

ಬೆಂಗಳೂರು: ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕ ಅವರೀಗ ಸಿಬ್ಬಂದಿಗಳ ಪಾಲಿಗೆ ಥೇಟ್ ಸಾಂತಾಕ್ಲಾಸ್ ಆಗಿದ್ದಾರೆ. ಅದು ಹೇಗೆ ಗೊತ್ತಾ? ರಜಾಕಾಲಗಳಲ್ಲಿ ಕಂಪನಿಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ 3,000 ನೌಕರರಿಗೆ ಐಫೋನ್ -6s ಗಿಫ್ಟ್ ಆಗಿ ನೀಡುವ ಮೂಲಕ ಸಿಕ್ಕ ಅವರು ತಮ್ಮ ಸಿಬ್ಬಂದಿಗಳನ್ನು ಹುರಿದುಂಬಿಸಿದ್ದಾರೆ.
ತಮ್ಮ ನೌಕರಿರಿಗೆ ಇಮೇಲ್ ಬರೆದು ಈ ಖುಷಿಯ ವಿಚಾರವನ್ನು ಎಲ್ಲರಿಗೂ ತಿಳಿಸಿದ್ದಾರೆ. ಇಮೇಲ್ ನಲ್ಲಿ ತಮ್ಮ ಸಿಬ್ಬಂದಿಗಳನ್ನು ಗೆಳೆಯರೇ ಎಂದು ಸಿಕ್ಕ ಸಂಬೋಧಿಸಿದ್ದಾರೆ. ಇಮೇಲ್ನ ಒಕ್ಕಣೆ ಹೀಗಿದೆ:
2014 ಉತ್ತಮ ವರ್ಷ ಆಗಿತ್ತು. ಅಲ್ಲವೇ? ನೀವು ಈ ಕನಿಷ್ಠ ಅವಧಿಯಲ್ಲಿ ಹಲವಾರು ಕೆಲಸಗಳನ್ನು ಪೂರೈಸಬೇಕೆಂದು ಯೋಚನೆ ಮಾಡಿದ್ದಿರಿ. ಇದೀಗ ನೀವು ಹೊಸವರುಷದ ಹೊಸ್ತಿಲಲ್ಲಿ ನಿಂತು ಹಳೆ ವರುಷದ ಬಗ್ಗೆ ನೆನಪಿಸಿಕೊಳ್ಳುವಾಗ ನೀವು ತೃಪ್ತರಾಗಿದ್ದೀರಿ ಅಲ್ವಾ. ಖಲೀಲ್ ಗಿಬ್ರಾನ್ ಹೇಳುವಂತೆ "ಕೆಲಸ ಮಾಡುವಾಗ ನೀವೊಂದು ಕೊಳಲಿನಂತೆ. ಮೆಲ್ಲನೆ ಊದಿದ್ದು ಸಂಗೀತವಾಗಿ ಬದಲಾಗುವಂತೆ". ಹಾಗೆಯೇ ನೀವು ನಿಮ್ಮ ಸಾಮರ್ಥ್ಯವನ್ನು ಬಳಸಿ ಕಂಪನಿಗಾಗಿ ದುಡಿದಿದ್ದೀರಿ. ನಿಮ್ಮ ಸಹಾಯವನ್ನು ಬರೀ ಮಾತಲ್ಲೇ ಗುರುತಿಸಿಕೊಂಡರಷ್ಟೇ ಸಾಲದು. ಅದನ್ನು ನಾವು ಆಚರಿಸಬೇಕು. ಆದ್ದರಿಂದಲೇ ನಾನು ರಜಾದಿನ ಬೋನಸ್ ಆಗಿ ನಿಮಗೆ ಆ್ಯಪಲ್ ಐಫೋನ್ 6s ನೀಡುತ್ತಿದ್ದೇನೆ. ನೀವು ಇನ್ಫೋಸಿಸ್ನಲ್ಲಿ ಕೆಲಸ ಮಾಡಿದುದಕ್ಕೆ ಮೆಚ್ಚುಗೆ ಸೂಚಕವಾಗಿರುವ ಈ ಗಿಫ್ಟ್ ನಿಮಗೆ ಮತ್ತು ನಿಮ್ಮ ಸಹೋದ್ಯೋಗಿಗಳಿಗೆ ಸದಾ ನೆನಪಿನಲ್ಲಿ ಉಳಿಯುತ್ತದೆ.
ಸಿಕ್ಕ ಅವರು ನೀಡಿರುವ ರಜಾಕಾಲದ ಬೋನಸ್ ಸಿಬ್ಬಂದಿಗಳಿಗೆ ಖುಷಿಯೊಂದಿಗೆ ಆಶ್ಚರ್ಯವನ್ನುಂಟು ಮಾಡಿದೆ. ಇಲ್ಲಿಯವರೆಗೆ ಯಾರೂ ಈ ರೀತಿಯ ಗಿಫ್ಟ್ ಕೊಟ್ಟಿಲ್ಲ ಎಂದು ಸಿಬ್ಬಂದಿಗಳು ಸಿಕ್ಕ ಅವರ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.