ಪ್ರಧಾನ ಸುದ್ದಿ

ದಶಾಂಶ ಸೂತ್ರ ಮೋದಿ ಪ್ರಗತಿ ಮಂತ್ರ

ದಶಾಂಶ ಸೂತ್ರ ಮೋದಿ ಪ್ರಗತಿ ಮಂತ್ರ
Published On :

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 48 ಗಂಟೆಗಳ ಅವಧಿಯಲ್ಲಿ 2ನೇ ಸಂಪುಟ ಸಭೆ ನಡೆಸಿದ್ದಾರೆ. ಗುರುವಾರ ನಡೆದ ಸಂಪುಟ ಸಭೆಯ ವೇಳೆ ಸುಸೂತ್ರ ಸರ್ಕಾರಕ್ಕೆ ಹತ್ತು ಅಂಶಗಳ ಸೂತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಅಧಿಕಾರಿ ವರ್ಗಕ್ಕೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದು, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಇವುಗಳಲ್ಲಿ ಸೇರಿವೆ.

ಮೋದಿ ಸರ್ಕಾರದ 10 ಆದ್ಯತಾ ಪಟ್ಟಿಗಳು
ಅಧಿಕಾರಿ ವರ್ಗದಲ್ಲಿ ಆತ್ಮವಿಶ್ವಾಸ ಮೂಡಿಸುವುದು.ಯಾವುದೇ ಪರಿಸ್ಥಿತಿ ಎದುರಿಸುವಂತೆ ಮಾಡುವುದು.
ನವನವೀನ ಚಿಂತನೆಗಳಿಗೆ ಸ್ವಾಗತ, ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ
ಶಿಕ್ಷಣ, ಆರೋಗ್ಯ, ನೀರು, ಶಕ್ತಿ ಮತ್ತು ರಸ್ತೆಗಳಿಗೆ ಆದ್ಯತೆ
ಸರ್ಕಾರದಲ್ಲಿ ಪಾರದರ್ಶಕತೆ. ಟೆಂಡರ್ ಮತ್ತು ಇತರೆ ಸರ್ಕಾರಿ ಕಾರ್ಯಗಳ ಇ-ಹರಾಜು
ಅಂತರ್-ಸಚಿವಾಲಯ ಸಹಕಾರ ಉತ್ತಮಗೊಳಿಸಲು ಅಂತರ್-ಸಚಿವಾಲಯಕ್ಕಾಗಿ ಪ್ರತ್ಯೇಕ ವ್ಯವಸ್ಥೆ
ಜನಕೇಂದ್ರಿತ ವ್ಯವಸ್ಥೆ ಜಾರಿ. ಆಶ್ವಾಸನೆ ಈಡೇರಿಸಲು ಸರ್ಕಾರಿ ಯಂತ್ರಕ್ಕೆ ಉತ್ತೇಜನ
ಆರ್ಥಿಕತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ
ಮೂಲ ಸೌಕರ್ಯ ಮತ್ತು ಹೂಡಿಕೆಯಲ್ಲಿ ಸುಧಾರಣೆ
ಕಾಲಮಿತಿಯೊಳಗೆ ನೀತಿಗಳ ಅನುಷ್ಠಾನ
ಸರ್ಕಾರದ ನೀತಿಗಳಲ್ಲಿ ಸ್ಥಿರತೆ ಮತ್ತು ಸುಸ್ಥಿರತೆ

ಇಂದು 7 ರೇಸ್‌ಕೋರ್ಸ್ ರಸ್ತೆಗೆ
ಸದ್ಯ ಗುಜರಾತ್ ಭವನದಲ್ಲೇ ಇರುವ ಪ್ರಧಾನಿ ಮೋದಿ ಅವರು ಶುಕ್ರವಾರದಿಂದ ಪ್ರಧಾನಿಯವರ ಅಧಿಕೃತ ನಿವಾಸ ಅಂದರೆ 7 ರೇಸ್‌ಕೋರ್ಸ್ ರಸ್ತೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಕುಟುಂಬ ಸದಸ್ಯರಿಲ್ಲದೇ ಏಕಾಂಗಿಯಾಗಿ ಅಧಿಕೃತ ನಿವಾಸಕ್ಕೆ ತೆರಳುತ್ತಿರುವ ಮೊದಲ ಪ್ರಧಾನಿ ಮೋದಿ. ಈ ಹಿಂದಿನ ಎಲ್ಲ 14 ಪ್ರಧಾನಮಂತ್ರಿಗಳು ಕುಟುಂಬ ಸದಸ್ಯರು ಅಥವಾ ಸಂಬಂಧಿಯನ್ನು ಅಧಿಕೃತ ನಿವಾಸಕ್ಕೆ ಕರೆದೊಯ್ದಿದ್ದರು.

