

ನವದೆಹಲಿ: ಇಂತಹ ಒಂದು ಅಪೂರ್ವ ಶ್ಲಾಘನೆಯಲ್ಲಿ ಸರ್ಕಾರಿ ನೌಕರಿಗಳಲ್ಲಿ ವಿಕಲಾಂಗ ಚೇತನರ ನೇಮಕಾತಿಗಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಸುಪ್ರೀಂ ಕೋರ್ಟ್ ಸ್ವಾಗತಿಸಿದೆ. ಇದೇ ಸಮಯದಲ್ಲಿ ವಿಕಲಾಂಗ ಚೇತನರಿಗೆ ೩% ಮೀಸಲಾತಿಯ ತೀರ್ಪನ್ನು ಬೇಕಂತಲೇ ಸರ್ಕಾರ ನಿರ್ಲ್ಯಕ್ಷಿಸಿದೆ ಎಂಬ ಆರೋಪವನ್ನು ಕೋರ್ಟ್ ತಳ್ಳಿ ಹಾಕಿದೆ.
"ಪ್ರತಿವಾದಿಗಳ ಅರ್ಜಿಯನ್ನು ನಾವು ಒಪ್ಪಿಕೊಂಡಿದ್ದೇವೆ. ಸಾಲಿಸಿಟರ್ ಜನರಲ್ ನೀಡಿರುವ ಮಾಹಿತಿಗಳ ಪ್ರಕಾರ, ವಿಕಲಾಂಗ ಚೇತನರಿಗೆ ಮೀಸಲಿಟ್ಟ ಎಲ್ಲ ಹುದ್ದೆಗಳನ್ನು ತುಂಬಲು ಸರ್ಕಾರ ಒಗ್ಗೂಡಿ ಕೆಲಸ ಮಾಡಿದೆ" ಎಂದು ನ್ಯಾಯವಾದಿಗಳಾದ ರಂಜನ್ ಗೊಗೊಯ್ ಮತ್ತು ಎನ್ ವಿ ರಮಣ ಹೇಳಿದ್ದಾರೆ.
"ಕೋರ್ಟಿನ ತೀರ್ಪನ್ನು ಬೇಕಂತಲೇ ನಿರ್ಲಕ್ಷಿಸಿದ್ದಾರೆ ಎಂದು ಹೇಳಲು ಬರುವುದಿಲ್ಲ" ಎಂದಿರುವ ನ್ಯಾಯಾಲಯ, ಅಟಾರ್ನಿ ಜನರಲ್ ಮುಕುಲ್ ರೋಹ್ತಾಗಿ ಮತ್ತು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್, ೧೫೦೦೦ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಫೆಬ್ರವರಿ ಒಳಗೆ ಇದು ಸಂಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ ಎಂದು ಕೂಡ ಹೇಳಿದೆ.
ಅಂಧರಿಗಾಗಿ ರಾಷ್ಟ್ರೀಯ ಒಕ್ಕೂಟ ಎಂಬ ಎಂ ಜಿ ಒ ಸಂಸ್ಥೆ, ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಕೋರ್ಟ್ "ಇದು ದೊಡ್ಡ ಮಟ್ಟದ ಯೋಜನೆ ಮತ್ತು ಕೇಂದ್ರ ಸರ್ಕಾರ ಇದಕ್ಕೆ ಬದ್ಧವಾಗಿದೆ" ಎಂದು ತಿಳಿಸಿದೆ.
ವಿಚಾರಣೆ ವೇಳೆಯಲ್ಲಿ ಸಾಲಿಸಿಟರ್ ಜನರಲ್ ಅವರು "ಈ ಮೀಸಲಾತಿ, ಹುದ್ದೆಗಳ ಭಡ್ತಿಗೆ ನೀಡಲಾಗುವುದಿಲ್ಲ. ಹೊಸದಾಗಿ ನೇಮಕಾತಿ ಮಾಡಿಕೊಳ್ಳಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.
ಎನ್ ಜಿ ಒ ಪರ ವಾದಿಸುತ್ತಿದ್ದ ವಕೀಲ ಎಸ್ ಕೆ ಗುಪ್ತಾ, ಕೆಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕೋರ್ಟ್ ತೀರ್ಪನ್ನು ಉಲ್ಲಂಘಿಸಿದ್ದು ವಿಕಲಾಂಗ ಚೇತನರನ್ನು ಹುದ್ದೆಗಳಿಗೆ ನೇಮಕಾತಿ ಮಾಡುವಲ್ಲಿ ವಿಫಲವಾಗಿದೆ ಎಂದು ವಾದಿಸಿದ್ದರು.