ಅಪಾಯದ ಮಟ್ಟ ಮೀರಿದ ಝೀಲಂ ನದಿ: 18 ಸಾವು, 10 ಮನೆಗಳ ಕುಸಿತ

ಸತತ ಮೂರು ದಿನಗಳಿಂದ ಎಡೆಬಿಡದ ಸುರಿಯುತ್ತಿರುವ ಮಳೆಯಿಂದಾಗಿ ಕಣಿವೆ ರಾಜ್ಯದಲ್ಲಿ ಸೃಷ್ಟಿಯಾಗಿರುವ ಪ್ರವಾಹ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಕಾಶ್ಮೀರದ ಝೀಲಂ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಪ್ರವಾಹ ಪೀಡಿತ ಪ್ರದೇಶ
ಪ್ರವಾಹ ಪೀಡಿತ ಪ್ರದೇಶ
Updated on: 

ಶ್ರೀನಗರ: ಸತತ ಮೂರು ದಿನಗಳಿಂದ ಎಡೆಬಿಡದ ಸುರಿಯುತ್ತಿರುವ ಮಳೆಯಿಂದಾಗಿ ಕಣಿವೆ ರಾಜ್ಯದಲ್ಲಿ ಸೃಷ್ಟಿಯಾಗಿರುವ ಪ್ರವಾಹ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಕಾಶ್ಮೀರದ ಝೀಲಂ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಇನ್ನು ಮೂಲಗಳ ಪ್ರಕಾರ ಪ್ರವಾಹದಿಂದಾಗಿ ಈ ವರೆಗೂ ಸುಮಾರು 18 ಮಂದಿ ಸಾವಿಗೀಡಾಗಿದ್ದು, 10ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಎಂದು ಹೇಳಲಾಗುತ್ತಿದೆ. ಮೃತರೆಲ್ಲರೂ ಕೇಂದ್ರೀಯ ಬದಗಾಮ್ ಜಿಲ್ಲೆಯವರೆಂದು ತಿಳಿದುಬಂದಿದ್ದು, ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಅಪಾಯದ ಮಟ್ಟ ಮೀರಿದ ಝೀಲಂ
ಸೋಮವಾರ ಬೆಳಗ್ಗೆ ಝೀಲಂ ನದಿಯು ಸುಮಾರು ಅಪಾಯ ಮಟ್ವವನ್ನು ಮೀರಿ 18 ಅಡಿಗಳಿಗೂ ಎತ್ತರಕ್ಕೆ ಮೀರಿ ಹರಿಯುತ್ತಿದೆ. ಇದು ಪ್ರವಾಹ ಮತ್ತಷ್ಟು ಜೋರಾಗುವ ಭೀತಿಯನ್ನು ಸೃಷ್ಟಿಸಿದೆ. ಇನ್ನು ರಾಮ ಮುನ್ಶಿಬಾಗ್‌ ಮತ್ತು ಸಂಗಮ್‌ನಲ್ಲಿ ಕ್ರಮವಾಗಿ 18 ಅಡಿಗಳ ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದೆ ಎಂದು ಕಾಶ್ಮೀರದ ನೆರೆ ನಿಯಂತ್ರಣ ಮತ್ತು ನೀರಾವರಿ ವಿಭಾಗದ ಮುಖ್ಯಸ್ಥರಾಗಿರುವ ಚೀಫ್ ಇಂಜಿನಿಯರ್‌ ತಿಳಿಸಿದ್ದಾರೆ. ಝೀಲಂ ಹಾಗೂ ಆ ನದಿಯ ಸುತ್ತಮುತ್ತಲಲ್ಲಿ ಮಾತ್ರವಲ್ಲದೆ ಕೆಳ ಮಟ್ಟದ ಪ್ರದೇಶಗಳಲ್ಲಿ ವಾಸಿಸುವ ಜನರಿಗೂ ಕಟ್ಟೆಚ್ಚರದಿಂದ ಇರುವಂತೆ ಮತ್ತು ಸುರಕ್ಷಿತ ಪ್ರದೇಶಗಳಿಗೆ ಹೋಗುವಂತೆ ಸೂಚನೆ ನೀಡಲಾಗಿದೆ.