ಸಚಿವರಿಗೆ 100 ದಿನದ ಟಾರ್ಗೆಟ್
ತನ್ನ ಸಂಪುಟದ ಎಲ್ಲ ಸಚಿವರಿಗೂ ಪ್ರಧಾನಿ ಮೋದಿ 100 ದಿನಗಳ ಟಾರ್ಗೆಟ್ ನೀಡಿದ್ದಾರೆ. ದಕ್ಷ ಆಡಳಿತ, ವಿವಿಧ ಕಾರ್ಯಕ್ರಮಗಳ ಅನುಷ್ಠಾನವನ್ನು ಗುರಿಯಾಗಿಟ್ಟುಕೊಂಡು 100 ದಿನಗಳ ಅಜೆಂಡಾವನ್ನು ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಪ್ರತಿ ಸಚಿವಾಲಯವು ಈ ಸಮಯದ ತಮ್ಮ ಆದ್ಯತಾ ವಲಯಗಳನ್ನು ಪಟ್ಟಿ ಮಾಡುವಂತೆ, ತಮ್ಮದೇ ಆದ ಟೈಂ ಟೇಬಲ್ ರಚಿಸುವಂತೆ ಸಚಿವರಿಗೆ ಮೋದಿ ಆದೇಶಿಸಿದ್ದಾರೆ. ಇದೇ ವೇಳೆ, ದೇಶದ ಅಭಿವೃದ್ಧಿಗೆ ರಾಜ್ಯಗಳ ಪ್ರಗತಿಯೂ ಮುಖ್ಯ ಎಂದಿರುವ ಪ್ರಧಾನಿ, ರಾಜ್ಯ ಸರ್ಕಾರಗಳು, ಸಂಸದರು ತರುವ ಅಹವಾಲುಗಳ ಬಗ್ಗೆಯೂ ಗಮನ ಹರಿಸುವಂತೆ ತಿಳಿಸಿದ್ದಾರೆ.

ಕಾರ್ಯಾಲಯದಲ್ಲಿ ಒಂದು ಸುತ್ತು
ಗುರುವಾರ ಪ್ರಧಾನಿ ಮೋದಿ ಅವರು ತಮ್ಮ ಕಾರ್ಯಾಲಯದ ಆವರಣದಲ್ಲಿ ನಡೆದಾಡಿದರು. ಈ ವೇಳೆ ವಿವಿಧ ಅಧಿಕಾರಿಗಳ ಜತೆ ಕುಶಲೋಪರಿ ನಡೆಸಿ, ಕೆಲಸ ಕಾರ್ಯಗಳ ಬಗ್ಗೆ ವಿವರಣೆಯನ್ನೂ ಪಡೆದರು. ಅಧಿಕಾರಿಗಳೊಂದಿಗೆ ಫೋಟೋಗೂ ಪೋಸ್ ನೀಡಿದರು. ನಂತರ ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ, ಫೋಟೋಗಳನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದರು.

ವಾರಾಣಸಿ ಉಳಿಸಿಕೊಂಡ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅದರಂತೆ, ತಾವು ಕಣಕ್ಕಿಳಿದು ಗೆದ್ದ ವಡೋದರಾ ಕ್ಷೇತ್ರವನ್ನು ತೊರೆದಿದ್ದಾರೆ. ಗುರುವಾರ ವಡೋದರಾ ಸಂಸದ ಸ್ಥಾನಕ್ಕೆ ಅವರು ರಾಜಿನಾಮೆ ಸಲ್ಲಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದು ಗೆದ್ದರೆ ಅಂತಹ ಅಭ್ಯರ್ಥಿಗಳು ಫಲಿತಾಂಶ ಪ್ರಕಟವಾದ 14 ದಿನಗಳೊಳಗೆ ಒಂದು ಕ್ಷೇತ್ರವನ್ನು ತ್ಯಜಿಸಬೇಕು. ಅದರಂತೆ ಮೋದಿ ಅವರು ವಡೋದರಾವನ್ನು ಬಿಟ್ಟುಕೊಟ್ಟು, ದೇಗುಲ ನಗರಿಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.