

ಕೊಪ್ಪಳ: ನಿಗಮ ಮತ್ತು ಮಂಡಳಿಗಳ ನೇಮಕಾತಿ ಮುಗಿದ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಕೊಪ್ಪಳ ಸಮೀಪದ ಏರೋಡ್ರೋಮ್‌ನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದು, ನಿಗಮ, ಮಂಡಳಿಗಳ ಅಧ್ಯಕ್ಷರ ಪಟ್ಟಿ ಸಿದ್ಧವಾಗಿದ್ದು, ಯಾವುದೇ ಕ್ಷಣದಲ್ಲೂ ಹೊರಬೀಳಬಹುದು ಎಂದರು. ಅಲ್ಲದೆ ಇದಾದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಸಹ ತಿಳಿಸಿದರು.
ನಿಗಮ, ಮಂಡಳಿ ನೇಮಕ ಪ್ರಕ್ರಿಯೆ ಬಹುತೇಕ ಅಂತಿಮವಾಗಿದ್ದು, ಪಟ್ಟಿ ಸಿದ್ಧವಾಗಿದೆ. ಘೋಷಣೆಯಷ್ಟೇ ಬಾಕಿ ಇದೆ. ಇನ್ನು ವಿಳಂಬವಾಗುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ತಿಳಿಸಿದರು.
ನಿಗಮ-ಮಂಡಳಿ ನೇಮಕ ಮುಗಿದ ಬಳಿಕ ಸಂಪುಟ ಪುನಾರಚನೆ ಮಾಡಲಾಗುವುದು ಮತ್ತು ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಕಡೆಯಿಂದ ಯಾವುದೇ ವಿರೋಧ ಇಲ್ಲ. ಆದರೆ ಈ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿದ್ದು, ಹೈಕಮಾಂಡ್ ನಿರ್ದೇಶನವನ್ನು ತಾವು ಪಾಲಿಸುವುದಾಗಿ ಹೇಳಿದರು.
ಇದೇ ವೇಳೆ ನಂದಿತಾ ಸಾವಿನ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ವರದಿ ಬಂದ ಬಳಿಕ ಸತ್ಯ ಗೊತ್ತಾಗುತ್ತದೆ. ಡೆತ್‌ನೋಟ್ ಸೇರಿದಂತೆ ಎಲ್ಲವೂ ತನಿಖೆಗೆ ಒಳಪಡುತ್ತದೆ. ರಾಜಕೀಯ ಪ್ರೇರಿತ ಆರೋಪಗಳಿಗೆ ನಾನು ಉತ್ತರಿಸಲ್ಲ ಎಂದರು.
ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಕುರಿತು ಪರಮೇಶ್ವರ ನೀಡಿರುವ ಹೇಳಿಕೆಗೂ ನೇರವಾಗಿ ಪ್ರತಿಕ್ರಿಯಿಸಿದ ಸಿಎಂ, ಸರ್ಕಾರದ ಮಾರ್ಗಸೂಚಿ ಪಾಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಅದನ್ನು ಸರ್ಕಾರ ಗಂಭೀರವಾಗಿಯೇ ಪರಿಗಣಿಸಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದರು.