

ನವದೆಹಲಿ: ಭಾರತ ಬಿಟ್ಟು ವಿಶ್ವವನ್ನು ಸಂಪರ್ಕಿಸಲು ಸಾಧ್ಯವಿಲ್ಲ ಎಂದು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು ಬುಧವಾರ ಹೇಳಿದ್ದಾರೆ.
ಇಂದು ದೆಹಲಿಯ ಐಐಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಜುಕರ್‌ಬರ್ಗ್, ಭಾರತಕ್ಕೆ ಬಂದಿರುವುದು ತುಂಬಾ ಸಂತೋಷ ತಂದಿದೆ. ಇಲ್ಲಿ ವಿಶಿಷ್ಟ ಎನರ್ಜಿ ಇದೆ ಎಂದರು.
ಫೇಸ್‌ಬುಕ್‌ನಿಂದ ಇಡೀ ವಿಶ್ವವನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ಎಲ್ಲಾ ಜನರನ್ನು ಒಂದುಗೂಡಿಸುವುದು ನಮ್ಮ ಉದ್ದೇಶ ಎಂದು ಜುಕರ್‌ಬರ್ಗ್ ಹೇಳಿದರು.
ಭಾರತವಿಲ್ಲದೆ ವಿಶ್ವವನ್ನು ಸಂಪರ್ಕಿಸಲು ಸಾಧ್ಯವಿಲ್ಲ ಎಂದ ಜುಕರ್‌ಬರ್ಗ್, ಪ್ರಪಂಚವನ್ನು ಸಂಪರ್ಕಿಸಲು ಭಾರತ ಬೀಗದ ಕೀ ಇದ್ದಂತೆ. ಭವಿಷ್ಯದಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದರು.
ಫೇಸ್‌ಬುಕ್‌ಗೆ ಭಾರತ ಒಂದು ಪ್ರಮುಖವಾದ ಮಾರುಕಟ್ಟೆಯಾಗಿದೆ. ಇಂಟರ್ನೆಟ್‌ನಿಂದ ಬಡತನ ನಿರ್ಮೂಲನೆ ಸಾಧ್ಯ ಎಂದು ಜುಕರ್‌ಬರ್ಗ್ ಹೇಳಿದರು. ಅಲ್ಲದೆ ಇಂಟರ್ನೆಟ್ ಬಗ್ಗೆ ತಿಳಿಯಲೆಂದು internet.org ಸ್ಥಾಪಿಸಲಾಗಿದೆ. ಇದರಲ್ಲಿ ಇಂಟರ್ನೆಟ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಪ್ರತಿಯೊಬ್ಬರು ಇಂಟರ್ನೆಟ್ ಬಗ್ಗೆ ತಿಳಿದುಕೊಳ್ಳಬೇಕು ಎಂದರು.