

ಆರಾ(ಬಿಹಾರ): ಚುನಾವಣೆ ಹೊಸ್ತಿಲಲ್ಲಿರುವ ಬಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭರ್ಜರಿ ಪ್ಯಾಕೇಜ್ ಪ್ರಕಟಿಸಿದ್ದಾರೆ.
ಇಂದು ಬಿಹಾರದ ಆರಾದಲ್ಲಿ 9,700 ಕೋಟಿ ರುಪಾಯಿ ವೆಚ್ಚದ 10 ಹೆದ್ದಾರಿಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಕೇಂದ್ರ ಸರ್ಕಾರದಿಂದ ಒಟ್ಟು 1.65 ಲಕ್ಷ ಕೋಟಿ ರುಪಾಯಿ ವಿಶೇಷ ಪ್ಯಾಕೇಜ್ ನೀಡುವುದಾಗಿ ಹೇಳಿದರು.
ಬಿಹಾರದ ಅಭಿವೃದ್ಧಿಗೆ 1.25 ಲಕ್ಷ ಕೋಟಿ ಹಾಗೂ 40 ಸಾವಿರ ಕೋಟಿ ಹೆಚ್ಚುವರಿ ಅನುದಾನ ನೀಡುವುದಾಗಿ ಪ್ರಧಾನಿ ಭರವಸೆ ನೀಡಿದರು. ಅಲ್ಲದೆ ಈ ವಿಶೇಷ ಪ್ಯಾಕೇಜ್‌ನಿಂದ ಬಿಹಾರದ ಚಿತ್ರಣವೇ ಬದಲಾಗಲಿದೆ ಎಂದರು.
ಇದೇ ವೇಳೆ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಬಿಹಾರ ರೋಗಗ್ರಸ್ಠ ಸ್ಥಿತಿಯಲ್ಲಿದೆ ಎಂದರೆ ನಿತಿಶ್ ಕುಮಾರ್ ಅವರಿಗೆ ಬೇಸರ ಆಗುತ್ತೆ. ಅಲ್ಲದೆ ಬಿಹಾರ ರೋಗಗ್ರಸ್ಥ ಸ್ಥಿತಿಯಿಂದ ಹೊರ ಬಂದಿದೆ ಎಂದು ಹೇಳುತ್ತಾರೆ. ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಬಿಹಾರವನ್ನು ರೋಗಗ್ರಸ್ಥ ಪಟ್ಟಿಯಿಂದ ಹೊರತಂದರೆ ನಮಗೂ ಸಂತಸ. ಆದರೆ ಪದೇಪದೆ ಕೇಂದ್ರದ ಸಹಾಯ ಕೇಳುತ್ತಿರುವುದು ಏಕೆ? ವಿಶೇಷ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿರೋದ್ಯಾಕೆ? ಎಂದು ಮೋದಿ ಪ್ರಶ್ನಿಸಿದರು.
ಇನ್ನು ಬಿಹಾರದಲ್ಲಿ ದಲಿತ್ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಮೋದಿ, ಕೆಲಸಕ್ಕಾಗಿ ಪ್ರತಿಯೊಂದು ಬ್ಯಾಂಕ್ ಕನಿಷ್ಠ ಓರ್ವ ದಲಿತನಿಗೆ ಸಾಲ ಕೊಡಬೇಕು ಎಂದರು.