗೆ ಬಿಟ್ಟಿದ್ದು...!
ಬಿಎಂಡಬ್ಲ್ಯೂ 7 ಸೀರಿಸ್ ಕಾರೇನೋ ಮೋದಿ ಸೇವೆಗೆ ಸಿದ್ಧ. ಆದರೆ, ಅದನ್ನು ಉಪಯೋಗಿಸುವುದು ಬಿಡುವುದು ಮೋದಿ ಅವರಿಗೆ ಬಿಟ್ಟಿದ್ದು. ಏಕೆಂದರೆ, ಹಾಲಿ ಬಿಎಂಡಬ್ಲೂ 7 ಸೀರಿಸ್ ಕಾರನ್ನೇ ತಮ್ಮಿಷ್ಟಕ್ಕೆ ತಕ್ಕಂತೆ ಮತ್ತಷ್ಟು ಹಿತಕರವನ್ನಾಗಿಸಿ ಉಪಯೋಗಿಸಬಹುದು. ಇಲ್ಲವಾದರೆ, ತಮ್ಮಿಷ್ಟದ ಬೇರೆ ಕಾರೊಂದನ್ನು ಖರೀದಿ ಮಾಡಲು ತಮ್ಮ ವಾಹನಗಳ ಉಸ್ತುವಾರಿ ವಹಿಸಿರುವ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ)ಗೆ ಸೂಚಿಸಬಹುದು.
ಕಾರಿನ ವಿಶೇಷಗಳು
ಭದ್ರತೆಯನ್ನು ದೃಷ್ಟಿಯಾಗಿಟ್ಟುಕೊಂಡೇ ಕಾರನ್ನು ವಿನ್ಯಾಸಗೊಳಿಸಲಾಗಿದೆ. ನೆಲಬಾಂಬ್, ಎಕೆ 47, ಎಕೆ 56 ಬಂದೂಕುಗಳ ಬುಲೆಟ್‌ಗಳನ್ನೂ ಈ ಕಾರು ತಡೆಯಬಲ್ಲದು. ತನ್ನ ಫ್ಲಾಟ್ ಟೈರ್‌ಗಳ ಮೇಲೆ ನೂರಾರು ಕಿ.ಮೀ.ಗಳ ದೂರದವರೆಗೂ ಓಡಬಲ್ಲ ಈ ಕಾರು, ತನ್ನಲ್ಲಿನ ವಿಶೇಷ ಹೀಟ್ ಸೆನ್ಸರ್‌ಗಳಿಂದಾಗಿ ಮಿಸೈಲ್‌ಗಳ ಹಾಗೂ ಬಾಂಬ್‌ಗಳ ಭೀಕರತೆಯಿಂದ ತನ್ನಲ್ಲಿರುವ ಪ್ರಯಾಣಿಕರನ್ನು ರಕ್ಷಿಸಬಲ್ಲದು.
ಸ್ಫೋಟಗೊಳ್ಳೋದಿಲ್ಲ
ದಾಳಿ ಸಂದರ್ಭದಲ್ಲಿ ಅದು ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಳ್ಳುವುದಿಲ್ಲ. ಅಲ್ಲದೇ, ಗ್ಯಾಸ್ ದಾಳಿಯಾದಾಗ, ಪ್ರಯಾಣಿಕರು ಕುಳಿತಿರುವ ಕ್ಯಾಬಿನ್, ಗ್ಯಾಸ್-ಪ್ರೂಫ್ ಚೇಂಬರ್ ಆಗಿ ಪರಿವರ್ತನೆಗೊಳ್ಳುವುದಲ್ಲದೇ, ಪ್ರಯಾಣಿಕರಿಗೆ ಆಮ್ಲಜನಕವನ್ನು ಪೂರೈಸುತ್ತದೆ.
ಕೂರೋದ್ಯಾವಾಗ ?
