ಕರ್ನಲ್ ಪತ್ನಿಗೆ ಅಲೆದಾಟದ ಶಿಕ್ಷೆ!

ಮುಖ್ಯಮಂತ್ರಿಗಳೇ ಇದು ನಿಮ್ಮ ಸರ್ಕಾರಕ್ಕೆ ಶೋಭೆಯೇ?
ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 28
ಮರಣೋತ್ತರ ಅಶೋಕ ಚಕ್ರ ವಿಜೇತ ಸೈನಿಕನ ಹೆಂಡತಿ ಭೂಮಿಗಾಗಿ ಬರೋಬ್ಬರಿ 6 ವರ್ಷಗಳಿಂದ ಸರ್ಕಾರಿ ಕಚೇರಿ ಅಲೆಯುತ್ತಿದ್ದಾರೆ!
ಪೊಲೀಸ್ ಗುಂಡೇಟಿಗೆ ಸತ್ತ ಆರೋಪಿಗೆ ಕೂಡಲೇ 10 ಲಕ್ಷ ಬಿಡುಗಡೆ ಮಾಡುವ ರಾಜ್ಯ ಸರ್ಕಾರ, ಭಯೋತ್ಪಾಕರ ಗುಂಡೇಟಿಗೆ ಬಲಿಯಾದ ವೀರಯೋಧನ ಹೆಂಡತಿಗೆ ಭೂಮಿ ಮಂಜೂರು ಮಾಡಲು 6 ವರ್ಷಗಳಿಂದ ಮಾನಸಿಕ ಕಿರುಕುಳ ನೀಡುತ್ತಿದೆ. 'ಹಿಂದಿನ ಸರ್ಕಾರದ ಆದೇಶ, ನಮಗೆ ಸಂಬಂಧವಿಲ್ಲ, ನೀವೆ ಭೂಮಿ ಹುಡುಕಿ ಕೊಡಿ, ಏನಾಗಿದೆಯೋ ಗೊತ್ತಿಲ್ಲ' ಇಂತಹ ಪಕ್ಕಾ ಬೇಜವಾಬ್ದಾರಿ ಹೇಳಿಕೆಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಅಶೋಕ ಚಕ್ರ ಪಡೆದ ವೀರಯೋಧನಿಗೆ ಕರ್ನಾಟಕ ಸರ್ಕಾರ ನೀಡುತ್ತಿರುವ ಗೌರವವಿದು!
ಜಮ್ಮು-ಕಾಶ್ಮೀರದಲ್ಲಿ ಕಮಾಂಡಿಂಗ್ ಆಫೀಸರ್ ಆಗಿದ್ದ ಕರ್ನಲ್ ವಸಂತ್ ಎ.ಸಿ ಕುಟುಂಬದ ವ್ಯಥೆಯಿದು. ಭೂಮಿ ಕೊಡುತ್ತೇವೆ ಎಂದು ಸರ್ಕಾರವೇ ನಿಯಮ ರೂಪಿಸಿ, ತಾನು ನೀಡುವ ಭೂಮಿಗೆ ವೀರಯೋಧರ ಕುಟುಂಬವನ್ನು ಅಲೆಸಿ ಅವಮಾನ ಮಾಡುತ್ತಿದೆ. ತನ್ನ ಕರ್ತವ್ಯವಾಗಿ ಮನೆಯ ಬಾಗಿಲಿಗೆ ಹೋಗಿ ಭೂಮಿ ಹಸ್ತಾಂತರ ಮಾಡಬೇಕಿದ್ದ ರಾಜ್ಯ ಸರ್ಕಾರ, ವಸಂತ್ ಅವರ ಹೆಂಡತಿ ಸುಭಾಷಿಣಿ ಅವರು ಸರ್ಕಾರಿ ಕಚೇರಿಗೆ ಬರುವಂತೆ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ.
ಜಮ್ಮುವಿನ ಉರಿ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ 2007ರ ಜು.31ರಂದು ನಡೆದ ಗುಂಡಿನ ಚಕಮಕಿಯಲ್ಲಿ ವಸಂತ್ ಅವರು ಹತರಾಗಿದ್ದರು. ನಂತರದ 2008ರಲ್ಲಿ ವಸಂತ್ ಅವರಿಗೆ ಮರಣೋತ್ತರವಾಗಿ 'ಅಶೋಕ ಚಕ್ರ' ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಆ ಸಂದರ್ಭದಲ್ಲಿ ನಗದು ಬಹುಮಾನ ಅಥವಾ ಭೂಮಿ ಪಡೆಯುವ ಅವಕಾಶವನ್ನು ವಸಂತ್ ಪತ್ನಿ ಸುಭಾಷಿಣಿ ಹೊಂದಿದ್ದರು.
