

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗಕ್ಕೆ ಬಂದು ಗೋಮಾಂಸ ತಿಂದು ನೋಡಲಿ ಅವರ ರುಂಡ ಕಡಿದು ಚೆಂಡಾಡಿ ಬಿಡುತ್ತೇವೆಂದು ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷ ಚೆನ್ನಬಸಪ್ಪ ಅವರು ಮಂಗಳವಾರ ಹೇಳಿದ್ದಾರೆ.
ಗೋಮಾಂಸ ಸೇವನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆ ವಿರೋಧಿಸಿ ಬಿಜೆಪಿ ವತಿಯಿಂದ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಪ್ರತಿಭಟನೆಯೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಚೆನ್ನಬಸಪ್ಪ ಅವರು, ಸಿದ್ದರಾಮಯ್ಯ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಗೋಮಾಂಸ ತಿನ್ನಲೇ ಬೇಕೆಂದಿದ್ದರೆ ಅವರು ತಿನ್ನಲಿ ಅವರನ್ನು ಯಾರೂ ತಡೆಯುವುದಿಲ್ಲ ಎಂದು ಹೇಳಿದ್ದಾರೆ.
ಈ ರೀತಿಯ ಮಾಡಿದರೆ ನಾವು ಅವರನ್ನು ಬಿಟ್ಟುಬಿಡುತ್ತೇವೆ. ಏನನ್ನೂ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಅವರು ತಿಳಿದುಕೊಂಡಿದ್ದಾರೆ. ಅದು ಅವರ ತಪ್ಪು ತಿಳುವಳಿಕೆ. ಅವರಿಗೆ ನಿಜಕ್ಕೂ ಧೈರ್ಯವಿದ್ದರೆ, ಶಿವಮೊಗ್ಗಕ್ಕೆ ಬಂದು ಗೋವನ್ನು ಕೊಂದು ಅದನ್ನು ನಮಗೆ ತೋರಿಸಲಿ.ಒಂದು ವೇಳೆ ಗೋಮಾಂಸ ತಿಂದಿದ್ದೇ ಆದರೆ, ಅವರ ರುಂಡವನ್ನು ಕಡಿದು ಚೆಂಡಾಡುವುದಕ್ಕೂ ನಾವು ಎರಡನೇ ಬಾರಿ ಯೋಚಿಸುವುದಿಲ್ಲ.
ಮುಖ್ಯಮಂತ್ರಿ ಅವರ ಈ ರೀತಿಯ ಹೇಳಿಕೆ ಹಿಂದೂಗಳ ಮನಸ್ಸಿಗೆ ನೋವುಂಟು ಮಾಡಿದೆ. ನಾವು ಗೋಮಾತೆಯ ಹಾಲು ಕುಡಿದು ಬೆಳೆದಿದ್ದೇವೆ. ಅಂತಹ ಗೋಮಾತೆ ಕುರಿತಂತೆ ಸಿದ್ಧರಾಮಯ್ಯ ನೀಡಿರುವ ಹೇಳಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕನ ವಿರುದ್ಧ ದೂರು ದಾಖಲು
ಗೋಮಾಂಸ ಹೇಳಿಕೆ ಕುರಿತಂತೆ ಬೆದರಿಕೆ ಹಾಕಿದ್ದ ಬಿಜೆಪಿ ನಾಯಕನ ವಿರುದ್ಧ ಇದೀಗ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿವರಿಗೆ ಜಿಲ್ಲಾ ಕಾಂಗ್ರೆಸ್ ದೂರು ನೀಡಿರುವುದಾಗಿ ತಿಳಿದುಬಂದಿದೆ.
ಬಿಜೆಪಿ ನಾಯಕನ ವಿರುದ್ಧ ಕಾನೂನು ಕ್ರಮ: ಸಿಎಂ ಹೇಳಿಕೆ
ಬೆದರಿಕೆ ಹಾಕಿದ್ದ ಬಿಜೆಪಿ ನಾಯಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆಂದು ತಿಳಿದುಬಂದಿದೆ.
