

ರಾಮೇಶ್ವರಂ: ದೇಶ ಕಂಡ ಅಪ್ರತಿಮ ರಾಷ್ಟ್ರಪತಿ, ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟುರೂ ರಾಮೇಶ್ವರಂನಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. 10.30ಕ್ಕೆ ಮುಸ್ಲಿಂ ಸಮುದಾಯದಂತೆ ವಿಧಿವಿಧಾನಗಳು ಆರಂಭಗೊಳ್ಳಲಿವೆ.
ಕಲಾಂರ ಪಾರ್ಥಿವ ಶರೀರ ಹೊತ್ತ ವಾಯುಪಡೆ ವಿಮಾನ ಬುಧವಾರ ಸಂಜೆ 4ಕ್ಕೆ ತಮಿಳುನಾಡಿನ ಅವರ ಹುಟ್ಟೂರು ರಾಮೇಶ್ವರ ತಲುಪಿದ್ದು. ಗುರುವಾರ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಕ್ರಿಯೆಗೂ ಮುನ್ನ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು, ಅಪಾರ ಸಂಖ್ಯೆಯಲ್ಲಿ ಜನ ಕಲಾಂರ ಅಂತಿಮ ದರ್ಶನ ಪಡೆದರು.
ಕಲಾಂ ಅಂತ್ಯಕ್ರಿಯೆ ಹಿನ್ನೆಲೆ ತಮಿಳುನಾಡಿನಲ್ಲಿ ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಾಂ ಗೌರವಾರ್ಥ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದೇ ವೇಳೆ ತಮಿಳುನಾಡಿನಲ್ಲಿ ಇಂದು ಯಾವುದೇ ಚಿತ್ರಗಳು ಪ್ರದರ್ಶನಗೊಳ್ಳುವುದು. ಫಿಲ್ಮಂ ಛೇಂಬರ್ ಸಹ ಸ್ಥಬ್ದಗೊಂಡಿದೆ. ಯಾವುದೇ ಆಟೋಗಳು ಬಿದಿಗಿಳಿದಿಲ್ಲ.
ನಿನ್ನೆ ವಿಮಾನವು ವಿಶೇಷ ಹೆಲಿಪ್ಯಾಡ್‍ನಲ್ಲಿ ಇಳಿಯುತ್ತಿದ್ದಂತೆ ಜನರ ನೂಕು ನುಗ್ಗಲು ಶುರುವಾಗಿತ್ತು. ತಕ್ಷಣ ಎಚ್ಚೆತ್ತ ಭದ್ರತಾ ತಂಡ ಜನರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಮೊದಲಿಗೆ ಅವರ ಪಾರ್ಥಿವ ಶರೀರವನ್ನು ಮಧುರೆಗೆ ತಂದು ಅಲ್ಲಿಂದ 10ಕಿ.ಮೀ.ವರೆಗೆ ಸೇನಾ ವಾಹನದಲ್ಲಿ ತರಲಾಯಿತು, ಈ ವೇಳೆ ಮಾರ್ಗದುದ್ದಕ್ಕೂ ಜನರು ಅಗಲಿದ ನಾಯಕನಿಗೆ ಅಶ್ರುತರ್ಪಣಗೈದರು.
ಇಲ್ಲಿನ ಬಸ್ ಟರ್ಮಿನಸ್‍ನ ಪಕ್ಕದ ಮೈದಾನದಲ್ಲಿ ಕಲಾಂರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶಾಲೆ-ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಯುವಜನರ ಸಮೂಹವೇ ಅಲ್ಲಿ ನೆರೆದಿತ್ತು. ಮಾಜಿ ರಾಷ್ಟ್ರಪತಿಯು ದೇಶದ ಭಾವಿ ಪ್ರಜೆಗಳ ಮೇಲಿಟ್ಟಿದ್ದ ಪ್ರೀತಿ, ಭರವಸೆಯನ್ನು ಇದು ಸಾಕ್ಷೀಕರಿಸಿತು. ಪ್ರಧಾನಿ ನರೇಂದ್ರ ಮೋದಿ ಅವರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆ ಅಂತ್ಯಕ್ರಿಯೆಗೆ ಜಯ ಭಾಗವಹಿಸಲ್ಲ
ಜಯಾ ಭಾಗವಹಿಸಲ್ಲ ಅನಾರೋಗ್ಯದ ಹಿನ್ನೆಲೆಯಲ್ಲಿ ಕಲಾಂ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಮಿಳುನಾಡು ಸಿಎಂ ಜಯಲಲಿತಾ ತಿಳಿಸಿದ್ದಾರೆ. ಕಲಾಂ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಆರೋಗ್ಯ ಸಮಸ್ಯೆಯ ಕಾರಣದಿಂದ ನನಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. 7 ಮಂದಿ ಸಂಪುಟ ಸಹೋದ್ಯೋಗಿಗಳು ನನ್ನನ್ನು ಪ್ರತಿನಿಧಿಸಲಿದ್ದಾರೆ. ಕಲಾಂ ಗೌರವಾರ್ಥ ಗುರುವಾರ ರಾಜ್ಯಾದ್ಯಂತ ಸಾರ್ವಜನಿಕ ರಜೆ ಘೋಷಿಸಲಾಗಿದೆ'' ಎಂದಿದ್ದಾರೆ ಜಯಾ.