ಹಣದ ಬದಲು ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಅವರು 2008ರಲ್ಲಿಯೇ ಮನವಿ ಸಲ್ಲಿಸಿದ್ದರು. ಸುಮಾರು 3 ವರ್ಷಗಳ ಕಾಲ ಯಾವುದೇ ಸೂಚನೆ ಸಿಗದ ನಂತರ 2011ರಲ್ಲಿ ಸುಭಾಷಿಣಿಯವರೇ ಬೆಂಗಳೂರು ಗ್ರಾಮಾಂತರದಲ್ಲಿ ಭೂಮಿ ಹುಡುಕಿಕೊಟ್ಟು ಮಂಜೂರು ಮಾಡುವಂತೆ ಮನವಿ ಮಾಡಿದ್ದರು.
ಒಂದೊಮ್ಮೆ ರಾಜ್ಯ ಸರ್ಕಾರ ಸೂಕ್ತ ಸಮಯದಲ್ಲಿ ಭೂಮಿ ಹಂಚಿಕೆ ಮಾಡದಿದ್ದರೆ ಸೈನಿಕರು ಅಥವಾ ಅವರ ಪತ್ನಿಯರು ಸೂಚಿಸಿರುವ ಭೂಮಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಇದೇ ಸಂದರ್ಭದಲ್ಲಿ ಹೈಕೋರ್ಟ್ ಆದೇಶ ಮಾಡಿತ್ತು.
ನೀವೇ ಭೂಮಿ ಹುಡುಕಿಕೊಳ್ಳಿ ಎನ್ನುವುದು ರಾಜ್ಯ ಸರ್ಕಾರದ ಮೊದಲ ಬೇಜವಾಬ್ದಾರಿ. ಆದರೆ ಸುಭಾಷಿಣಿ ಅವರು ಹುಡುಕಿಕೊಟ್ಟ ಭೂಮಿ ಬದಲು ಹಳ್ಳವಿರುವ ನಿಷ್ಪ್ರಯೋಜಕ ನಿವೇಶನ ಮಂಜೂರು ಮಾಡಿದ್ದು ಇನ್ನೊಂದು ಬೇಜವಾಬ್ದಾರಿ.
ಆ ಸರ್ಕಾರದ ನಿರ್ಧಾರ,
ನಮಗೆ ಸಂಬಂಧವಿಲ್ಲ
2014ರ ಆರಂಭದಲ್ಲಿ ಬಿಜೆಪಿ ಸರ್ಕಾರ ಸುಭಾಷಿಣಿ ಅವರಿಗೆ 5 ಎಕರೆ ಗೋಮಾಳ ಅಥವಾ 2 ಎಕರೆ ನೀರಾವರಿ ಭೂಮಿ ನೀಡಲಾಗುವುದು ಎಂದು ಸಚಿವ ಸಂಪುಟ ಸಭೆಯಲ್ಲಿಯೂ ನಿರ್ಧಾರ ಮಾಡಿತ್ತು. ಆದರೆ ಘೋಷಣೆಯ ನಂತರ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಕೇವಲ ಘೋಷಣೆಯಾಗಿ ಉಳಿಯಿತು. ಈ ಬಗ್ಗೆ ಹೊಸ ಸರ್ಕಾರವನ್ನು ಸುಭಾಷಿಣಿ ಅವರು ಪ್ರಶ್ನಿಸಿದಾಗ, 'ಇದು ಹಿಂದಿನ ಸರ್ಕಾರದ ಆದೇಶ, ನಮಗೆ ಸಂಬಂಧವಿಲ್ಲ' ಎಂದು ಉತ್ತರಿಸಿದ್ದಾರೆ. ಈ ಬಗ್ಗೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಸುಭಾಷಿಣಿ ವಸಂತ್, 'ಹಿಂದಿನ ಸರ್ಕಾರದ ನಿರ್ಣಯ ನಮಗ ೆಸಂಬಂಧವಿಲ್ಲ ಎನ್ನುತ್ತಾರೆ. ಸರ್ಕಾರಿ ಇಲಾಖೆಗೆ ಈ ರೀತಿ ಅಲೆಯುವುದು ಬೇಸರ ತರಿಸಿದೆ' ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


