

ಬೆಂಗಳೂರು: ಲಾಟರಿ ಅಕ್ರಮದ ಪ್ರಮುಖ ಆರೋಪಿಯೊಂದಿಗೆ ಸ್ನೇಹ ಹೊಂದಿದ್ದ ಆರೋಪದಲ್ಲಿ ಅಮಾನತು ಶಿಕ್ಷೆಗೆ ಒಳಗಾಗಿದ್ದ ಪಶ್ಚಿಮ ವಿಭಾಗದ ಐಜಿಪಿ ಮತ್ತು ಅಪರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಒಂದಂಕಿ ಲಾಟರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪಾರಿರಾಜನ್ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಆರೋಪದ ಮೇರೆಗೆ ಅಮಾನತುಗೊಂಡಿದ್ದ ಅಲೋಕ್ ಕುಮಾರ್ ಅವರನ್ನು ಇಂದು ಮತ್ತೆ ಆಂತರಿಕ ಭದ್ರತಾ ವಿಭಾಗ ಐಜಿಪಿಯಾಗಿ ಸರ್ಕಾರ ವರ್ಗಾವಣೆಗೊಳಿಸಿದೆ. ಈ ಸಂಬಂಧ ಶುಕ್ರವಾರ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಅಮಾನತ್ತಿನಲ್ಲಿರುವ ಅಲೋಕ್ ಕುಮಾರ್ ಅವರ ವಿರುದ್ಧ ಆರೋಪಗಳು ಸುಳ್ಳಾಗಿ ಅವರ ಅಮಾನತು ರದ್ದುಗೊಂಡರೆ ಅವರು ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ಮುಂದುವರೆಯಲಿದ್ದಾರೆ ಎಂದು ತಿಳಿದುಬಂದಿದೆ.
ರೌಡಿ ಶೀಟರ್ ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ (ಐಪಿಎಸ್) ಅಲೋಕ್ ಕುಮಾರ್ ಅವರನ್ನು ಅಮಾನತುಗೊಳಿಸಿ ಕಳೆದ ಮೇ.23ರಂದು ಸರಕಾರ ಆದೇಶ ಹೊರಡಿಸಿತ್ತು. ಒಂದಂಕಿ ಲಾಟರಿ ದಂಧೆಯ ವಿಚಾರದಲ್ಲಿ ಅಲೋಕ್ ಕುಮಾರ್ ಹೆಸರು ನೇರವಾಗಿ ಕೇಳಿ ಬಂದಿರುವ ಹಿನ್ನಲೆಯಲ್ಲಿ ಮುಂದಿನ ಆದೇಶದವರೆಗೆ ಸರಕಾರ ಅವರ ಸೇವೆಯನ್ನು ಹಿಂದಕ್ಕೆ ಪಡೆದಿತ್ತು.