

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯ, ಜಿಲ್ಲಾ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷೀಯ ಚುನಾವಣೆ ಫೆಬ್ರವರಿ 28ರಂದು ನಡೆಯಲಿದ್ದು, ಸೋಮವಾರ ವೇಳಾಪಟ್ಟಿ ಪ್ರಕಟಗೊಂಡಿದೆ.
ಕಸಾಪ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣೆ ವೇಳಾಪಟ್ಟಿ ಮತ್ತು ಕಸಾಪ ಮತದಾರರ ಕರಡು ಪಟ್ಟಿ ಕುರಿತು ಮಾಹಿತಿ ನೀಡಿದ ಕೇಂದ್ರ ಚುನಾವಣಾಧಿಕಾರಿ ಕೆ.ನಾಗರಾಜು, ಮತದಾರರ ಕರಡು ಪಟ್ಟಿ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಡಿ. 19ರೊಳಗೆ ಕೇಂದ್ರ ಚುನಾವಣಾಧಿಕಾರಿ ಹಾಗೂ ಆಯಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದು. ಪರಿಶೀಲನೆ ಬಳಿಕ ಜ.11ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಈ ಬಾರಿಯ ಕರಡು ಮತದಾರರ ಪಟ್ಟಿಯಲ್ಲಿ 1,89,048 ಮತದಾರರಿದ್ದಾರೆ. ಇದರಲ್ಲಿ 25 ಪೊಷಕರು, 29 ದಾತೃಗಳು, 128 ಆಜೀವ ಅಂಗಸಂಸ್ಥೆಗಳು, 1,88,841 ಆಜೀವ ಸದಸ್ಯರಿದ್ದಾರೆ. ರಾಜ್ಯದ 30 ಜಿಲ್ಲೆಗಳಲ್ಲಿ 1,87,274, 92 ಅಂಗ ಸಂಸ್ಥೆ, ಗಡಿನಾಡು ಘಟಕಗಳಾದ ಆಂಧ್ರಪ್ರದೇಶ 323, ಕೇರಳ 611, ತಮಿಳುನಾಡು 157, ಮಹಾರಾಷ್ಟ್ರ 523, ಹೊರಾಜ್ಯಗಳಲ್ಲಿ 130, ವಿದೇಶದಲ್ಲಿ 30 ಮಂದಿ ಸದಸ್ಯರಿದ್ದಾರೆ ಎಂದು ವಿವರಿಸಿದರು. ಜ. 25 ಕೊನೆ ದಿನ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಜ.18ರಿಂದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು.
ಜ. 25 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜಿಲ್ಲಾ ಘಟಕಗಳ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಆಯಾ ಜಿಲ್ಲಾ ಕೇಂದ್ರದ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಬಹುದು. ಜ. 28ರಂದು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಫೆ.1 ಕಡೆಯ ದಿನವಾಗಿದ್ದು, ಅಂದೇ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗುವುದೆಂದು ತಿಳಿಸಿದರು.
ಮತಪತ್ರಗಳ ರವಾನೆ: ಗಡಿನಾಡು, ಹೊರನಾಡು ಹಾಗೂ ಹೊರದೇಶಗಳಲ್ಲಿರುವ ಸದಸ್ಯರು ರಾಜ್ಯ ಘಟಕ ಮತ್ತು ಆಯಾ ಗಡಿನಾಡು ಘಟಕದ ಅಧ್ಯಕ್ಷರ ಚುನಾವಣೆಗೆ ಫೆ. 12ರೊಳಗೆ ರಿಜಿಸ್ಟರ್ಡ್ ಅಂಚೆಯ ಮೂಲಕ ಮತಪತ್ರಗಳನ್ನು ರವಾನಿಸಲಾಗುತ್ತಿದೆ. ಬಳಿಕ ಸದಸ್ಯರು ಮಾ.1ರೊಳಗೆ ಕಸಾಪ ಕೇಂದ್ರ ಚುನಾವಣಾಧಿಕಾರಿ ಕಚೇರಿಗೆ ಮತಪತ್ರಗಳನ್ನು ಕಳಹಿಸಬೇಕು. ಮತ ಎಣಿಕೆ ನಡೆಸಿ ಮಾ.2ರಂದು ಗಡಿನಾಡ ಘಟಕಗಳ ಅಧ್ಯಕ್ಷರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದರು.
245 ಮತಗಟ್ಟೆಗಳು: ರಾಜ್ಯ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನದ ಚುನಾವಣೆಯು ಫೆ.28ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ರಾಜ್ಯದ 245 ಮತಗಟ್ಟೆಗಳಲ್ಲಿ ನಡೆಯಲಿದೆ. ಬಳಿಕ ಆಯಾ ಜಿಲ್ಲಾ ಕೇಂದ್ರದ ಚುನಾವಣಾಧಿಕಾರಿ ಹಾಗೂ ಸಹಾಯ ಚುನಾವಣಾಧಿಕಾರಿ ಮತ ಎಣಿಕೆ ನಡೆಸಿ, ಜಿಲ್ಲಾ ಘಟಕದ ಅಧ್ಯಕ್ಷರ ಫಲಿತಾಂಶ ಹಾಗೂ ಆಯ್ಕೆಯನ್ನು ಘೋಷಿಸಲಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷರ ಮತ ಎಣಿಕೆ ನಡೆಸಿ ಕೇಂದ್ರ ಚುನಾವಣಾಧಿಕಾರಿಗೆ ಕಳುಹಿಸಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆ ಮತದಾರರು ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿನ ಮತಗಟ್ಟೆಗಳಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ರಾಜ್ಯದ ಎಲ್ಲ ತಾಲೂಕು ಕೇಂದ್ರ ಹಾಗೂ ನೂರಕ್ಕಿಂತ ಹೆಚ್ಚು ಮತದಾರರಿರುವ ಕೆಲ ಹೋಬಳಿ ಕೇಂದ್ರದಲ್ಲೂ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಕಸಾಪದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಮಾ. 2ರಂದು ಕಸಾಪ ಕೇಂದ್ರ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಹಾಗೂ ರಿಜಿಸ್ಟರ್ಡ್ ಅಂಚೆ ಮೂಲಕ ಬಂದ ಮತಗಳ ಎಣಿಕೆ ನಡೆಯಲಿದ್ದು, ಬಳಿಕ ಅಧ್ಯಕ್ಷರ ಆಯ್ಕೆ ಘೋಷಿಸಲಾಗುವುದು ಎಂದರು.
ಚುನಾವಣೆಯಿಂದಾಗಿ ಯಾವುದೇ ಸಾಹಿತ್ಯಕ ಚುಟುವಟಿಕೆಗಳು ನಿಲ್ಲಬಾರದು. ಆದರೆ, ಅಭ್ಯರ್ಥಿಗಳು ಅಲ್ಲಿ ಪ್ರಚಾರ ಮಾಡಬಾರದು. ಚುನಾವಣೆಗೆ ವೆಚ್ಚ ನಿಗದಿಯಿಲ್ಲ. 2008ರಲ್ಲಿ ರು.11.50 ಲಕ್ಷ, 2012ರಲ್ಲಿ ರು.20.50 ಲಕ್ಷ ವೆಚ್ಚ ತಗುಲಿತ್ತು. ಈ ಬಾರಿ ರು.35 ಲಕ್ಷ ವೆಚ್ಚವಾಗುವ ನಿರೀಕ್ಷೆಯಿದೆ.