ಪ್ರಧಾನ ಸುದ್ದಿ

ಹಳ್ಳ ಹಿಡಿದ ಕೌನ್ಸೆಲಿಂಗ್ ಅಕ್ರಮ ತನಿಖೆ

Published On :

ಬೆಂಗಳೂರು: ಸಿಇಟಿ ಕೌನ್ಸೆಲಿಂಗ್ ಅಕ್ರಮ ಕುರಿತ ತನಿಖೆ ಹಳ್ಳ ಹಿಡಿದಿದೆ!
ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ನೀಡಿರುವ ಹೇಳಿಕೆಯನ್ನು ನೋಡಿದರೆ ಅಕ್ರಮವನ್ನು ಹೊರಹಾಕಲು ರಾಜ್ಯ ಸರ್ಕಾರಕ್ಕೆ ಮನಸ್ಸಿಲ್ಲ ಎಂಬ ಅನುಮಾನ ಮೂಡುತ್ತಿದೆ.
'ಸಿಐಡಿ ತನಿಖೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅಧಿಕಾರಿಗಳಿಂದ ಕೇಳಿ ಹೇಳುತ್ತೇನೆ. ವಿದ್ಯಾರ್ಥಿಗಳಿಗೆ ಕೇವಲ ನೋಟಿಸ್ ನೀಡಲಾಗಿದೆ. ಇವತ್ತಿನವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ವಿಧಾನಸೌಧದಲ್ಲಿ ಶನಿವಾರ ದೇಶಪಾಂಡೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಕೂಡ ತನಿಖೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಕೈತೊಳೆದುಕೊಂಡರು. ವಿಚಿತ್ರವೆಂದರೆ ವಿದ್ಯಾರ್ಥಿಗಳು ನೀಡಿರುವ ಪ್ರತಿಕ್ರಿಯೆ ಬಗೆಗೂ ಪ್ರಧಾನ ಕಾರ್ಯದರ್ಶಿ ಅವರಿಗೆ ಯಾವುದೇ ಮಾಹಿತಿಯಿಲ್ಲ.
2013-14ನೇ ಶೈಕ್ಷಣಿಕ ವರ್ಷದ ಕೌನ್ಸೆಲಿಂಗ್‌ನಲ್ಲಿ ಸುಮಾರು 72 ವಿದ್ಯಾರ್ಥಿಗಳ ಜಾತಿ ಹಾಗೂ ಗ್ರಾಮೀಣ ವಾಸ್ತವ್ಯದ ಪ್ರಮಾಣಪತ್ರವನ್ನು ತಿದ್ದಲಾಗಿದೆ ಎಂದು 'ಕನ್ನಡಪ್ರಭ' ವಿಸ್ತೃತ ವರದಿ ಪ್ರಕಟಿಸಿತ್ತು. ಆ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿದ್ದ ಎಸ್.ಪಿ.ಕುಲಕರ್ಣಿ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು. ಪ್ರಕರಣವು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದಲ್ಲಿಯೂ ಅಮಾನತು ಪ್ರಶ್ನಿಸಿ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು.
ಇದೇ ಸಂದರ್ಭದಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ವಿಳಂಬ ವಿಚಾರಣೆ ಹಾಗೂ ಪ್ರಕರಣವನ್ನು ಹಳ್ಳ ಹಿಡಿಸುವ ಉದ್ದೇಶದಿಂದಲೇ 2013-14ನೇ ಶೈಕ್ಷಣಿಕ ವರ್ಷದ ಕೌನ್ಸೆಲಿಂಗ್ ಜತೆಗೆ ಹಿಂದಿನ ವರ್ಷದ ಕೌನ್ಸೆಲಿಂಗ್‌ನ ವಿಚಾರಣೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು.
ಆದರೆ ಇವತ್ತಿನವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿ 3 ಪ್ರಕ್ರಿಯೆಗಳು ನಡೆದಿವೆ. ಹಗರಣವು ಹೊರಗೆ ಬಂದ 3 ದಿನದ ಬಳಿಕ ಆಡಳಿತಾಧಿಕಾರಿಯನ್ನು ಅಮಾನತು ಮಾಡಲಾಯಿತು. ಆ ಬಳಿಕ ಎಲ್ಲ 72 ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಯಿತು. ಬಹುತೇಕ ಎಲ್ಲ ವಿದ್ಯಾರ್ಥಿಗಳು ನೋಟಿಸ್‌ಗೆ ಉತ್ತರವನ್ನು