

ಮುಂಬೈ: ನಾವಿಬ್ಬರೂ ಪರಸ್ಪರ ಭೇಟಿ ಆಗುತ್ತಿರುವುದು ನಿಜ. ಆದರೆ ಸಾರ್ವಜನಿಕರು ಸ್ವಲ್ಪ ವಿವೇಚನೆಯಿಂದ ವರ್ತಿಸಿ,ನಮ್ಮ ಖಾಸಗಿ ವಿಚಾರಗಳನ್ನು ಗೌರವಿಸಬೇಕು ಎಂದು ಕ್ರಿಕೆಟರ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕೊಹ್ಲಿಗೆ ಅನುಷ್ಕಾ ಜತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ನಾವಿಬ್ಬರೂ ಈವರೆಗೆ ಏನನ್ನೂ ಮುಚ್ಚಿಟ್ಟಿಲ್ಲ. ನಾನು ಏನನ್ನೂ ಮುಚ್ಚಿಡಲು ಬಯಸುವುದೂ ಇಲ್ಲ. ಆದರೆ ನೀವು ಪದೇ ಪದೇ ಅದೇ ಪ್ರಶ್ನೆಯನ್ನು ಕೇಳಿ ಈ ಬಗ್ಗೆ ಚರ್ಚೆಯನ್ನು ಮಾಡಿದರೆ ಇದು ನಮಗೆ ಸರಿ ಅನಿಸುವುದಿಲ್ಲ ಎಂದಿದ್ದಾರೆ.
ನಾನು ಮತ್ತು ಅನುಷ್ಕಾ ಪರಸ್ಪರ ಇಷ್ಟ ಪಡುತ್ತಿದ್ದೇವೆ ಎಂಬುದು ಎಲ್ಲರಿಗೂ ಗೊತ್ತು. ಜನರು ಇದಕ್ಕಿಂತ ಹೆಚ್ಚು ಕುತೂಹಲ ಹೊಂದುವುದು ಸರಿಯಲ್ಲ.
ನಾವಿಬ್ಬರನ್ನು ಒಟ್ಟಿಗೆ ಕಂಡಾಕ್ಷಣ ಜನರು ನೀವಿಬ್ಬರು ಇಷ್ಟಪಡುತ್ತಿರುವುದು ನಿಜವೇನು? ಎಂದು ಕೇಳಿದರೆ? ನಿಮಗೆ ವಿಷಯ ಗೊತ್ತಿರುವಾಗ ಪದೇ ಪದೇ ಅದರ ಬಗ್ಗೆ ಕೇಳುವುದು ಸಮಂಜಸ ಎನಿಸುವುದಿಲ್ಲ. ನಾವೇನು ಜನರ ಮುಂದೆ ತಪ್ಪು ಮಾಡುತ್ತಿಲ್ಲ ಎಂದು ಕೊಹ್ಲಿ ಮಾಧ್ಯಮದವರಲ್ಲಿ ಹೇಳಿದ್ದಾರೆ.
ಇದು ನಮ್ಮ ಖಾಸಗಿ ವಿಚಾರ ಆಗಿರುವುದರಿಂದ ಇದರ ಬಗ್ಗೆ ನಾವು ಎಲ್ಲರ ಮುಂದೆ ಹೇಳಬೇಕೆಂದೇನೂ ಇಲ್ಲ. ನಮ್ಮ ಖಾಸಗಿ ವಿಚಾರಗಳನ್ನು ಮಾಧ್ಯಮಗಳು ಮತ್ತು ಜನರು ಗೌರವಿಸಬೇಕು ಎಂದಷ್ಟೇ ನನಗೆ ಹೇಳಲಿರುವುದು ಎಂದಿದ್ದಾರೆ ಕೊಹ್ಲಿ.
ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ವಿರಾಟ್ ಕೊಹ್ಲಿ ಹಲವಾರು ಬಾರಿ ಜತೆಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಇವರಿಬ್ಬರೂ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಪಾಪರಾಜಿಗಳಿಗೆ ಹೆದರದೆ ಧೈರ್ಯವಾಗಿ ಎಲ್ಲರ ಮುಂದೆಯೇ ಹೆಜ್ಜೆ ಹಾಕಿದ್ದರು.