ಕೇಜ್ರಿವಾಲ್ ವಿರುದ್ಧ ಅಣ್ಣಾ ಹಜಾರೆ ಅಸಮಾಧಾನ

ಬೆಂಗಳೂರು: ದೇಶದ ಪ್ರಜೆಯಾದ ಮೇಲೆ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಲೇಬೇಕು. ಜಾಮೀನಿಗಾಗಿ ಠೇವಣಿ ಹಣ ನೀಡುವುದಿಲ್ಲ ಎನ್ನುವ ಮೊಂಡುತನ ಪ್ರದರ್ಶಿಸುವುದು ಸರಿಯಲ್ಲ ಎಂದು ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ವಿರುದ್ಧ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ವಿರುದ್ಧ ದೂರುಕೊಟ್ಟವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎನ್ನುವುದಾದರೆ ಮೇಲ್ಮನವಿ ಸಲ್ಲಿಸಿ ಆರೋಪ ಸುಳ್ಳು ಎಂದು ಸಾಬೀತು ಮಾಡುವ ಅವಕಾಶಗಳಿವೆ. ಅದನ್ನು ಬಿಟ್ಟು ನ್ಯಾಯಾಲಯದ ಆದೇಶ ಧಿಕ್ಕರಿಸಿ ಜಾಮೀನಿಗೆ ಠೇವಣಿ ಹಣ ನೀಡುವುದಿಲ್ಲ ಎನ್ನುವ ಕ್ರೇಜಿವಾಲ್ ವರ್ತನೆ ಎಂತಹವರೂ ಸಹಿಸಲಾರರು. ಜಾಮೀನಿನ ವಿಷಯದಲ್ಲಿ ಅರಂವಿಂದ ಕೇಜ್ರಿವಾಲ್ ನಡೆ ಸರಿಯಾಗಿಲ್ಲ ಎಂದರು.
ನಗರದ ಗಾಂಧಿಭವನದಲ್ಲಿ 'ಅಸಲಿ ಆಜಾದಿ ಚಳವಳಿ' ಉದ್ಘಾಟನಾ ಸಂದರ್ಭದಲ್ಲಿ ಅವರು ಮಾತನಾಡಿದರು. ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಕುರಿತು ಪ್ರಸಕ್ತ ಸನ್ನಿವೇಶದಲ್ಲಿ ಪ್ರತಿಕ್ರಯಿಸುವುದಿಲ್ಲ. ಅವರಿಗೆ ಶುಭವಾಗಲಿ ಎಂದು ಹೇಳಿದರು. ಉದ್ಯಮಿಗಳನ್ನು ಓಲೈಸುವ ದೃಷ್ಟಿಯಿಂದ ರೈತರು, ರೈತರ ಜಮೀನುಗಳಿಗೆ ಕೈ ಹಾಕಬೇಡಿ. ಗ್ರಾಮೀಣಭಾಗದ ಜನರ ಬಗ್ಗೆ ಅಲಕ್ಷಿಸಲೂ ಬೇಡಿ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ನಿಯೋಜಿತ ಪ್ರಧಾನಿ ನರೇಂದ್ರಮೋದಿಗೆ ಕಿವಿಮಾತು ಹೇಳಿದರು. ಕೃಷಿಭೂಮಿಗೆ ಹಾನಿ ಆಗದಂತೆ ನೋಡಿಕೊಳ್ಳಬೇಕಾಗಿದೆ. ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯನ್ನು ಹುಸಿಗೊಳಿಸಬೇಡಿ ಈಡೇರಿಸಿ ಎಂದರು.
ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ದೇಶಕ್ಕೆ ದೊಡ್ಡ ಆತಂಕ. ಭ್ರಷ್ಟಾಚಾರ ರಾವಣನಂತಿದ್ದರೆ, ಭಯೋತ್ಪಾದನೆ ಕುಂಭಕರ್ಣನಂತೆ. ಇವುಗಳ ನಿರ್ಮೂಲನೆಗೆ ಎಲ್ಲರೂ ಹೋರಾಡುವ ಅಗತ್ಯವಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಿದೆ, ಆದರೆ ಸ್ವಂತಿಕೆ ಬಂದಿಲ್ಲ. ತಂತ್ರ ಕುತಂತ್ರವೂ ಬಂದಿದೆ, ನಿಜವಾದ ಸ್ವಾತಂತ್ರ್ಯ ರೈತರು, ದಲಿತರಿಗೆ ಇನ್ನೂ ಸಿಕ್ಕಿಲ್ಲ. ರಾಮರಾಜ್ಯದ ಕನಸು ನನಸಾಗಬೇಕಾದರೆ ಗ್ರಾಮರಾಜ್ಯವಾಗಬೇಕು ಎಂದರು. ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಮಾತನಾಡಿ, ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಯಾವುದೇ ರಂಗದಲ್ಲಿ ವೈಯಕ್ತಿಕ ಮೌಲ್ಯಗಳು ಕುಸಿಯುತ್ತಿವೆ. ಪ್ರಜಾಪ್ರಭುತ್ವ ಇಂದು ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಎನ್ನುವಂತಾಗಿದೆ ಎಂದರು. ನೀರಿಗಾಗಿ ಆಂದೋಲನದ ರುವಾರಿ ರಾಜೇಂದ್ರಸಿಂಗ್, ಎಚ್.ಎಸ್. ದೊರೆಸ್ವಾಮಿ, ಸುಬ್ಬರಾವ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


