ಪ್ರಧಾನ ಸುದ್ದಿ

ಪ್ರಜಾಪ್ರಭುತ್ವದ ಸಮ್ಮಿಳನ- ಸಮ್ಮೇಳನ

Published On :

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ರಾಷ್ಟ್ರಪತಿ ಭವನದ ಹೊರ ಆವರಣದಲ್ಲಿ ಸೂರ್ಯಸ್ತವಾಗಿ ದೀಪಗಳೆಲ್ಲ ಜಗಮಗಿಸುವ ಹೊತ್ತು. ನರೇಂದ್ರ ಮೋದಿ- ನವಾಜ್ ಷರೀಫ್ರಿಂದ ಪರಸ್ಪರ ಹಸ್ತಲಾಘವ... ಆ ಹಸ್ತಲಾಘವ ಕೇವಲ ಸೌಜನ್ಯವಷ್ಟೆ ಆಗಿರಲಿಲ್ಲ. ಉಪಖಂಡದ ಎರಡು ರಾಷ್ಟ್ರಗಳ ನಡುವೆ ಮುರಿದು ಬಿದ್ದ ಸ್ನೇಹ ಸಂಬಂಧ ಮರುಜೋಡಣೆಗೆ ನಾಂದಿಯಾಗಿತ್ತು.
ಅಷ್ಟರ ಮಟ್ಟಿಗೆ ನರೇಂದ್ರಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ಸಮ್ಮೇಳನ. ಮೋದಿ ಅವರ ಭಾಷೆಯಲ್ಲೇ ಹೇಳುವುದಾದರೆ- ಅದು ದಕ್ಷಿಣ ಏಷ್ಯಾ ಪರಿವಾರದ ಸಂಗಮ.
ಸಮಾರಂಭದಲ್ಲಿ ಸಾರ್ಕ್ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಕೂಟ) ರಾಷ್ಟ್ರಗಳ ಎಲ್ಲ ಪ್ರಮುಖರು ಪಾಲ್ಗೊಂಡಿದ್ದರು. ವಿಶ್ವದಲ್ಲೇ ಪ್ರಜಾಪ್ರಭುತ್ವ ಆಡಳಿತ ಇರುವ ಭಾರತ, ಪಾಕಿಸ್ತಾನ ಸೇರಿದಂತೆ ಪ್ರಮುಖ ರಾಷ್ಟ್ರಗಳ ಗುಂಪು ಸಾರ್ಕ್.
ಸಾರ್ಕ್ ಪ್ರತಿನಿಧಿಸುವ ರಾಷ್ಟ್ರಗಳ ಮುಖ್ಯಸ್ಥರು ಪ್ರಜಾಪ್ರಭುತ್ವ ಮಾದರಿಯಲ್ಲೇ ಆಯ್ಕೆ ಆದವರು. ದ್ವೈವಾರ್ಷಿಕ (ಸಾರ್ಕ್) ಸಮ್ಮೇಳನದಲ್ಲಿ ಮಾತ್ರ ಒಂದಾಗುತ್ತಿದ್ದ ಈ ರಾಷ್ಟ್ರಗಳ ನಾಯಕರು ಸೋಮವಾರ ರಾಷ್ಟ್ರಪತಿ ಭವನದಲ್ಲಿ ಒಗ್ಗೂಡಿದ್ದರು. ಅದು ನರೇಂದ್ರ ಮೋದಿ ಸಮ್ಮುಖದಲ್ಲಿ. ಪ್ರಜಾಪ್ರಭುತ್ವ ರಾಷ್ಟ್ರಗಳ ಪಾಲಿಗೆ ಅದೊಂದು ಅಪೂರ್ವ ಕ್ಷಣ.
ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್, ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಷೆ, ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜಾಯ್, ಬಾಂಗ್ಲಾ ದೇಶದ ಪ್ರತಿನಿಧಿ ಸ್ವೀಕರ್ ಶಿರಿನ್ ಚೌಧರಿ, ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ, ಭೂತಾನ್ ಪ್ರಧಾನಿ ಷೇರಿಂಗ್ ತೊಬ್ಗೆ, ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಫಯೂಮ್ ಹಾಜರಿದ್ದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿದ ನಂತರ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರು, ಪ್ರಧಾನಿ ನರೇಂದ್ರಮೋದಿ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿ ಕೆಲ ಕ್ಷಣ ಚರ್ಚಿಸಿದರು.
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್- ಭಾರತದ ಪ್ರಧಾನಿ ನರೇಂದ್ರಮೋದಿ ಪರಸ್ಪರ ಹಸ್ತಲಾಘವ ಮಾಡಿದ ಕ್ಷಣವೂ ಐತಿಹಾಸಿಕ. ಉಭಯ ರಾಷ್ಟ್ರಗಳ ನಡುವೆ ಶೀತಲ ಸಮರ ಇದ್ದಾಗಲೂ ಪಾಕಿಸ್ತಾನದತ್ತ ಸ್ನೇಹ ಹಸ್ತ ಚಾಚಿದ ಮೋದಿ ಅವರನ್ನು ಶರೀಫ್ ಆತ್ಮೀಯತೆಯಿಂದ ಅಭಿನಂದಿಸಿದರು.
ಈ ಹೊತ್ತಿನಲ್ಲೇ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರೆಲ್ಲರೂ ಪ್ರಧಾನಿ ನರೇಂದ್ರಮೋದಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಪಟ್ಟರು. ಸಾರ್ಕ್ ಪ್ರತಿನಿಧಿ ಅಲ್ಲದಿದ್ದರೂ ಮಾರಿಷಸ್ ಅಧ್ಯಕ್ಷ ನವೀನ್ರಾಮ್ ಗೂಲಮ್ ಅವರು ಈ ಸಂಭ್ರದಲ್ಲಿ ಭಾಗಿಯಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.