ಒಂದಾಗಿದ್ದರೆ ನಮ್ಮನ್ನು ಯಾರೂ ತಡೆಯರು

ನವದೆಹಲಿ: ಸಾರ್ಕ್ ರಾಷ್ಟ್ರಗಳೊಂದಿಗಿನ 'ಫಲಪ್ರದ' ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸದಸ್ಯ ದೇಶಗಳ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಪ್ರಾದೇಶಿಕ ಸಹಕಾರದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
ಸೋಮವಾರ ಸಂಜೆ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ ಕೆಲಹೊತ್ತಿನಲ್ಲಿಯೇ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ಕಾರ್ಯ ಆರಂಭಿಸಿದ್ದ ಮೋದಿ, ಮಂಗಳವಾರ ಸಾರ್ಕ್ ರಾಷ್ಟ್ರಗಳ ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ಆರಂಭಿಸಿದರು.
ಮೊದಲ ಭೇಟಿ ಅಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಜತೆ. ಹೆರಾತ್ನಲ್ಲಿ ಭಾರತೀಯ ರಾಯಭಾರ ಕಚೇರಿ ಮೇಲಿನ ದಾಳಿಯನ್ನು ಸಮರ್ಥವಾಗಿ ತಡೆಯುವಲ್ಲಿ ಆಪ್ಘನ್ ರಕ್ಷಣಾ ಪಡೆಗಳ ಸಹಕಾರವನ್ನು ಮೋದಿ ಶ್ಲಾಘಿಸಿದರು. ದಾಳಿಗೆ ಲಷ್ಕರ್-ಎ-ತೊಯ್ಬಾ ಕಾರಣ ಎಂದು ಕರ್ಜೈ ಆರೋಪಿಸಿದರು ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ, ಬಾಂಗ್ಲಾದೇಶ ಸಂಸತ್ ಸ್ಪೀಕರ್ ಶಿರಿನ್ ಚೌಧರಿ, ಮಾಲ್ಡೀವ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್, ಭೂತಾನ್ ಪ್ರಧಾನಿ ತ್ಸೆರಿಂಗ್ ತೊಗ್ಬೆ, ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲಾ, ಮಾರಿಷಸ್ ಪ್ರಧಾನಿ ನವೀನ್ ರಾಮ್ಗುಲಾಮ್ ಜತೆಗೂ ಮೋದಿ ಮಾತುಕತೆ ನಡೆಸಿದರು. 'ಭಾರತದೊಂದಿಗೆ ಸ್ವಯಂಪ್ರೇರಿತ ತೆರಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಲಾಗಿದೆ' ಎಂದು ರಾಮ್ಗುಲಾಮ್ ಹೇಳಿದ್ದಾರೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, 'ಸಾರ್ಕ್ ದೇಶಗಳೊಂದಿಗೆ ಪ್ರಧಾನಿ ಮಾತುಕತೆ ಫಲಪ್ರದ. ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಆ ರಾಷ್ಟ್ರಗಳ ಮುಖಂಡರು ಆಹ್ವಾನ ನೀಡಿದ್ದು, ಪ್ರಧಾನಿಯವರು ಅದನ್ನು ಒಪ್ಪಿಕೊಂಡಿದ್ದಾರೆ' ಎಂದು ತಿಳಿಸಿದರು.
ಮೀನುಗಾರರ ಬಿಡುಗಡೆಗೆ ಆಗ್ರಹ
ನೌಕಾಪಡೆಯಿಂದ ಬಂಧಿತರಾಗಿರುವ ಭಾರತೀಯ ಮೀನುಗಾರರ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಸರ್ಕಾರವನ್ನು ಆಗ್ರಹಿಸಿದ್ದಾರೆ. ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದ ವೇಳೆ, ಮೀನುಗಾರರ ಬಿಡುಗಡೆ ವಿಚಾರವನ್ನು ಮೋದಿ ಪ್ರಮುಖವಾಗಿ ಪ್ರಸ್ತಾಪಿಸಿದರು. ರಾಜಪಕ್ಸೆ ಭೇಟಿಗೆ ಮಿತ್ರಪಕ್ಷ ಎಂಡಿಎಂಕೆ ಸೇರಿದಂತೆ ತಮಿಳುನಾಡಿನ ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದ್ದರೂ ಮೋದಿ ಅದಕ್ಕೆ ಸೊಪ್ಪು ಹಾಕಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


