ಇಸ್ಲಾಮಾಬಾದ್: ಬ್ಯಾಂಕಾಕ್ನಲ್ಲಿ ಭಾರತ-ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆ ಬಳಿಕ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಇಸ್ಲಾಮಾ ಬಾದ್ಗೆ ಆಗಮಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸಚಿವರೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ.
ಅಫ್ಘಾನಿಸ್ತಾನದ ಬಗ್ಗೆ ಆಯೋಜಿಸಲಾಗುವ `ಹಾರ್ಟ್ ಆಫ್ ಏಷ್ಯಾ' ಸಮ್ಮೇಳನದಲ್ಲಿ ಸುಷ್ಮಾ ಸ್ವರಾಜ್ ಭಾಗವಹಿಸಲಿದ್ದಾರೆ. ಅವರು ಪಾಕ್ ಪ್ರಧಾನಿ ನವಾಜ್ ಷರೀಫ್ , ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಜತೆ ಮಾತುಕತೆ ನಡೆಸಲಿದ್ದಾರೆ.
ಇಸ್ಲಾಮಾಬಾದ್ ಗೆ ಬಂದಿಳಿದ ತಕ್ಷಣ ಮಾತನಾಡಿದ ಸ್ವರಾಜ್ ``ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಯಾಗಬೇಕು ಎಂಬ ಸಂದೇಶದ ಜತೆಗೆ ಬಂದಿದ್ದೇನೆ'' ಎಂದಷ್ಟೇ ಪ್ರತಿಕ್ರಿಯೆ ನೀಡಿದರು. ಪಾಕಿಸ್ತಾನ ನಾಯಕರ ಜತೆ ಯಾವ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಭಾರತದ ವಿದೇಶಾಂಗ ಸಚಿವೆ ನಿರಾಕರಿಸಿದರು.
ಬುಧವಾರ `ಹಾರ್ಟ್ ಆಫ್ ಏಷ್ಯಾ'ಸಮ್ಮೇಳನದಲ್ಲಿ ಸ್ವರಾಜ್ ಭಾಗವಹಿಸಲಿದ್ದಾರೆ. 2012ರಲ್ಲಿ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಪಾಕ್ಗೆ ಭೇಟಿ ನೀಡಿದ್ದು ಕೊನೆಯಾಗಿತ್ತು. ಇದಾದ ಬಳಿಕ ಕೇಂದ್ರದ ಮಟ್ಟದಲ್ಲಿ ಸಚಿವರು ಭೇಟಿ ನೀಡಿಲ್ಲ.
ಮಾತುಕತೆ ಬಗ್ಗೆ ಚರ್ಚೆ: ಭಾರತದ ವಿದೇಶಾಂಗ ಸಚಿವರ ಜತೆಗೆ ದ್ವಿಪಕ್ಷೀಯ ಬಾಂಧವ್ಯಸುಧಾರಣೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಪಾಕ್ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ತಿಳಿಸಿದ್ದಾರೆ. ಎರಡೂ ದೇಶದ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆಯಿಂದ ಅಜೆಂಡಾ ಸಿದ್ಧಪಡಿಸುತ್ತಿದ್ದಾರೆ.