ಪ್ರಧಾನ ಸುದ್ದಿ

ಆದಾಯ, ಜಾತಿ ಪ್ರಮಾಣಪತ್ರ ಇನ್ನು ಆನ್‌ಲೈನ್‌ನಲ್ಲಿ

Published On :

ಕ.ಪ್ರ. ವಾರ್ತೆ | ಬೆಂಗಳೂರು |ಮೇ 24
ಆದಾಯ ಹಾಗೂ ಜಾತಿ ಪ್ರಮಾಣಪತ್ರಗಳು ಇನ್ನು ಕಾಗದ ರೂಪದಲ್ಲಿ ಸಿಗುವುದಿಲ್ಲ!
ಕಾಗದರಹಿತ ಆದಾಯ ಹಾಗೂ ಜಾತಿ ಪ್ರಮಾಣಪತ್ರ ವಿತರಣೆಗೆ ಕಂದಾಯ ಇಲಾಖೆ ಮುಂದಾಗಿದೆ. ಈ ವಿಶಿಷ್ಟ ಯೋಜನೆಯು ಮುಂದಿನ ಆರ್ಥಿಕ ವರ್ಷದಿಂದ ಜಾರಿಗೆ ಬರಲಿದ್ದು, ಪ್ರಮಾಣಪತ್ರದ ಅಕ್ರಮ ನಿಯಂತ್ರಣಕ್ಕೆ ಇದು ಕಾರಣವಾಗಲಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ನಾನಾ ಇಲಾಖೆಗಳಲ್ಲಿ ವಿವಿಧ ಉದ್ದೇಶಗಳಿಗೆ ಜಾತಿ ಹಾಗೂ ಆದಾಯ ಪ್ರಮಾಣಪತ್ರ ಬಳಸಬೇಕಾಗುತ್ತದೆ. ಆಗ ಪ್ರಮಾಣಪತ್ರದ ಪ್ರತಿ ನೀಡುವ ಬದಲು, ಅದರ ಗುರುತಿನ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಿದರೆ ಸಾಕಾಗುತ್ತದೆ. ಆನ್‌ಲೈನ್‌ನಲ್ಲಿ ಗುರುತಿನ ಸಂಖ್ಯೆ ಪರಿಶೀಲಿಸಿ ಪ್ರಮಾಣಪತ್ರವನ್ನು ಇಲಾಖಾ ಅಧಿಕಾರಿಗಳು ಖಾತ್ರಿ ಪಡಿಸುತ್ತಾರೆ. ಈ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸಿದಾಗ ಅರ್ಜಿದಾರರ ಮೊಬೈಲ್‌ಗೆ ಅಥವಾ ಖುದ್ದು ಅರ್ಜಿದಾರರಿಗೆ ಈ ಸಂಖ್ಯೆಯನ್ನು ನೀಡಲಾಗುತ್ತದೆ ಎಂದು ವಿಧಾನಸೌಧದಲ್ಲಿ ಶನಿವಾರ ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಆದಾಗ್ಯೂ ಈಗ ವಿತರಿಸುತ್ತಿರುವ ಆದಾಯ ಪ್ರಮಾಣಪತ್ರಕ್ಕೆ ಇದು ಅನ್ವಯವಾಗುವುದಿಲ್ಲ. ಈಗಾಗಲೇ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 60 ಲಕ್ಷ ಅರ್ಜಿಗಳು ಜಾತಿ ಹಾಗೂ ಆದಾಯ ಪ್ರಮಾಣಪತ್ರಕ್ಕೆ ಬಂದಿವೆ. ಇದರಲ್ಲಿ ಶೇ.54ರಷ್ಟು ಅರ್ಜಿಗಳ ಪರಿಶೀಲನೆಯಾಗಿದೆ. ಉಳಿದ ಅರ್ಜಿಗಳನ್ನು ಇನ್ನೊಂದು ತಿಂಗಳಲ್ಲಿ ಪರಿಶೀಲನೆ ನಡೆಸಿ ಶಾಲೆಗಳ ಮೂಲಕವೇ ಜೂನ್ ಅಂತ್ಯದೊಳಗೆ ಪ್ರಮಾಣಪತ್ರವನ್ನು ಸರ್ಕಾರ ವಿತರಿಸಲಿದೆ. ಇದರಲ್ಲಿ ಜಾತಿ ಪ್ರಮಾಣಪತ್ರ ಜೀವಾವಧಿಗೆ ಹಾಗೂ ಆದಾಯ ಪ್ರಮಾಣಪತ್ರವು 5 ವರ್ಷದ ಕಾಲಾವಧಿಯದ್ದಾಗಿರುತ್ತದೆ ಎಂದು ಅವರು ಹೇಳಿದರು.