ಪದಗ್ರಹಣ ಸಮಾರಂಭಕ್ಕೆ ಸ್ಕಾರ್ಪಿಯೊ ಕಾರಲ್ಲೇ ಆಗಮಿಸಲಿರುವ ಮೋದಿ, ಪ್ರಮಾಣ ವಚನ ಸ್ವೀಕರಿಸಿದ ನಂತರ ಬಿಎಂಡಬ್ಲ್ಯೂ ಕಾರು ಏರಲಿದ್ದಾರೆ. ಬಳಿಕವೂ ಅವರು ಸ್ಕಾರ್ಪಿಯೋ ಕಾರನ್ನೇ ಬಳಸಲು ಇಚ್ಛಿಸಿದರೆ, ಬಿಎಂಡಬ್ಲ್ಯೂ ಕಾರಿಗೆ ಕೆಲಸವಿರುವುದಿಲ್ಲ. ಆದರೆ, ಭದ್ರತೆಯ ದೃಷ್ಟಿಯಿಂದ ಅವರು ಬಿಎಂಡಬ್ಲ್ಯೂ ಕಾರು ಬಳಸುವುದು ಸೂಕ್ತ ಎಂಬುದು ಅಧಿಕಾರಿಗಳ ಸಲಹೆ.
ಅಂಗರಕ್ಷಕ ಪಡೆ ಹೇಗಿರುತ್ತೆ
ಮೋದಿ ಅವರ ಅಂಗರಕ್ಷಕ ಪಡೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಬಾಂಬ್ ನಿಷ್ಕ್ರಿಯ ದಳದ ವಾಹನಗಳು. ಮೋದಿ ಅವರ ಕಾರನ್ನು ಯಾವಾಗಲೂ ಅವು ಸುತ್ತುವರೆದು ಸಾಗುತ್ತವೆ. ಆದರೆ, ಇಲ್ಲೊಂದು ಒಗಟಿದೆ. ಅದೇನೆಂದರೆ, ಮೋದಿ ಚಲಿಸುವ ಬಿಎಂಡಬ್ಲ್ಯೂ 7 ಸೀರಿಸ್ ಕಾರನ್ನೇ ಹೋಲುವ ಕನಿಷ್ಠ ಎರಡು ವಾಹನಗಳು ಮೋದಿ ಕಾರಿನ ಹಿಂದೆ- ಮುಂದೆ ಸಾಗಲಿವೆ. ಅವುಗಳನ್ನು ಸುತ್ತುವರಿದು ಎಸ್ಕಾರ್ಟ್ಸ್ ವಾಹನಗಳು ಸಾಗಲಿವೆ. ಇದಲ್ಲದೇ, ನಿಖರವಾದ ಜಾಗಕ್ಕೆ ನೂತನ ಪ್ರಧಾನಿ ತಲುಪುವ ಮಾರ್ಗಗಳನ್ನು ಹಿಂದೆಂದಿಗಿಂತಲೂ ಸಾಕಷ್ಟು ಬಾರಿ ಬದಲಿಸಬೇಕಾಗುತ್ತದೆ. ಪದೇ ಪದೇ ಮಾರ್ಗಗಳನ್ನು ಬದಲಿಸುವ ಮೂಲಕ, ದಾಳಿಕೋರರಿಗೆ ಚಳ್ಳೇಹಣ್ಣು ತಿನ್ನಿಸುವ ಪ್ರಯತ್ನ ಇದಾಗಿರುತ್ತದೆ. ಕಾರಣ, ಮೋದಿಗೆ ಭದ್ರತೆ ಹೆಚ್ಚು ಬೇಕು.
ಇನ್ನೇನು ಬದಲಾವಣೆ ಸಾಧ್ಯ
ಕಾರನ್ನು ಮತ್ತಷ್ಟು ಮೋದಿಯವರಿಗೆ ಮತ್ತಷ್ಟು ಆಪ್ತವಾಗಿಸಲು, ಇದರಲ್ಲಿನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಹೊಸ ತಂತ್ರಜ್ಞಾನ ಹಾಗೂ ಸ್ಯಾಟಲೈಟ್ ಫೋನ್, ಜಾಮರ್ಸ್ ಮುಂತಾದ ಹೊಸ ಸಂವಹನ ಲಕ್ಷಣಗಳನ್ನು ಅಳವಡಿಸಿದಲ್ಲಿ ಈ ಕಾರು ಮತ್ತಷ್ಟು ಭದ್ರತಾ ಅಂಶಗಳನ್ನು ಒಳಗೊಂಡಂತಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


