

ಬೆಂಗಳೂರು: ಮಠ- ಮಾನ್ಯಗಳು ಪೂರ್ಣದೃಷ್ಟಿಯಿಂದ ಸಾತ್ವಿಕತೆಗೆ ಬದ್ಧವಾಗಿರಬೇಕೆ ವಿನಃ ರಾಜಕೀಯ ಪ್ರೇರಿತ ವಿಚಾರಗಳಿಗೆ ವೇದಿಕೆ ಒದಗಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.
ನಿಡುಮಾಮಿಡಿ ಮಠವು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಮಾನವ ಧರ್ಮ ಪೀಠದ ಬೆಳ್ಳಿಹಬ್ಬದ ಮೂರನೇ ದಿನದ ಕಾರ್ಯಕ್ರಮದಲ್ಲಿ ಡಾ.ಎಂ. ನಾಗರಾಜ್ ಅವರ `ನಿಡುಮಾಮಿಡಿ ಕ್ಷೇತ್ರದ ಸಂಕ್ಷಿಪ್ತ ಚರಿತ್ರೆ', ನಿಡುಮಾಮಿಡಿ ಸ್ವಾಮೀಜಿ ರಚಿಸಿದ `ನೂತನ ಚೇತನ ಭಾಗ-2', ಡಾ.ಎಚ್.ಎಂ. ಎಸ್. ಪ್ರಕಾಶ್‍ರ `ಪ್ಲಾಯ್ಸ್ ಆಫ್ ಪೋಂಟಿಪ್ಸ್' ರಮೇಶ್ ಸಂಕ್ರಾಂತಿ ಅವರ `ನಿಡುಮಾಮಿಡಿ ನುಡಿಲುಮೆ' ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಶತಮಾನಗಳ ಇತಿಹಾಸ ಹೊಂದಿರುವ ನಿಡುಮಾಮಿಡಿ ಮಠವು ಪ್ರಗತಿಪರ ವಿಚಾರಗಳಿಗೆ ಪ್ರೊತ್ಸಾಹ ನೀಡುತ್ತಿದೆ. ಎಲ್ಲಾ ಮಠಗಳು ಸಹ ರಾಜಕೀಯಕ್ಕೆ ಆಸ್ಪದ ನೀಡದೆ ಮಠದ ತತ್ವಕ್ಕಾಗಿ ಕೆಲಸ ಮಾಡುವಂತಾಗಬೇಕು. ಆಗ ಮಠಗಳು ಉದ್ಧಾರವಾಗುತ್ತವೆ, ನಾಡು ಸಮೃದ್ಧಿಯಾಗುತ್ತದೆ. ಇಂದು ಇಡೀ ಭಾರತವನ್ನು ಜಗತ್ತು ನೋಡುತ್ತಿದ್ದು ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರು ಕಾರಣಕರ್ತರಾಗಬೇಕು. ಮನುಷ್ಯನನ್ನು ಜಾತಿಯಿಂದ ನೋಡದೆ ಸ್ವಭಾವ, ಗುಣಗಳಿಂದ ನೋಡುವಂತಾಗಬೇಕು ಎಂದರು. ಭಾರತೀಯ ಸಮಾಜ ಭೌತಿಕ ಶ್ರೀಮಂತಿಕೆಯ ಮೇಲೆ ನಿಂತಿಲ್ಲ. ಆಧ್ಯಾತ್ಮಿಕ ಶ್ರೀಮಂತಿಕೆ ನೆಲೆಯ ಮೇಲೆ ನಿಂತಿರುವುದಕ್ಕೆ ನಾಡಿನ ಮಠ ಮಂದಿರಗಳೇ ಕಾರಣ. ಸಮಾಜವನ್ನು ಛಿದ್ರಗೊಳಿಸುವ ಕೆಲಸ ಯಾವುದೇ ಮಠಗಳಿಂದ ಆಗಬಾರದು.
ಒಟ್ಟು ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಎಲ್ಲ ಜಾತಿ ಜನಾಂಗದ ಜನರನ್ನು ಮುಖ್ಯ ವಾಹಿನಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಮಠಾದೀಶರ ಮೇಲಿದೆ. ಈ ನಿಟ್ಟಿನಲ್ಲಿ ನಿಡಿಮಾಮಿಡಿ ಮಠ ನಾಡಿನಲ್ಲಿ ಒಂದು ಆದರ್ಶಪ್ರಾಯ ಮಠವಾಗಿದೆ ಎಂದರು. ಇದೇ ವೇಳೆ ಮಠದ ಹಿರಿಯ ಭಕ್ತರನ್ನು ಸನ್ಮಾನಿಸಲಾಯಿತು.