

ಬೆಂಗಳೂರು: ರಾಜ್ಯ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಹೋರಾಟದ ಕಣವಾಗಿದ್ದ ಬಿಬಿಎಂಪಿ ಚುನಾವಣೆ ಈಗ ಅಂತಿಮ ಘಟಕ್ಕೆ ತಲುಪಿದೆ. ಸತತ ಹೋರಾಟದ ನಂತರ ಪ್ರಮುಖ ಮೂರು ಪಕ್ಷಗಳೂ ಯುದ್ಧಮುಗಿಸಿ ಈಗ ಅಧಿಕಾರದ ಗದ್ದುಗೆ ಸಮೀಪ ಬಂದು ನಿಂತಿವೆ.
ಯಾರಿಗೆ ದಕ್ಕಲಿದೆ ಅಧಿಕಾರ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಸ್ಪಷ್ಟ. ಮತ ಎಣಿಕೆಗೆ ಈಗ ಕ್ಷಣಗಣನೆ. ಮತದಾನಕ್ಕೂ ಮುನ್ನ ಹೊಂಗಸಂದ್ರ ವಾರ್ಡ್ ನಿಂದ ಬಿಜೆಪಿಯ ಭಾರತಿ ರಾಮಚಂದ್ರ ಅವಿರೋಧ ಆಯ್ಕೆಯಾಗಿದ್ದು, ಅವರು ಬಿಬಿಎಂಪಿ ಸಭೆಗೆ ಬರುವುದಷ್ಟೇ ಬಾಕಿ. ಇನ್ನುಳಿದ 197 ವಾಡ್ರ್ ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಮಧ್ಯಾಹ್ನದ ಹೊತ್ತಿಗೆ ಪ್ರಕಟವಾಗಲಿದೆ. ಎಣಿಕೆಗೆ ಸಿದ್ಧತೆ ಪೂರ್ಣ: ಈಗಾಗಲೇ ನಗರದ 27 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯಕ್ಕೆ ಬಿಗಿ, ಭದ್ರತೆಯೊಂದಿಗೆ ಸಕಲ ಸಿದಟಛಿತೆ ನಡೆಸಲಾಗಿದ್ದು, ಬೆಳಗ್ಗೆ 8ಗಂಟೆಗೆ ಎಣಿಕೆ ಆರಂಭವಾಗಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರೂ ಸೇರಿದಂತೆ ಹೋರಾಟ ನಡೆಸಿದ್ದ 1,121 ಮಂದಿ ಅಭ್ಯರ್ಥಿಗಳ ಅದೃಷ್ಟ ಮಧ್ಯಾಹ್ನ 12 ಗಂಟೆ ವೇಳೆಗೆ ಸ್ಪಷ್ಟವಾಗಿ ತಿಳಿಯಲಿದೆ. ಬಿಬಿಎಂಪಿ ಅಧಿಕಾರ ಯಾವ ಪಕ್ಷದ ಪಾಲಾಗಲಿದೆ ಎನ್ನುವುದು ಅಷ್ಟೊತ್ತಿಗೆ ಸ್ಪಷ್ಟವಾಗಿರುತ್ತದೆ.
ಈಗೇನಿದ್ದರೂ ಬೆಟ್ಟಿಂಗ್ ಬೆಟ್ಟಿಂಗ್: ಮತಗಟ್ಟೆ ಸಮೀಕ್ಷೆಗಳ ನಂತರ ಬಿಬಿಎಂಪಿ ಅಧಿಕಾರ ಕಾಂಗ್ರೆಸ್ ಅಥವಾ ಬಿಜೆಪಿಗೆ ಸಿಗುತ್ತದೆ ಎನ್ನುವ ವಾದಗಳು ಶುರುವಾಗಿವೆ. ಈ ಮಧ್ಯೆ, ನಿಚ್ಚಳ ಫಲಿತಾಂಶ ಬಾರದೇ ಅತಂತ್ರ ಸ್ಥಿತಿ ನಿರ್ಮಾಣವಾಗಿ ಪಕ್ಷೇತರರು ಮತ್ತು ಜೆಡಿಎಸ್ ಕೈ ಮೇಲಾಗುತ್ತದೆ ಎನ್ನುವ ಮಾತುಗಳು ಅಭ್ಯರ್ಥಿಗಲ ಮಧ್ಯೆಯೇ ಕೇಳಿಬಂದಿವೆ. ಇದನ್ನಾಧರಿಸಿ ಅನೇಕ ಕಡೆ ಹಣ, ವಾಹನ ಮತ್ತು ಚಿನ್ನವನ್ನು ಬೆಟ್ಟಿಂಗ್ ಕಟ್ಟಿರುವ ಪ್ರಕರಣಗಳೂ ನಡೆದಿವೆ. ಅದರಲ್ಲೂ ವಿಶೇಷವಾಗಿ ಹೆಮ್ಮಿಗೆಪುರ, ಮಹಾಲಕ್ಷ್ಮಿ ಬಡಾವಣೆ, ಗೋವಿಂದರಾಜನಗರ ವಾರ್ಡ್‍ಗಳಲ್ಲಿ ಬೆಟ್ಟಿಂಗ್ ಹೆಚ್ಚೇ ಸದ್ದು ಮಾಡಿದೆ. ಬಿಬಿಎಂಪಿ ಚುನಾವಣೆ ಕೇವಲ ಬೆಂಗಳೂರಿಗೆ ಸಂಬಂಧಿಸಿದ ಸ್ಥಳೀಯ ಸಂಸ್ಥೆ ಚುನಾವಣೆಯಾಗದೆ, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ 6 ತಿಂಗಳಿನಿಂದ ವಾದ-ವಿವಾಧ ಮೂಡಿಸಿದ ವಿಷಯವಾಗಿತ್ತು.
ಕಾನೂನು ಹೋರಾಟಕ್ಕೆ ಕಾರಣವಾಗಿತ್ತು. ಅದರಲ್ಲೂ ಬಿಬಿಎಂಪಿ ವಿಭಜನೆ ವಿಚಾರ ಪ್ರಸ್ತಾಪವಾದ ನಂತರವಂತೂ ಬಿಬಿಎಂಪಿ ಚುನಾವಣೆ ರಾಜ್ಯದ ಪ್ರಮುಖ ಹೋರಾಟ ವಿಚಾರವೇ ಆಗಿತ್ತು. ಇದಕ್ಕಾಗಿ ಬೀದಿ ಹೋರಾಟಗಳು, ಮೆರವಣಿಗೆಗಳು, ಕಾನೂನು ಹೋರಾಟಗಳು ದೊಡ್ಡಪ್ರಮಾಣದಲ್ಲಿ ನಡೆದವು. ಇದಕ್ಕಾಗಿ ಒಂದು ವಿಶೇಷ ವಿಧಾನಮಂಡಲ ಅಧಿವೇಶನವೇ ನಡೆದು ಹೋಯಿತು. ಇಷ್ಟೆಲ್ಲ ತಾಕಲಾಟಗಳ ನಂತರ ನಡೆದ ಚುನಾವಣೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ದೊಡ್ಡ ಕದನವಾಗಿತ್ತು. ಈಗ ಅದೆಲ್ಲ ಮುಕ್ತಾಯವಾಗಿ ಅಧಿಕಾರ ಹಿಡಿಯುವ ಕ್ಷಣ ಬಂದಿದೆ.