

ಹೈದರಾಬಾದ್: ಹೈದರಾಬಾದಿನಲ್ಲಿ ಆಂಧ್ರಪ್ರದೇಶಕ್ಕೆ ಪ್ರತ್ಯೇಕ ನ್ಯಾಯಾಲಯವನ್ನು ಸಂವಿಧಾನ ಅನುಮತಿ ನೀಡುವುದಿಲ್ಲ ಎಂದು ಹೈದರಾಬಾದ್ ಹೈಕೋರ್ಟ್ ನ ವಿಭಾಗೀಯ ಪೀಠ ತೀರ್ಪು ನೀಡಿದೆ. ಹೊಸ ಹೈಕೋರ್ಟ್ ಸ್ಥಾಪನೆಯಾಗುವವರೆಗೂ ಇದೇ ಹೈಕೋರ್ಟ್ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಸಾಮಾನ್ಯ ಕೋರ್ಟ್ ಆಗಿ ಮುಂದುವರೆಯಲಿದೆ ಎಂದು ಕೂಡ ಅದು ತಿಳಿಸಿದೆ.
ಮುಖ್ಯ ನ್ಯಾಯಾಧೀಶ ಕಲ್ಯಾಣ್ ಜ್ಯೋತಿ ಸೇನ್ ಗುಪ್ತಾ ಹಾಗು ನಾಯಮೂರ್ತಿ ಪಿ ವಿ ಸಂಜಯ್ ಅವರನ್ನು ಒಳಗೊಂಡ ನ್ಯಾಯಪೀಠ, ನಗರದ ಸಾಮಜಿಕ ಕಾರ್ಯಕರ್ತ ಟಿ ಧನಗೋಪಾಲ ರಾವ್, ಆಂಧ್ರ ಪ್ರದೇಶ ಹೈಕೋರ್ಟ್ ಸಾಧನ ಸಮಿತಿ ಹಾಗೂ ಮತ್ತಿತರು ಆಂಧ್ರ ಮತ್ತು ತೆಲಂಗಾಣಕ್ಕೆ ಪ್ರತ್ಯೇಕ ಕೋರ್ಟ್ ಬೇಕೆಂದು ಮನವಿ ಮಾಡಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿ ಮೇಲ್ಕಂಡ ತೀರ್ಪನ್ನು ನೀಡಿದ್ದಾರೆ.
ಪ್ರತ್ಯೇಕ ಹೈಕೋರ್ಟ್ ಗಳನ್ನು ನಿರ್ಮಿಸಲು ತೆಲಂಗಾಣ ರಾಜ್ಯ ಮುಂದೆ ಬಂದಿರುವುದಕ್ಕೆ ಕೋರ್ಟ್ ಪ್ರಶಂಸಿಸಿಸ್ದರೂ, ಆಂಧ್ರ ಪ್ರದೇಶಕ್ಕೆ ಪ್ರತ್ಯೇಕ ಕೋರ್ಟ್ ನಿರ್ಮಿಸಲು ತೆಲಂಗಾಣ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದಿದೆ.
"ಹೊಸ ಹೈಕೋರ್ಟ್ ಗೆ ಜಾಗ ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದು ಆಂಧ್ರ ಪ್ರದೇಶದ ಸರ್ಕಾರದ ಕೆಲಸ. ಜಾಗ ಹುಡುಕಿಟ್ಟರೆ ಕೆಲಸ ಮುಗಿಯುವುದಿಲ್ಲ. ಹೈಕೋರ್ಟ್ ಅದನ್ನು ಪರಿಶೀಲನೆ ನಡೆಸಿ ಮುಂದುವರೆಯುತ್ತದೆ" ಎಂದು ತೀರ್ಪು ನೀಡಿದೆ.