

ಬೆಂಗಳೂರು: ಕಳಸಾಬಂಡೂರಿ ನಾಲೆ ಯೋಜನೆ ಜಾರಿಗೆ ಆಗ್ರಹಿಸಿ ಶನಿವಾರ ಅಖಂಡ ಕರ್ನಾಟಕ ಹಮ್ಮಿಕೊಂಡಿದ್ದ ಬಂದ್ ಬಿಸಿ ಹೈಕೋರ್ಟ್ ಪ್ರಧಾನ ಪೀಠಕ್ಕೆ ತಟ್ಟಲಿಲ್ಲ.
ಕರ್ನಾಟಕ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಕರ್ನಾಟಕ ಬಂದ್‍ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರೂ ಹೈಕೋರ್ಟ್ ಕಲಾಪಗಳು ಯಾವುದೇ ಅಡಚಣೆಯಿಲ್ಲದೆ ಎಂದಿನಂತೆ ಸುಗಮವಾಗಿ ನಡೆದವು. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸೆ. 24 ಮತ್ತು ಸೆ. 25 ಹೈಕೋರ್ಟ್‍ಗೆ ರಜೆಯಿತ್ತು. ಶನಿವಾರದ ಕರ್ನಾಟಕ ಬಂದ್‍ಗೆ ವಕೀಲರ ಸಂಘಗಳು ಸಹ ಬೆಂಬಲ ವ್ಯಕ್ತಪಡಿಸಿದ್ದರಿಂದ ಶನಿವಾರ ಕೋರ್ಟ್ ಕಲಾಪಗಳು ನೀರಸವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಎಂದಿನಂತೆ ಎಲ್ಲ ಪೀಠಗಳಲ್ಲಿ ವಿಚಾರಣೆಗಳು ನಡೆದವು.
ಕಂಪ್ಯೂಟರ್ ವಿಭಾಗಕ್ಕೆ ಚಾಲನೆ
ಹೈಕೋರ್ಟ್ ಕಂಪ್ಯೂಟರ್ ಮುಖ್ಯ ಕೇಂದ್ರದ ನವೀಕೃತ ಕಚೇರಿಯನ್ನು ಶನಿವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್. ಕೆ. ಮುಖರ್ಜಿ ಉದ್ಘಾಟಿಸಿದರು. ಕಳೆದ ಒಂದು ತಿಂಗಳಿನಿಂದ ಕೇಂದ್ರದ ನವೀಕರಣದ ಕಾಮಗಾರಿ ಸಾಗಿತ್ತು. ಈ ಹಿಂದೆ ಕೇಂದ್ರದಲ್ಲಿ 10ರಿಂದ 15 ಕಂಪ್ಯೂಟರ್‍ಗಳಿದ್ದ ಕಾರಣ ಕೆಲಸವು ಸುಗಮವಾಗಿ ನಡೆಯಲು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್ ಕೇಂದ್ರವನ್ನು ನವೀಕರಣ ಮಾಡಲಾಗಿದೆ. ಈಗ ಒಟ್ಟು 28 ಕಂಪ್ಯೂಟರ್‍ಗಳು ಕಾರ್ಯ ನಿರ್ವಹಿಸಲಿವೆ. ಬಹು ವಿಸ್ತಾರದ ಸರ್ವೀಸ್ ಕೊಠಡಿ ಮತ್ತು ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಘಾಟನೆ ವೇಳೆ ನ್ಯಾ. ರಾಮಮೋಹನರೆಡ್ಡಿ ಸೇರಿದಂತೆ ಹೈಕೋರ್ಟ್‍ನ ಎಲ್ಲ ನ್ಯಾಯಮೂರ್ತಿಗಳು ಉಪಸ್ಥಿತರಿದ್ದರು.