

ನವದೆಹಲಿ: ವಿವಾದಾತ್ಮಕ ರಾಮಮಂದಿರ ನಿರ್ಮಾಣದ ವಿಷಯಕ್ಕೆ ಮತ್ತೆ ರೆಕ್ಕೆ ಪುಕ್ಕ ಬಂದಿದ್ದು, ಮಂದಿರ ನಿರ್ಮಿಸಲು ಕಳೆದ ೩೦ ವರ್ಷಗಳಿಂದ ಸಂಗ್ರಹಿಸಿದ್ದ ಹಣಕ್ಕೆ ಲೆಕ್ಕ ನೀಡುವಂತೆ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಆಗ್ರಹಿಸಿದೆ.
ಬಿಜೆಪಿ ಪಕ್ಷದ ಮೇಲೆ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ "ಈ ದೇಶದ ಜನತೆಗೆ ಬೇಕಾಗಿರುವುದೇನು ಎಂಬುದು ಬಿಜೆಪಿ ಪಕ್ಷದವರಿಗೆ ಸುಳಿವಿಲ್ಲ. ಸಮಾಜದಲ್ಲಿ ಒಡಕುಂಟುಮಾಡಿ ಉತ್ತರ ಪ್ರದೇಶದ ಚುನಾವಣೆ ಗೆಲ್ಲುವುದಷ್ಟೇ ಅವರಿಗೆ ಬೇಕಿರುವುದು. ಆದುದರಿಂದ ದೇಶದಲ್ಲಿ ಯಾವುದಾದರೂ ಚುನಾವಣೆ ಬಂದಾಗ ರಾಮಮಂದಿರ ವಿಷಯವನ್ನು ಎಳೆದು ತರುತ್ತಾರೆ ಮತ್ತು ಆಗ ಮಾತ್ರ ಧೂಳು ಹಿಡಿದಿರುವ ತಮ್ಮ 'ಸೈದ್ಧಾಂತಿಕ ಶುದ್ಧತೆಗೆ ಬದ್ಧತೆ'ಯನ್ನು ಕೊಡವಿಕೊಳ್ಳುತ್ತಾರೆ" ಎಂದಿದ್ದಾರೆ.
"ಆದರೆ ದೊಡ್ಡ ಪ್ರಶ್ನೆ ಏಳುವುದು, ೧೯೮೬ ರಿಂದ ೨೦೧೬ ರವರೆಗೆ ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ಸಂಗ್ರಹಿಸಿದ ಹಣ ಏನಾಯಿತು" ಎಂದು ತಿವಾರಿ ಪ್ರಶ್ನಿಸಿದ್ದಾರೆ.
ಅಲ್ಲದೆ ೧೯೮೮-೮೯ ರಲ್ಲಿ ರಾಮಮಂದಿರ ನಿರ್ಮಾಣಕ್ಕೆಂದು ಸಂಗ್ರಹಿಸಿದ್ದ ೬೦೦ ಕೋಟಿ ರೂಗಳನ್ನು ಸ್ವಿಸ್ ಬ್ಯಾಂಕ್ ನಲ್ಲಿ ಇಡಲಾಗಿದೆ ಎಂದು ತೆರಿಗೆ ಅಧಿಕಾರಿ ಬಿಶ್ವಾ ಬಂಧು ಗುಪ್ತ ಅವರು ಆರೋಪಿಸಿರುವುದನ್ನು ಕೂಡ ಕಾಂಗ್ರೆಸ್ ಪ್ರಶ್ನಿಸದೆ.
ಆದುದರಿಂದ ಈ ವರ್ಷಗಳಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹವಾದ ದುಡ್ಡು ಎಲ್ಲಿ ಹೋಯಿತು ಎಂಬುದಕ್ಕೆ ಸರಿಯಾದ ತನಿಖೆಯಾಗಬೇಕು ಎಂದು ಕೂಡ ಅವರು ಆಗ್ರಹಿಸಿದ್ದಾರೆ.