ಪ್ರವಾಹ ಪೀಡಿತ ಜನರ ರಕ್ಷಣೆಗಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ರಕ್ಷಣಾ ತಂಡಗಳನ್ನು, ಯಂತ್ರೋಪಕರಣಗಳನ್ನು ಹಾಗೂ ಪರಿಹಾರ ಸಾಮಗ್ರಿಗಳನ್ನು ಪೂರೈಸಲು ಆರಂಭಿಸಿದೆ. ಪ್ರವಾಹ ಸಂತ್ರಸ್ತರಿಗಾಗಿ ಆರಂಭಿಸಲಾಗಿರುವ ಶಿಬಿರಗಳಿಗೆ ವೃದ್ಧರನ್ನು, ಅನಾರೋಗ್ಯ ಪೀಡಿತರನ್ನು, ಹೆಂಗಸರು ಹಾಗೂ ಮಕ್ಕಳನ್ನು ಸ್ಥಳಾಂತರಿಸಲಾಗುತ್ತಿದೆ. ಜಡಿ ಮಳೆಯಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಜನಜೀವನ ವ್ಯವಸ್ಥೆಗೆ ತೀವ್ರ ಅಡಚಣೆಯುಂಟಾಗಿದ್ದು, ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.

ತುರ್ತು ಕ್ರಮ ತೆಗೆದುಕೊಂಡಿದ್ದೇವೆ: ಮುಫ್ತಿ ಮೊಹಮದ್
ಇದೇ ವೇಳೆ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತಂತೆ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಅವರು, ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ತುರ್ತು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನೆರೆ ಪೀಡಿತ ಪ್ರದೇಶಗಳಿಗೆ ನೂರಾರು ರಕ್ಷಣಾ ಪಡೆಗಳನ್ನು ರವಾನಿಸಿದ್ದೇವನೆ. ಶ್ರೀನಗರದಲ್ಲಿ ಗಂಜಿ ಕೇಂದ್ರಗಳನ್ನು ತೆರಯಲಾಗಿದ್ದು, ವೃದ್ಧರಿಗೆ, ಮಕ್ಕಳು ಮತ್ತು ಮಹಿಳೆಯರಿಗೆ ಅಲ್ಲಿ ಆಶ್ರಯ ನೀಡಲಾಗುತ್ತಿದೆ ಎಂದು ಹೇಳಿದರು.

ಅಲ್ಲದೆ ಅತ್ಯಾಧುನಿಕ ಯಾಂತ್ರಿಕ ಬೋಟ್ ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿಗಳು ಈಗಾಗಲೇ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ನೀಡಲಿದೆ ಎಂದು ಮುಫ್ತಿ ಮೊಹಮದ್ ಅವರು ಘೋಷಣೆ ಮಾಡಿದರು.

ಕಾರ್ಯಾಚರಣೆಗಿಳಿದ ವಾಯುಪಡೆ
ಇನ್ನು ಜಮ್ಮು ಕಾಶ್ಮೀರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕ್ರಮಕೈಗೊಂಡಿದ್ದು, ಇದಕ್ಕೆ ವಾಯುಸೇನೆ ಕೂಡ ಕೈಜೋಡಿಸಿದೆ. ವಾಯುಸೇನೆಗೆ ಸೇರಿದೆ ಸುಮಾರು 5 ಹೆಲಿಕಾಪ್ಟರ್ ಗಳು ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಅಪಾಯಕ್ಕೆ ಸಿಲುಕಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡುತ್ತಿದೆ.

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಜಮ್ಮು ಕಾಶ್ಮೀರದಲ್ಲಿ ಉಂಟಾಗಿದ್ದ, ಇತಿಹಾಸದಲ್ಲೇ ಈ ತನಕ ಕಂಡು ಕೇಳರಿಯದಿದ್ದ ಅತ್ಯಂತ ವಿನಾಶಕಾರಿ ಪ್ರವಾಹವನ್ನು ಇದೀಗ ಜನರು ಮತ್ತೆ ನೆನಪಿಸಿಕೊಂಡು ಭಯ ಪಡುವಂತೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com