ರವಿಗೆ ಫೇಸ್‍ಬುಕ್‍ನಲ್ಲಿ ಸ್ಟ್ರಾಂಗ್ ಶ್ರದ್ಧಾಂಜಲಿ

ರವಿ ಅವರಂತೆಯೇ ಖಡಕ್ ಐಎಎಸ್ ಅಧಿಕಾರಿ ಎಂದೇ ಹೆಸರಾಗಿರುವ ಆಮರ್ ಸ್ಟ್ರಾಂಗ್ ಪಾಮೆ ಅವರೂ ರವಿ ಸಾವಿನ ಬಗ್ಗೆ ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ..
ಆರ್ಮ್ ಸ್ಟ್ರಾಂಗ್ ಪಾಮೆ ಮತ್ತು ಡಿಕೆ ರವಿ
ಆರ್ಮ್ ಸ್ಟ್ರಾಂಗ್ ಪಾಮೆ ಮತ್ತು ಡಿಕೆ ರವಿ
Updated on: 

ನವದೆಹಲಿ: ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಎಲ್ಲೆಲ್ಲೂ ಅದೇ ಸುದ್ದಿ, ಸಿಬಿಐ ತನಿಖೆಗಾಗಿ ಆಗ್ರಹ.

ರವಿ ಅವರಂತೆಯೇ ಖಡಕ್ ಐಎಎಸ್ ಅಧಿಕಾರಿ ಎಂದೇ ಹೆಸರಾಗಿರುವ ಆಮರ್ ಸ್ಟ್ರಾಂಗ್ ಪಾಮೆ ಅವರೂ ರವಿ ಸಾವಿನ ಬಗ್ಗೆ ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಣಿಪುರದ ಟೂ ಸೆಮ್ ನಲ್ಲಿ ಉಪ ವಿಭಾಗೀಯ ಮ್ಯಾಜಿ ಸ್ಟ್ರೇಟ್ ಆಗಿರುವ ಪಾಮೆ (28) ಅವರೂ 2009ರ ಬ್ಯಾಚ್‍ನ ಐಎಎಸ್ ಅಧಿಕಾರಿ. ಅಂದರೆ ಡಿ.ಕೆ. ರವಿ ಅವರ ಬ್ಯಾಚ್‍ಮೆಟ್. ರವಿ ಸಾವಿನ ಸುದ್ದಿ ಹಬ್ಬುತ್ತಿದ್ದಂತೆ ಪಾಮೆ ದಿಗ್ಭ್ರಮೆಗೊಳಗಾಗಿದ್ದಾರೆ.  ತಮ್ಮ ಫೇಸ್‍ಬುಕ್ ಖಾತೆಯಲ್ಲಿ ರವಿ ಬಗೆಗಿನ ನೆನಪುಗಳನ್ನು ಹಂಚಿಕೊಂಡಿರುವ ಅವರು, ಸತ್ಯ ಆದಷ್ಟು ಬೇಗ ಹೊರಬರಲಿ ಎಂದು ಆಶಿಸಿದ್ದಾರೆ.  ಜತೆಗೆ, ರಾಷ್ಟ್ರಪತಿಗಳೊಂದಿಗೆ ತೆಗೆಸಿಕೊಂಡ ತಮ್ಮ ಬ್ಯಾಚ್‍ನ ಗ್ರೂಪ್ ಫೋಟೋ ಅಪ್‍ಲೋಡ್ ಮಾಡಿದ್ದಾರೆ.



