

ನವದೆಹಲಿ: ರಿಸರ್ಚ್ ಆ್ಯಂಡ್ ಅನ್ಯಾಲಿಸ್ ವಿಂಗ್ (ರಾ) ಮತ್ತು ಪಾಕಿಸ್ತಾನದ ಮುತ್ತಾ- ಹಿದಾ ಕ್ವಾಮಿ ಮೂವ್‍ಮೆಂಟ್ (ಎಂಕ್ಯೂಎಂ) ನಡುವೆ ಯಾವುದೇ ಸಂಬಂಧವಿಲ್ಲ. ರಾ ಪಾಕಿಸ್ತಾನದ ಪಕ್ಷಕ್ಕೆ ಹಣಕಾಸು ನೆರವು ನೀಡಿದೆ ಎಂಬ ವರದಿಗಳು ಆಧಾರ ರಹಿತ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.
ರಾದ ವರ್ಚಸ್ಸಿಗೆ ಧಕ್ಕೆ ತರುವುದೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ ಉದ್ದೇಶವಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ ಎಂದು ಸಿಎನ್‍ಎನ್-ಐಬಿಎನ್ ವರದಿ ಮಾಡಿದೆ. ವಿವಿಧ ಮಾಧ್ಯಮಗಳಲ್ಲಿ ಎಂಕ್ಯೂಎಂಗೆ ರಾ ಹಣಕಾಸಿನ ನೆರವು ನೀಡಿದೆ ಎಂಬ ಬಗ್ಗೆ ವರದಿಯಾಗುತ್ತಲೇ ಲಂಡನ್ ಮೆಟ್ರೋ-ಪಾಲಿಟನ್ ಪೊಲೀಸ್ ಇಲಾಖೆ ಈ ಬಗ್ಗೆ ತನಿಖೆ ನಡೆಸಿದೆ. ಇಂಥ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಜತೆಗೆ ಅದನ್ನು ಪುಷ್ಟೀಕರಿಸುವ ಯಾವುದೇ ದಾಖಲೆಗಳಿಲ್ಲ ಎಂದು ಕೇಂದ್ರ ಸರ್ಕಾರದ ಅಭಿಪ್ರಾಯಟ್ಟಿದೆ. 2014ರ ಪೇಶಾವರ ಬಾಂಬ್ ಸ್ಫೋಟದ ಬಳಿಕ ಪಾಕಿಸ್ತಾನ ಭಾರತ ಸರ್ಕಾರ ಮತ್ತು ಗುಪ್ತಚರ ಸಂಸ್ಥೆಗಳ ವಿರುದ್ಧ ಅಪಪ್ರಚಾರದಲ್ಲಿ ನಿರತವಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.