ಅಕ್ರಮ-ಸಕ್ರಮ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಗ್ರಾಮೀಣ ಪ್ರದೇಶಗಳಲ್ಲಿ ಒತ್ತುವರಿಯಾದ ಸರ್ಕಾರಿ ಭೂಮಿ ಸಕ್ರಮಗೊಳಿಸಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಆದರೆ ಜೂ.3ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ ಸೆ.3ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದೆ. ಈ ವಿಚಾರವನ್ನು ಸ್ಪಷ್ಟಪಡಿಸಿರುವ ಸಚಿವ ಶ್ರೀನಿವಾಸಪ್ರಸಾದ್, ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. (ವೆಬ್ ವಿಳಾಸ- www.bhoomi.karnataka.gov.in/AKSK)
ಕೆರೆಗಳ ಮಾಹಿತಿಯೂ ಇನ್ನು ಲಭ್ಯ: ಭೂಮಿ ವೆಬ್‌ಸೈಟ್‌ನಲ್ಲಿಯೇ ಕೆರೆಗಳ ಸಂಪೂರ್ಣ ಮಾಹಿತಿ ಲಭ್ಯವಿರಲಿದೆ. ಈಗ ಲಭ್ಯವಿರುವ ದಾಖಲೆಗಳನ್ನು ಆಧರಿಸಿ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಉಳಿದ 36 ಸಾವಿರ ಕೆರೆಗಳ ಒತ್ತುವರಿ ಹಾಗೂ ಇತರ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದರಿಂದ ಸಾರ್ವಜನಿಕರು ಈ ಭೂಮಿಯ ಬಗ್ಗೆ ನಿಗಾ ಇಡಲು ಸಾಧ್ಯವಾಗುತ್ತದೆ. ತನ್ಮೂಲಕ ಕೆರೆಗಳ ರಕ್ಷಣೆ ಮಾಡಬಹುದು ಎಂದು ಸಚಿವರು ಹೇಳಿದರು.
ಭೂಮಿ ವೆಬ್‌ಸೈಟ್‌ಗೆ ಚಾಲನೆ
ರಾಜ್ಯದಲ್ಲಿನ ಸರ್ಕಾರಿ ಭೂಮಿಗಳ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿಯೇ ಪಡೆಯಬಹುದಾದ ಭೂಮಿ ವೆಬ್‌ಸೈಟ್‌ಗೆ ಸಚಿವ ಶ್ರೀನಿವಾಸಪ್ರಸಾದ್ ಚಾಲನೆ ನೀಡಿದರು. ಈಗಾಗಲೇ ಲಭ್ಯವಿರುವ ಮಾಹಿತಿಗಳನ್ನು ವೆಬ್‌ಸೈಟ್‌ಗೆ ಹಾಕಲಾಗಿದೆ. ಇದರ ಜತೆ ರಾಜ್ಯದ ಎಲ್ಲ ಭೂಮಿಗಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಇದನ್ನು ವೆಬ್‌ಸೈಟ್‌ಗೆ ಹಂತಹಂತವಾಗಿ ಸೇರಿಸಲಾಗುವುದು. ಇದರಿಂದ ಸಾರ್ವಜನಿಕರು ನಿಖರವಾಗಿ ಪ್ರತಿಯೊಂದು ಪ್ರದೇಶಗಳ ಭೂಮಿಯ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂಜು ಅವರು ವಿವರಿಸಿದರು. ಭೂಮಾಪಕರ ಕೊರತೆಯಿಂದ ಭೂಮಾಪನದಲ್ಲಿ ವಿಳಂಬವಾಗಿದೆ. ಆದರೆ ಈಗ ಹೊಸದಾಗಿ 1769 ಭೂಮಾಪಕರ ನೇಮಕವಾಗಿದ್ದು, ತರಬೇತಿ ಪಡೆಯುತ್ತಿದ್ದಾರೆ. ಇದಲ್ಲದೇ ಕೇಂದ್ರ ಸರ್ಕಾರದ ಎನ್‌ಎಲ್‌ಆರ್‌ಎಂಪಿ ಯೋಜನೆಯ ನೆರವಿನಿಂದ 600 ಕೋಟಿ ವೆಚ್ಚದಲ್ಲಿ ಎಲ್ಲ ಜಮೀನುಗಳ ಮರು ಭೂಮಾಪನ ಮಾಡಲಾಗುತ್ತಿದೆ. ಕಳೆದ 60 ವರ್ಷಗಳಿಂದ ಭೂಮಾಪನವೇ ಆಗಿರಲಿಲ್ಲ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.