ಯಾರಿವರು ಪಾಮೆ?
ಆಮರ್ ಸ್ಟ್ರಾಂಗ್ ಪಾಮೆ ಅವರು ಹೆಸರೇ ಸೂಚಿಸುವಂತೆ ಬಹಳ ಸ್ಟ್ರಾಂಗ್. ಯಾರಿಗೂ ಬೆದರದ  ಖಡಕ್ ಅಧಿಕಾರಿ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಸಾಧನೆ ಮಾಡಿ ಇಡೀ ಮಣಿಪುರದಾದ್ಯಂತ ಹೆಸರು ಗಳಿಸಿದವರು. ಅವರನ್ನು ಮಣಿಪುರದ ಜನ `ಮಿರಾಕಲ್ ಮ್ಯಾನ್' (ಪವಾಡ ಪುರುಷ) ಎಂದೇ ಕರೆಯುತ್ತಾರೆ. ಭಾರತದ ಅತ್ಯಂತ ಹಿಂದುಳಿದ ಪ್ರದೇಶವಾದ ಟೂಸೆಮ್ ನಲ್ಲಿ ತಾವೇ ಸ್ವತಃ 100 ಕಿ.ಮೀ. ಉದ್ದದ ರಸ್ತೆ ನಿರ್ಮಿಸಿ, ಈ ಪ್ರದೇಶವನ್ನು ಹೊರಜಗತ್ತಿನ ಸಂಪರ್ಕಕ್ಕೆ ತಂದವರು ಪಾಮೆ. ರಾಜ್ಯ ಸರ್ಕಾರದ ನೆರವನ್ನು ಪಡೆಯದೇ ತಮ್ಮ ಸ್ವಂತ ದುಡ್ಡಿನಲ್ಲಿ ರಸ್ತೆ ನಿರ್ಮಾಣಕ್ಕೆ ಪಣತೊಟ್ಟವರು. ಇವರ ಈ ಕಾರ್ಯಕ್ಕೆ ಮೆಚ್ಚಿ ವಿದೇಶಗಳಲ್ಲಿರುವ ಭಾರತೀಯರೂ ತಮ್ಮಿಂದಾದ ಸಹಾಯ ಮಾಡಿದ್ದರು. ಇವರ ಪ್ರಯತ್ನದ ಫಲವಾಗಿ ಮಣಿಪುರದಲ್ಲಿ `ಪೀಪಲ್ಸ್ ರೋಡ್' ನಿರ್ಮಾಣವಾಗಿದೆ.

ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದೇನು?
`ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿದ ನೀವು, ಏಕೆ ಹೀಗೆ ಮರೆಯಾದಿರಿ??.. ಒಲವಿನ ರವಿ, ನಿಮ್ಮ(2009) ಇಡೀ ಬ್ಯಾಚ್‍ಗೇ ನೆನಪಿದೆ, ನೀವೆಷ್ಟು ಮೆದು, ಶಾಂತ ಸ್ವಭಾವದ ವ್ಯಕ್ತಿಯಾಗಿದ್ದಿರಿ ಎಂದು... ಆದರೆ ಈಗ ನೀವು ನಮ್ಮೊಂದಿಗಿಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳುವಾಗ ನೋವಾಗುತ್ತಿದೆ. ಇಡೀ ದೇಶವೇ ಒಂದು ಬದ್ಧತೆಯುಳ್ಳ ವ್ಯಕ್ತಿಯನ್ನು ಕಳೆದುಕೊಂಡಿದೆ. ಆದರೆ ನೀವು ನಮಗೆ ತೋರಿಸಿಕೊಟ್ಟಿದ್ದೀರಿ, ದೇಶಕ್ಕೆ ಹೆಮ್ಮೆಯಿಂದ ಸೇವೆ ಸಲ್ಲಿಸುತ್ತೇವೆಂದು ಪ್ರಮಾಣ ಸ್ವೀಕರಿಸಿದ ನಾವೆಲ್ಲರೂ ನಿಜಕ್ಕೂ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು. ಇದು ಕೇವಲ ಯಥಾಸ್ಥಿತಿ ಕಾಪಾಡುವುದಲ್ಲ, ಸುತ್ತ ಏನೇನಾಗುತ್ತಿದೆ ಎಂಬುದು ಗೊತ್ತಿದ್ದರೂ ಸುಮ್ಮನಿರುವುದಲ್ಲ...

ಬದಲಿಗೆ ನಮಗೆ ಹೇಗೆ ಸಾಧ್ಯವಿದೆಯೋ ಆ ರೀತಿಯಲ್ಲಿ ಬದಲಾವಣೆಯನ್ನು ತರುವುದು ಹಾಗೂ ದೇಶವನ್ನು ಪ್ರತಿ ದಿನವೂ ಬಲಿಷ್ಠವಾಗುತ್ತಾ ಸಾಗುವಂತೆ ಮಾಡುವುದು. ಪ್ರೀತಿಯ ರವಿ, ನಾವು ನಮ್ಮ ಕನಸುಗಳಿಗೆ ಹೇಗೆ ಬದ್ಧರಾಗಿರಬೇಕು ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ... ಜತೆಗೆ ನಿಮ್ಮನ್ನು ಮತ್ತು ನನ್ನನ್ನು ಏಕೆ ಈ ಹುದ್ದೆಗೆ ಕರೆಯಿಸಿ ಕೊಳ್ಳಲಾಗಿದೆ ಎನ್ನುವುದನ್ನು ಕೂಡ. ನಿಮ್ಮ ಕುಟುಂಬ ಸದಸ್ಯರಿಗೆ ನಾನು ಸಾಂತ್ವನ ಹೇಳಬಯಸುತ್ತೇನೆ. ಸತ್ಯ ಹೊರಬರಲಿ ಎಂಬ ಪ್ರಾರ್ಥನೆಯೊಂದಿಗೆ...'

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com