

ಬೆಂಗಳೂರು: ದೂರದ ದೆಹಲಿವರೆಗೂ ರಾಜಕೀಯ ಚಟುವಟಿಕೆ ವ್ಯಾಪಿಸುವಂತೆ ಮಾಡಿರುವ ಬಿಬಿಎಂಪಿ ಮೇಯರ್ ಚುನಾವಣೆಗೆ ಕೌಂಟ್‍ಡೌನ್ ಆರಂಭವಾಗಿದೆ.
ಕುದುರೆ ವ್ಯಾಪಾರ ತಪ್ಪಿಸಿಕೊಳ್ಳಲು ರಾಜಧಾನಿ ತ್ಯಜಿಸಿದ್ದ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಗುರುವಾರ ಸಂಜೆ ಬೆಂಗಳೂರಕ್ಕೆ ವಾಪಸಾಗುತ್ತಿದ್ದು ಇದರೊಂದಿಗೆ ಮೇಯರ್ ಚುನಾವಣೆ ಬಿಬಿಎಂಪಿ ಚುನಾವಣೆಗಿಂತಲೂ ಮಿಗಿಲಾಗಿ ರಂಗೇರಲಿದೆ. ಕೇರಳದಲ್ಲಿರುವ ಜೆಡಿಎಸ್ ಸದಸ್ಯರು, ಕೊಡಗಿನಲ್ಲಿರುವ ಕಾಂಗ್ರೆಸ್ ಮತ್ತು ಪಕ್ಷೇತರ ಸದಸ್ಯರು ರೆಸಾರ್ಟ್ ತೊರೆದು ರಾಜಧಾನಿ ಸೇರಲಿದ್ದಾರೆ. ಇಂದು ಮೇಯರ್ ಅಂತಿಮ ಮೇಯರ್ ಆಯ್ಕೆ ವಿಚಾರ ಕೂಡ ಅಂತಿಮ ಹಂತಕ್ಕೆ ಬಂದಿದ್ದು, ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರದ ಐವರು ಸಚಿವರು ಖಾಸಗಿ ಹೊಟೇಲ್‍ನಲ್ಲಿ ಸಭೆ ನಡೆಸಲಿದ್ದಾರೆ.
ಅಲ್ಲೇ ಮೇಯರ್ ಮತ್ತು ಉಪ ಮೇಯರ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ. ಅತ್ತ ಬಿಜೆಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಹೇಗೆಲ್ಲಾ ಮಣ್ಣು ಮುಕ್ಕಿಸಬಹುದು ಎಂದು ಅಂತಿಮ ಲೆಕ್ಕಾಚಾರ ಮಾಡುತ್ತಿದೆ. ಈ ಸಂಬಂಧ ಬಿಜೆಪಿ ಕೂಡ ಗುರುವಾರ ಮುಖಂಡರ ಸಭೆ ನಡೆಸುತ್ತಿದ್ದು, ಪಕ್ಷದಿಂದ ಯಾರನ್ನು ಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆಅಭ್ಯರ್ಥಿಯನ್ನಾಗಿ ಮಾಡಬೇಕೆಂದು ತೀರ್ಮಾನಿಸಲಿದೆ. ಇನ್ನು ಜೆಡಿಎಸ್ ಈಗಾಗಲೇ ಕಾಂಗ್ರೆಸ್‍ಗೆ ಬೇಷರತ್ ಬೆಂಬಲ ಘೋಷಿಸಿರುವುದರಿಂದ ಅದು ಉಪ ಮೇಯರ್ ಸ್ಥಾನ ಪಡೆವ ಭರವಸೆಯೊಂದಿಗೆ ತಣ್ಣಗಾಗಿದೆ. ಹೈಕೋರ್ಟ್ ಸಮ್ಮತಿ: ಇದೆಲ್ಲರ ಮಧ್ಯೆ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಪ್ರಕಟಿಸಿದ್ದು, ಚುನಾವಣೆಗೆ ಹಸಿರು ನಿಶಾನೆ ದೊರೆತಿದೆ.
ಆದರೆ, ಮತದಾರರ ಪಟ್ಟಿಯಲ್ಲಿರುವ ಅರ್ಹರ ವಿಚಾರವನ್ನು ಮಾತ್ರಕೋರ್ಟ್ ಚುನಾವಣಾಧಿಕಾರಿಗಳ ಹೆಗಲಿಗೇ ಹೊರಿಸಿದೆ. ಒಟ್ಟಾರೆ ಘೋಷಣೆಯಾಗಿರುವ 260 ಮಂದಿ ಮತದಾರರಲ್ಲಿ ಎಷ್ಟು ಮಂದಿ ಅರ್ಹರಿದ್ದಾರೆ ಎಂದು ಡಿಸಿ ಗುರುವಾರವೇ ನಿರ್ಧರಿಸ ಲಿದ್ದಾರೆ. ರೆಸಾರ್ಟ್‍ನಲ್ಲಿರುವ ಸದಸ್ಯರಿಗೆ ಕಾಂಗ್ರೆಸ್ ನಾಯಕರು ಬಿಬಿಎಂಪಿ ಆಡಳಿತ ಮತ್ತು ಪಕ್ಷದ ನಿಷ್ಠೆಯ ಪಾಠಗಳನ್ನೂ ಮಾಡುತ್ತಿದ್ದಾರೆ. ಹೀಗೆ ಭಾರೀ ಕುತೂಹಲ ಕೆರಳಿಸಿರುವ ಚುನಾವಣೆಗೆ ಅಂತಿಮ ಹಂತದ ಕರಸತ್ತು ನಡೆಯುತ್ತಿದ್ದು, ಸಮರ ಕೊನೆ ಹಂತಕ್ಕೆ ಬಂದು ನಿಂತಿದೆ.