ನೀಡಿದರು. ಈ ಉತ್ತರವನ್ನು ಸಮಿತಿ ಮುಂದಿಟ್ಟು ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿ ಕ್ರಮ ಕೈಗೊಳ್ಳಬೇಕಿದ್ದ ಉನ್ನತ ಶಿಕ್ಷಣ ಇಲಾಖೆ, ಇಂದಿನವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆ ಮೂಲಕ ಪ್ರಕರಣದ ಆರೋಪಿಗಳ ಹಿತಾಸಕ್ತಿ ಕಾಪಾಡುವ ಉದ್ದೇಶ ಸರ್ಕಾರಕ್ಕಿದೆಯೇ ಎಂಬ ಅನುಮಾನ ಮೂಡಲು ಕಾರಣವಾಗಿದೆ.
ಪ್ರಾಧಿಕಾರದ ದಾಖಲೆಗಳ ಪರಿಶೀಲನೆ ಇಲ್ಲ: ಈ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಯಾವುದೇ ತನಿಖೆ ನಡೆಸಿಲ್ಲ. ಯಾವುದೇ ಅಭ್ಯರ್ಥಿಗಳ ಅರ್ಜಿ ಹಾಗೂ ಇತರ ದಾಖಲೆಗಳನ್ನು ಪರಿಶೀಲನೆ ಮಾಡಲು ಮುಂದಾಗಿಲ್ಲ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಈ ಹಗರಣದಿಂದ ಆದ ಒಂದೇ ಒಂದು ಪರಿಣಾಮವೆಂದರೆ ಈ ವರ್ಷದ ಕೌನ್ಸೆಲಿಂಗ್‌ನಲ್ಲಿ ಅರ್ಜಿಯಲ್ಲಿ ದಾಖಲಿಸಿದ ಜಾತಿ, ಆದಾಯ ಹಾಗೂ ಶೈಕ್ಷಣಿಕ ಪ್ರಮಾಣಪತ್ರವೇ ಅಂತಿಮ ಎಂದು ದಾಖಲಿಸಿರುವುದು.
ಪ್ರಕರಣದ ವಿಚಾರಣೆಯ ಬಗ್ಗೆ ಅಂದು ಆಸಕ್ತಿ ತೋರಿಸಿದ್ದ ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮೌನವಹಿಸಿರುವುದು ಆಶ್ಚರ್ಯ ಮೂಡಿಸಿದೆ.
ಸೀಟ್ ಬ್ಲಾಕಿಂಗ್ ಅಕ್ರಮ ಗೊತ್ತಾಗಿದ್ದೇ ಈಗ!
ರಾಜ್ಯದಲ್ಲಿ ಕಳೆದ ನಾಲ್ಕೈದು ವರ್ಷದಿಂದ ವ್ಯಾಪಕವಾಗಿ ನಡೆಯುತ್ತಿರುವ ಸೀಟ್ ಬ್ಲಾಕಿಂಗ್ ದಂಧೆಯು ರಾಜ್ಯ ಸರ್ಕಾರದ ಗಮನಕ್ಕೆ ಬಂದಿರುವುದು ಕಳೆದ 2 ವಾರದಿಂದೀಚೆಗೆ. ಈ ವಿಚಾರವನ್ನು ಉನ್ನತ ಶಿಕ್ಷಣ ಸಚಿವ ದೇಶಪಾಂಡೆ ತಿಳಿಸಿದ್ದಾರೆ. ಸೀಟ್ ಬ್ಲಾಕಿಂಗ್ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿದಿದ್ದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವಾಗ ಕಾಮೆಡ್-ಕೆ ಸೀಟುಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದೆವು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಬಗ್ಗೆ ಎಚ್ಚರ ವಹಿಸಲಾಗುವುದು. ಆದಾಗ್ಯೂ ಈ ವರ್ಷದಲ್ಲಿ ಸರೆಂಡರ್ ಆಗುವ ಸೀಟುಗಳ ಬಗ್ಗೆ ನಿಗಾ ಇಟ್ಟು ಪ್ರವೇಶ ಪ್ರಕ್ರಿಯೆಗೆ ಅನುಮತಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು. ಆದರೆ ಸೀಟ್ ಸರೆಂಡರ್ ಅಥವಾ ಸೀಟ್ ಬ್ಲಾಕಿಂಗ್ ಆಗಿರುವ ಬಗ್ಗೆ ಸ್ವತಃ ವೈದ್ಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಆದೇಶ ನೀಡಿ ತಯಾರಿಸಿದ ವರದಿ ಸರ್ಕಾರದ ಬಳಿಯಿದೆ. ಪತ್ರಿಕಾಗೋಷ್ಠಿಯಲ್ಲಿ ಪಕ್ಕಕ್ಕೆ ಕುಳಿತಿದ್ದ ಪಾಟೀಲ್ ಸುಮ್ಮನಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.