ಪ್ರಧಾನ ಸುದ್ದಿ

ಅಪ್ಪನ ನಂತರ ಮಗನಿಗೆ ದಕ್ಕಿದ ಭಾಗ್ಯ!

ಅಪ್ಪನ ನಂತರ ಮಗನಿಗೆ ದಕ್ಕಿದ ಭಾಗ್ಯ!
Published On :

ದಾವಣಗೆರೆ: ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ದಾವಣಗೆರೆಯ ಜಿ.ಮಲ್ಲಿಕಾರ್ಜುನಪ್ಪ ಅವರನ್ನು ಕೇಂದ್ರ ಸಂಪುಟ ದರ್ಜೆ ಸ್ಥಾನ ಹುಡುಕಿಕೊಂಡು ಬಂದಿತ್ತು. ಆಗ ಮಲ್ಲಿಕಾರ್ಜುನಪ್ಪ ಅದನ್ನು ನಯವಾಗಿ ನಿರಾಕರಿಸಿ, ರಾಜ್ಯದ ಮತ್ತೊಬ್ಬ ಯುವ ನಾಯಕನಿಗೆ ಅವಕಾಶ ಕೊಡಿಸಿದ್ದರು.
ಈಗ ಆ ಧೀಮಂತ ನಾಯಕನ ಪುತ್ರ ಜಿ.ಎಂ.ಸಿದ್ದೇಶ್ವರ ಅಂಥದ್ದೊಂದು ಅವಕಾಶ ಪಡೆದಿದ್ದಾರೆ... ಹೌದು. ಮಧ್ಯ ಕರ್ನಾಟಕದ ದಾವಣಗೆರೆ ಮತದಾರರಿಗೆ ನೀಡಿದ್ದ ಭರವಸೆಯಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದಲ್ಲಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಈ ಮೂಲಕ ಕಮಲವನ್ನು ಆರಿಸಿ ದೆಹಲಿಗೆ ಕಳಿಸಿದ ಜನರಿಗೆ ನೀಡಿದ್ದ ಮಾತನ್ನೂ ಮೋದಿ ಉಳಿಸಿಕೊಂಡಿದ್ದಾರೆ. ದಾವಣಗೆರೆ ಕ್ಷೇತ್ರದ 37 ವರ್ಷದ ಇತಿಹಾಸದಲ್ಲಿ ಕೇಂದ್ರ ಸಚಿವ ಸ್ಥಾನ ಒದಗಿ ಬಂದಿರುವುದು ಇದೇ ಮೊದಲು. ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿ 1971ರಲ್ಲಿ ಸಂಸದರಾಗಿದ್ದ ಕೊಂಡಜ್ಜಿ ಬಸಪ್ಪ 1974- 76 ರಲ್ಲಿ ಕೇಂದ್ರ ಆರೋಗ್ಯ ಸಚಿವರಾಗಿದ್ದು ಬಿಟ್ಟರೆ, ಈವರೆಗೆ ದಾವಣಗೆರೆ ಸಂಸದರಾದವರಿಗೆ ಕೇಂದ್ರದಲ್ಲಿ ಯಾವುದೇ ಸ್ಥಾನಮಾನ, ಅವಕಾಶ ಸಿಕ್ಕಿರಲಿಲ್ಲ. ಇದೀಗ ಮಧ್ಯ ಕರ್ನಾಟಕದ ಸಿದ್ದೇಶ್ವರ್ ಅವರಿಗೆ 'ನಮೋ' ಅವಕಾಶ ನೀಡಿ, ಸ್ಪಂದಿಸಿದ್ದಾರೆ.
ಜಿ.ಮಲ್ಲಿಕಾರ್ಜುನಪ್ಪ ಅಗಲಿದ ನಂತರ 2004ರ ಚುನಾವಣೆಯಲ್ಲಿ ಜಿ.ಎಂ. ಸಿದ್ದೇಶ್ವರ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಮೊದಲ ಚುನಾವಣೆಯಲ್ಲೇ ಜಯಭೇರಿ ಬಾರಿಸಿದ ಸಿದ್ದೇಶ್ವರ್ ಅವರಿಗೆ ಮತ್ತೆ ಹಿಂದುರುಗಿ ನೋಡುವ ಪ್ರಮೇಯ ಬರಲಿಲ್ಲ. 2009ರ ಚುನಾವಣೆಯಲ್ಲೂ ಗೆದ್ದ ಸಿದ್ದೇಶ್ವರ ಕಳೆದ ಏಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲೂ 17 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದರು. ಹ್ಯಾಟ್ರಿಕ್ ಸಾಧನೆ ಮಾಡಿದ ಸಿದ್ದೇಶ್ವರ್ ಅವರಿಗೆ ನಮೋ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಬಗ್ಗೆ ಫಲಿತಾಂಶ ಬಂದ ಮಾರನೆ ದಿನವೇ 'ಕನ್ನಡಪ್ರಭ' ಸಿದ್ದೇಶ್ವರ ಹೆಸರನ್ನು ಪ್ರಸ್ತಾಪಿಸಿತ್ತು.

ವಿವರ
-  ಜಿ.ಎಂ. ಸಿದ್ದೇಶ್ವರ್
-  ಸಂಸದರು, ದಾವಣಗೆರೆ ಲೋಕಸಭಾ ಕ್ಷೇತ್ರ.
- ಜನ್ಮ ದಿನಾಂಕ: 5.7.1952.
- ಪತ್ನಿ ಗಾಯತ್ರಿ ಸಿದ್ದೇಶ್ವರ.
-  ಮಕ್ಕಳು: ಜಿ.ಎಸ್.ಅನಿತ್, ಜಿ.ಎಸ್. ಅಶ್ವಿನಿ.
- ವಾಸ: ದಾವಣಗೆರೆ.
-  ಸಂಸದ: 2004, 2009, 2014 ರಲ್ಲಿ ಸತತ 3 ಅವಧಿಗೂ ಸಂಸದರಾಗಿ ದಾವಣಗೆರೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆ.
-  ಮಾಜಿ ಸಂಸದ, ಕಾಂಗ್ರೆಸ್ಸಿನ ಹಿರಿಯ ನಾಯಕ ದಿವಂಗತ ಚೆನ್ನಯ್ಯ ಒಡೆಯರ್ ಅವರ ಸಾಧನೆ ಸರಿಗಟ್ಟಿದ ಸಾಧನೆ.

ನಾಗರಾಜ ಬಡದಾಳ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.