ಪ್ರಕರಣ ಕುರಿತಂತೆ ಇಂದು ನಡೆದ ಜನತಾ ದರ್ಶನದಲ್ಲಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು, ಬಿಜೆಪಿಯವರಿಗೆ ಈ ರೀತಿಯ ಭಾಷೆ ಬಳಸುವುದು ಹವ್ಯಾಸವಾಗಿಬಿಟ್ಟಿದೆ. ಅವರು ಏನೇ ಹೇಳಿಕೆ ನೀಡಿ ಪ್ರಚೋದನೆ ಮಾಡಿದರೂ ನಾವು ಬಗ್ಗುವುದಿಲ್ಲ, ಪ್ರಚೋದನೆಗೆ ಒಳಗಾಗುವುದಿಲ್ಲ. ನನ್ನನ್ನು ಯಾರೂ ಪ್ರಚೋದನೆಗೊಳಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಹೇಳಿಕೆ ನೀಡಿದ್ದ ನಾಯಕ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಏನಿದು ವಿವಾದ...?
ಈ ಹಿಂದೆ ಬಿಜೆಪಿಯವರ ಗೋಮಾಂಸ ಸೇವನೆ ವಿರೋಧ ನೀತಿಯನ್ನು ತೀವ್ರವಾಗಿ ಟೀಕಿಸಿದ್ದ ಸಿದ್ದರಾಮಯ್ಯ ಅವರು ಕರ್ನಾಟಕದ ಯುವ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿ ಗೋಮಾಂಸ ಸೇವನೆ ವಿರೋಧ ನೀತಿಯು ನಿಜಕ್ಕೂ ಅಸಂಬದ್ಧವಾದದ್ದು. ಈ ಬಗೆಗಿನ ಜನರ ವೈಯಕ್ತಿಕ ಹಕ್ಕನ್ನು ಕಿತ್ತುಕೊಳ್ಳುವ ಹಕ್ಕು ಬಿಜೆಪಿ ಅಥವಾ ಅದರ ಸಂಯೋಜಿತ, ಬೆಂಬಲಿತ ಪಕ್ಷಗಳಿಗಾಗಲಿ ಇಲ್ಲ. ಈವರೆಗೂ ನಾನು ಗೋಮಾಂಸವನ್ನು ತಿಂದಿಲ್ಲ. ಆದರೆ, ನನಗೆ ತಿನ್ನಬೇಕೆನಿಸಿದರೆ ನಾನು ತಿಂದೇ ತಿನ್ನುತ್ತೇನೆ ಎಂದು ಹೇಳಿದ್ದರು.
ಮುಖ್ಯಮಂತ್ರಿಯವರ ಹೇಳಿಕೆ ವಿರುದ್ಧ ಪ್ರತಿಪಕ್ಷದ ನಾಯಕರು ಹರಿಹಾಯ್ದಿದ್ದರು, ಗೋಮಾಂಸ ತಿನ್ನುತ್ತೇನೆಂದು ಹೇಳುತ್ತಿರುವ ಸಿದ್ದರಾಮಯ್ಯ ಅವರಿಗೆ ಧೈರ್ಯವಿದ್ದರೆ ಹಂದಿ ಮಾಂಸ ತಿನ್ನಲಿ ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರು ಸಿಎಂಗೆ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರು, ಈ ವರೆಗೂ ಹಂದಿ ಮಾಂಸವನ್ನು ತಿಂದಿಲ್ಲ. ಇನ್ನು ಮುಂದೆ ಅದನ್ನೂ ತಿನ್ನುತ್ತೇನೆಂದು ಹೇಳಿದ್ದರು.
ನಂತರ ತಮ್ಮ ಹೇಳಿಕೆ ಕುರಿತಂತೆ ಮರು ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರು, ಈ ರೀತಿಯ ಹೇಳಿಕೆಯನ್ನು ನಾನು ನೀಡಿಲ್ಲ. ನಾನು ಗೋಮಾಂಸ ತಿನ್ನುತ್ತೇನೆಂದು ಹೇಳಿಯೇ ಇಲ್ಲ. ಜನರ ಆಹಾರ ಪದ್ಧತಿಯನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಗೋಮಾಂಸ ತಿನ್ನುವವರು ತಿನ್ನಲಿ. ನಾನು ಇಷ್ಟಪಟ್ಟರೆ ತಿನ್ನುತ್ತೇನೆ. ಇದನ್ನು ಯಾರು ಪ್ರಶ್ನಿಸುತ್ತಾರೆ ಎಂದು ಹೇಳಿದ್ದೆ ಎಂದು ಹೇಳಿದ್ದರು.