

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣವನ್ನು ತಮಿಳುನಾಡಿಗೆ ವರ್ಗಾಯಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಲಹೆ ನೀಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರಕರಣವನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡ ಅವರು, 'ಜಯಲಲಿತಾ ಅವರ ಪ್ರಕರಣವನ್ನು ತಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತೀರ್ಪು ಬಂದ ಬಳಿಕ ರಾಜಧಾನಿಯಲ್ಲಿ ಕಾನೂನು ಸುವ್ಯಸ್ಥೆ ಹದಗೆಡುತ್ತಿದೆ. ನಿತ್ಯ ಸಾವಿರಾರು ಎಐಎಡಿಎಂಕೆ ಕಾರ್ಯಕರ್ತರು ನಗರಕ್ಕಾಗಮಿಸುತ್ತಿದ್ದು, ಇದರಿಂದ ಕಾನೂನು ಸುವ್ಯವಸ್ಥೆಗೆ ತೀವ್ರ ಹಿನ್ನಡೆಯಾಗುತ್ತಿದೆ.
ಜಯಲಲಿತಾ ಅವರನ್ನು ತೋರಿಸುವಂತೆ ಕಾರ್ಯಕರ್ತರು ಪೊಲೀಸರನ್ನು ಒತ್ತಾಯಿಸುತ್ತಿದ್ದು, ಪೊಲೀಸರು ನಿರಾಕರಿಸಿದರೆ ರಸ್ತೆಯಲ್ಲಿಯೇ ಕುಳಿತು ಧರಣಿ ಸತ್ಯಾಗ್ರಹಗಳನ್ನು ನಡೆಸುತ್ತಾರೆ. ಇದರಿಂದ ನಮ್ಮ ಕಾನೂನು ಸುವ್ಯವಸ್ಥೆ ಮತ್ತು ಸುಗಮ ಸಂಚಾರಕ್ಕೆ ತೀವ್ರ ತೊಡಕಾಗುತ್ತಿದೆ ಎಂದು ದೇವೇಗೌಡ ಹೇಳಿದರು.
'ಅಲ್ಲದೆ ಇದಕ್ಕಾಗಿ ವಿಶೇಷ ಪೊಲೀಸರನ್ನು ನಿಯೋಜಿಸಬೇಕು. ಇದರಿಂದ ಅಗತ್ಯ ಸ್ಥಳದಲ್ಲಿ ಪೊಲೀಸರ ನಿಯೋಜನೆಗೆ ತೊಂದರೆಯಾಗುತ್ತಿದೆ. ಆರೋಪಿ ಸ್ಥಾನದಲ್ಲಿರುವವರೆಲ್ಲರ ಆರೋಗ್ಯ ತಪಾಸಣೆ ಸೇರಿದಂತೆ ಇತರೆ ಹಲವು ಕಾರ್ಯಗಳ ಆರ್ಥಿಕ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ನಮಗೇಕೆ ಇಂತಹ ಹೊರೆ..? ಕಾವೇರಿ ವಿಚಾರವನ್ನು ಬಿಟ್ಟರೆ ನಾವು ಮತ್ತು ತಮಿಳರು ಸಹೋದರರಾಗಿದ್ದು, ಈ ವಿಚಾರದಲ್ಲಿ ಅನಗತ್ಯವಾಗಿ ಕನ್ನಡಿಗರನ್ನು ಎಳೆದು ತರಲಾಗುತ್ತಿದೆ'.
ಜಯಲಲಿತಾ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದರು. ಇದರಿಂದ ಪ್ರಕರಣದ ವಿಚಾರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಒಂದೇ ಕಾರಣದಿಂದ ಪ್ರಕರಣವನ್ನು ಕರ್ನಾಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. ಈಗ ಪ್ರಕರಣದ ತೀರ್ಪು ಬಂದಿದ್ದು, ಇದೀಗ ಈ ವಿಚಾರ ನಮಗೆ ಸಂಬಂಧಿಸಿದ್ದಲ್ಲ. ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ಜಯಾ ಅವರು ಎಲ್ಲಿ ಬೇಕಾದರೂ ಪ್ರಶ್ನಿಸಿಕೊಳ್ಳಲಿ. ಈ ಕೆಲವನ್ನು ಅವರು ತಮಿಳುನಾಡು ಜೈಲಿನಲ್ಲಿ ಇದ್ದುಕೊಂಡೇ ಪ್ರಶ್ನಿಸಬಹುದು.
ಹೀಗಾಗಿ ರಾಜ್ಯ ಸರ್ಕಾರಕ್ಕೆ ನನ್ನ ಸಲಹೆ ಏನೆಂದರೆ ಜಯಾ ಪ್ರಕರಣವನ್ನು ಈ ಕೂಡಲೇ ತಮಿಳುನಾಡು ರಾಜ್ಯಕ್ಕೆ ವರ್ಗಾವಣೆ ಮಾಡುವುದು ಉತ್ತಮ' ಎಂದು ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಅ.27ರಂದು ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯ ಅವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ.ದಂಡ ವಿಧಿಸಿತ್ತು. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜಯಲಲಿತಾ ಮತ್ತು ಪ್ರಕರಣದ ಮೂವರು ಅಪರಾಧಿಗಳಿದ್ದಾರೆ. ಈ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಜಯಲಲಿತಾ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು, ಅ.7ರ ಮಂಗಳವಾರ ಅರ್ಜಿಯ ವಿಚಾರಣೆ ನಡೆಯಲಿದೆ.