

ಬೆಂಗಳೂರು: ಪ್ರಸಕ್ತ ವರ್ಷದ ಕಡೆಯ ಹಾಗೂ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿರುವ ಸಂದರ್ಭದಲ್ಲೇ ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರದ ವಿರುದ್ಧ ಮತ್ತೆ ಗುಡುಗಿದ್ದಾರೆ.
ರಾಜ್ಯ ಸರ್ಕಾರ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿ ಮಾಡಿಲ್ಲ. ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ವಿನಂತಿಸಿದ್ದೇನೆ. ಆದರೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಕಾಯ್ದೆ ಜಾರಿಗೊಳಿಸುವಲ್ಲಿ ಆಸಕ್ತಿ ವಹಿಸಿದ ಅರಣ್ಯ ಸಚಿವ ರಮಾನಾಥ ರೈ ವಿರುದ್ಧ ಕಿಡಿಕಾರಿದ್ದು, ಅರಣ್ಯ ಸಚಿವರನ್ನು ಅರಣ್ಯದಲ್ಲೇ ಹುಡುಕಬೇಕಿದೆ ಎಂದು ಲೇವಡಿ ಮಾಡಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಅರ್ಧ ಅವಧಿಯ ಆಡಳಿತ ವೈಖರಿ ಬಗ್ಗೆ ನಾನು ಹೇಳುವುದು ಸರಿಯಲ್ಲ. ರಾಜ್ಯದ ಜನತೆ ಹೇಳಬೇಕು. ಏಕೆಂದರೆ, ನಾನು ಮೂರನೇ ಮಹಡಿಯಲ್ಲಿ ಕುಳಿತು ಅಧಿಕಾರ ಅನುಭವಿಸಲು ಬಂದವನಲ್ಲ. ಮೊದಲ ಮಹಡಿಯಲ್ಲಿ ಕುಳಿತು ಶೋಷಿತರ, ನೊಂದವರ ದನಿಯಾಗಬೇಕೆಂದು ಬಂದವನು.
ಆದರೆ ಈ ಸರ್ಕಾರಕ್ಕೆ ಹೇಳಿಹೇಳಿ ನನ್ನ ದನಿ ಅಡಗಿ ಹೋಗಿದೆ ಎಂದು ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು. ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಿ ಆ ಭಾಗದ ಜನರ ಸಮಸ್ಯೆ ಪರಿಹರಿಸಿ ಎಂದು ಮುಖ್ಯಮಂತ್ರಿ ಅವರನ್ನೇ ಕೇಳಿಕೊಂಡಿದ್ದೇನೆ. ಅರಣ್ಯ ವಾಸಿಗಳಿಗೆ ಸಾಗುವಳಿ ಪತ್ರ ನೀಡಿ, ಈ ಕಾಯ್ದೆಯನ್ನು ಪೂರ್ಣ ಜಾರಿಗೊಳಿಸಿದರೆ ನಿಮ್ಮ ಪಾದ ಮುಟ್ಟಿ ನಮಸ್ಕರಿಸುತ್ತೇನೆಂದು ಹೇಳಿದ್ದೇನೆ. ಅದು ಅವರಿಗೆ ಹೃದಯಸ್ಪರ್ಶಿ ಮನವಿ ಎನಿಸಿದೆ. ಅವರೀಗ ಡಿಸೆಂಬರ್‌ವರೆಗೂ ಅವಕಾಶ ಕೇಳಿದ್ದಾರೆ. ಅಲ್ಲಿವರೆಗೂ ನೋಡೋಣ ಏನು ಮಾಡುತ್ತಾರೋ ಎಂದರು.
ಸೋಮವಾರದಿಂದ ಆರಂಭವಾಗುವ ೧೦ ದಿನಗಳ ವಿಧಾನಸಭೆ ಅಧಿವೇಶನದ ಬಗ್ಗೆ ವಿವರಿಸಿದ ಅವರು, ನ.೧೬ರಂದು ಅಧಿವೇಶನ ಆರಂಭವಾಗುತ್ತ ದೆಯಾದರೂ ಅಂದು ಕಲಾಪ ನಡೆಯುವುದಿಲ್ಲ. ಏಕೆಂದರೆ, ಹಾಲಿ ಸದಸ್ಯ ಎ.ವೆಂಕಟೇಶ್ ನಾಯಕ್ ನಿಧನ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಕಲಾಪವನ್ನು ಮುಂದೂಡಲಾಗುತ್ತದೆ ಎಂದರು. ಈ ಅಧಿವೇಶನದೊಂದಿಗೆ ವರ್ಷದಲ್ಲಿ ೫೮ ದಿನಗಳ ಕಲಾಪ ನಡೆಸಿದಂತಾಗುತ್ತದೆ. ವರ್ಷದಲ್ಲಿ ೬೦ ದಿನ ಕಲಾಪ ನಡೆಸಬೇಕಿರುವುದರಿಂದ ಸಾಧ್ಯವಾದರೆ ಬೆಳಗಾವಿಯಲ್ಲೂ ನಡೆಸುವಂತೆ ಸರ್ಕಾರಕ್ಕೆ ಸಲಹೆ ನೀಡುತ್ತೇನೆ ಎಂದರು.
ಪ್ರಸ್ತಾಪ ಬಂದಿಲ್ಲ
ಲೋಕಾಯುಕ್ತರ ಪದಚ್ಯುತಿ ಬಗ್ಗೆ ನನಗೆ ಈತನಕ ಯಾವುದೇ ಪ್ರಸ್ತಾಪ ಬಂದಿಲ್ಲ. ಇದು ಸೂಕ್ಷ್ಮ ವಿಚಾರ ಆಗಿರುವುದರಿಂದ ಪ್ರಸ್ತಾಪ ಬಂದರೆ ಎಲ್ಲಾ ಪಕ್ಷಗಳ ಜತೆಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಪ್ರತಿಕ್ರಿಯಿಸಿದರು.