

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರದ ಪ್ರಮುಖ ರೂವಾರಿ ಹಾಗೂ ಒಂದನೇ ಆರೋಪಿ ಅಶ್ವಿನ್‍ರಾವ್‍ನನ್ನು ಎಸ್‍ಐಟಿ ಪೊಲೀಸರು ಭಾನುವಾರ ರಾತ್ರಿಯೇ ಹೈದರಾಬಾದ್‍ನಿಂದ ಬೆಂಗಳೂರಿಗೆ ವಾಪಸ್ ಕರೆತಂದಿದ್ದಾರೆ.
ಹೈದರಾಬಾದ್‍ನ ಪ್ರಮುಖ ಹೋಟೆಲ್‍ಗಳಲ್ಲಿ ಆರೋಪಿಯು ಅಧಿಕಾರಿಗಳ ಜತೆ ನಡೆಸಿರುವ ಚರ್ಚೆ, ಹಣ ಪಡೆಯಲು ನಡೆಸಿದ ಸಂಚು ಸೇರಿದಂತೆ ಭ್ರಷ್ಟಾಚಾರದ ಡೀಲ್ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ. ಕುಕ್ಕಟಪಲ್ಲಿಯ ರೈನ್‍ಬೋ ಅಪಾರ್ಟ್‍ಮೆಂಟ್ ಹಾಗೂ ಆತ ತಂಗಿದ್ದ ಇತರೆ ಸ್ಥಳಗಳಿಗೆ ಕರೆದೊಯ್ದು ಅಲ್ಲಿನ ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳ ಪರಿಶೀಲನೆ
ನಡೆಸಿದ ಪೊಲೀಸರಿಗೆ ಕೆಲ ಮಹತ್ವದ ಮಾಹಿತಿಗಳು ಲಭ್ಯವಾಗಿವೆ.
ಅಲ್ಲಿ ಯಾರ ಜತೆ ಆತ ಸಂಪರ್ಕ ಹೊಂದಿದ್ದ? ಯಾರನ್ನು ಕರೆಸಿದ್ದ ಎಂಬಿತ್ಯಾದಿ ಮಾಹಿತಿ ಕಲೆ ಹಾಕಿದ್ದು, ಅಗತ್ಯ ಬಿದ್ದಲ್ಲಿ ಮತ್ತೆ ಕರೆದೊಯ್ದು ತನಿಖೆ ನಡೆಸಲಾಗುವುದು ಎಂದು ಮೂಲಗಳು
ತಿಳಿಸಿವೆ. ಅಶ್ವಿನ್ ರಾವ್‍ನನ್ನು ಬೆಂಗಳೂರಿಗೆ ಕರೆತಂದಿರುವ ಪೊಲೀಸರು ರಹಸ್ಯ ಸ್ಥಳದಲ್ಲಿ ವಿಚಾರಣೆ ಮುಂದುವರಿಸಿದ್ದಾರೆ. ಈ ನಡುವೆ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಭಾಸ್ಕರ್ ಇನ್ನೂ ಪತ್ತೆಯಾಗಿಲ್ಲ. ಆತನ ಪತ್ತೆಗೂ ಶೋಧ ನಡೆದಿದೆ.
ಎಸ್‍ಐಟಿ ವಶದಲ್ಲಿರುವ ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಪ್ರಕರಣದ ಆರೋಪಿ ಅಶೋಕ್‍ಕುಮಾರ್ ಬಂಧನ ಅವಧಿ ಸೋಮವಾರ ಅಂತ್ಯಗೊಳ್ಳಲಿದ್ದು ಪೊಲೀಸರು ಆತನನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಅಶೋಕ್ ಕುಮಾರ್‍ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದ್ದು ಪೊಲೀಸರ ವಶಕ್ಕೆ ನೀಡಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಆ.3ರವರೆಗೆ ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿತ್ತು. ನ್ಯಾಯಾಲಯದ ಆದೇಶದಂತೆ ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿ ಹಲವು ಮಹತ್ವದ ಮಾಹಿತಿ ಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಅಶೋಕ್ ಕುಮಾರ್ ಬಳಸುತ್ತಿದ್ದ ಮೊಬೈಲ್‍ನಿಂದ ಹೊರಹೋಗಿರುವ ಹಾಗೂ ಒಳಬಂದಿರುವ ಕರೆಗಳ ಧ್ವನಿಯನ್ನು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲ ಯಕ್ಕೆ ಕಳುಹಿಸಿಕೊಟ್ಟಿದ್ದು, ವರದಿ ಬರಲು ಹಲವು ದಿನ ಕಾಯ ಬೇಕಿದೆ. ವಿಚಾರಣೆ ವೇಳೆ ಭ್ರಷ್ಟಾಚಾರದ ಪ್ರಮುಖ ಆರೋಪಿ ಅಶ್ವಿನ್‍ರಾವ್ ಹಾಗೂ ಇತರೆ ಆರೋಪಿಗಳ ಜತೆಗಿನ ಸಂಬಂಧ ಕುರಿತು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ವಿಚಾರಣೆ ಮುಕ್ತಾಯವಾಗಿದ್ದು, ಅಗತ್ಯ ಬಿದ್ದಲ್ಲಿ ಮುಂದೆ ನ್ಯಾಯಾಲಯದ ಅನುಮತಿ ಪಡೆದು ಆರೋಪಿಯನ್ನು ಮತ್ತೆ ವಶಕ್ಕೆ ಪಡೆಯುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಶೋಕ್‍ಕುಮಾರ್‍ನನ್ನು ಸೋಮವಾರ ಬೆಳಗ್ಗೆ ಸುಮಾರು 11 ಗಂಟೆಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈಗಾಗಲೇ 2 ಬಾರಿ ಪೊಲೀಸರ ವಶಕ್ಕೆ ಪಡೆದಿರುವುದರಿಂದ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ.
ಜಾಮೀನು ಅರ್ಜಿ ವಿಚಾರಣೆ:
ಭ್ರಷ್ಟಾಚಾರ ಪ್ರಕರಣದ ಆರೋಪಿಗಳಾದ ಸೈಯದ್ ರಿಯಾಜ್, ಶ್ರೀನಿವಾಸ ಗೌಡ, ಶಂಕರೇಗೌಡ, ಅಶೋಕ್‍ಕುಮಾರ್ ಜಾಮೀನು ಕೋರಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿ ವಿಚಾರಣೆ ಸಹ ಇದೇ ವೇಳೆ ನಡೆಯಲಿದೆ. ಈ ಜಾಮೀನು ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಸರ್ಕಾರಿ ವಕೀಲರಿಗೆ ಕಾಲಾವಕಾಶ ನೀಡಿತ್ತು. ಹಾಗಾಗಿಸೋಮವಾರ ಈ ಎಲ್ಲ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳಿಗೆ ವಕೀಲರು ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.