

ನ್ಯೂಯಾರ್ಕ್: ಭಾರತ 'ಕುರುಡರ ನಾಡಲ್ಲಿ ಒಂದು ಕಣ್ಣಿನ ರಾಜ' ಇದ್ದಂತೆ ಎಂದಿದ್ದ ಆರ್ ಬಿ ಐ ಗವರ್ನರ್ ರಘುರಾಮ್ ರಾಜನ್ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಅತಿ ವೇಗವಾಗಿ ಬೆಳೆಯುತ್ತಿದೆ ಎಂದಿದ್ದಾರೆ.
೭.೫% ಬೆಳವಣಿಗೆ ದರದಲ್ಲಿ ವಿಶ್ವದ ಯಾವುದೇ ರಾಷ್ಟ್ರವಾದರೂ ಸಂಭ್ರಮಿಸುತ್ತಿತ್ತು ಎಂದಿರುವ ಅವರು "ನಮಗಿನ್ನೂ ಹೆಚ್ಚಿನ ಶಕ್ತಿ ಇದೆ, ಆದರೆ ಇನ್ನು ಹೆಚ್ಚು ಸಾಧಿಸಬಹುದಾಗಿರುವುದರಿಂದ ಉದ್ವೇಗ ಇದೆ" ಎಂದಿದ್ದಾರೆ ಜೇಟ್ಲಿ.
ಭಾರತದಲ್ಲಿ ೭.೫% ಅಭಿವೃದ್ದಿ 'ಕುರುಡರ ನಾಡಲ್ಲಿ ಒಂದು ಕಣ್ಣಿನ ರಾಜ' ಇದ್ದಂತೆ ಎಂದು ರಘುರಾಮ್ ರಾಜನ್ ಹೇಳಿವುದರ ಬಗೆಗಿನ ಪ್ರಶ್ನೆಗೆ ಜೇಟ್ಲಿ ಟಿವಿ ವಾಹಿನಿಯೊಂದರಲ್ಲಿ ಉತ್ತರಿಸುತ್ತಿದ್ದರು.
"ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ವೇಗವಾಗಿ ಬೆಳೆಯುತ್ತಿದ್ದೇವೆ, ಅತಿ ವೇಗವಾಗಿ ಎನ್ನಬಹುದು. ಆದರೆ ನಮಗಿರುವ ಶಕ್ತಿಗೆ ಇನ್ನೂ ಹೆಚ್ಚಿನದು ಸಾಧಿಸಲು ಸಾಧ್ಯವಿದೆ" ಎಂದು ಅವರು ಹೇಳಿದ್ದಾರೆ.
"ಇದಕ್ಕೆ ಇನ್ನೆರಡು ಸಂಗತಿಗಳಿವೆ. ಒಳ್ಳೆಯ ಮುಂಗಾರು ಮತ್ತು ಸುಧಾರಣೆಗಳು. ಇವೆರಡು ನಮ್ಮ ಅನುಕೂಲಕ್ಕೆ ಒದಗಿಬಂದರೆ ಇನ್ನೂ ಹೆಚ್ಚಿನದು ಸಾಧಿಸಬಹುದು" ಎಂದು ಕೂಡ ಅವರು ಹೇಳಿದ್ದಾರೆ.
"ಸಾಧಾರಣದಿಂದ ಒಳ್ಳೆಯ ಮುಂಗಾರು ಬಂದರೆ ಇನ್ನೂ ಒಳ್ಳೆಯ ಬೆಳವಣಿಗೆಯನ್ನು ಸಾಧಿಸಬಹುದ. ಸಾರ್ವಜನಿಕ ಹೂಡಿಕೆ, ವಿದೇಶಿ ನೇರ ಹೂಡಿಕೆ, ಬೇಡಿಕೆಯಲ್ಲಿ ಹೆಚ್ಚಳ ಮುಂತಾದ ಚಟುವಟಿಕೆಗಳನ್ನು ಗಮನಿಸಿದರೆ ಈ ಬೆಳವಣಿಗೆಯನ್ನು ಉಳಿಸಿಕೊಳ್ಳುವುದಕ್ಕೆ ಏನೂ ಕಷ್ಟವಿಲ್ಲ" ಎಂದು ಜೇಟ್ಲಿ ಹೇಳಿದ್ದಾರೆ.
ಸುಧಾರಣೆಯ ಬಗ್ಗೆ "ಜಿ ಎಸ್ ಟಿ, ದಿವಾಳಿ ಕಾಯ್ದೆಗಳು ಜಾರಿಯಾದರೆ ಹೂಡಿಕೆದಾರರಿಗೆ ಇನ್ನೂ ಹೆಚ್ಚಿನ ಆತ್ಮವಿಶ್ವಾಸ ಮೂಡುತ್ತದೆ" ಎಂದು ಕೂಡ ಅವರು ಹೇಳಿದ್ದಾರೆ.
ರಘುರಾಮ್ ರಾಜನ್ ಹೆಸರು ಹೇಳದೆ, ಕಳೆದ ಒಂದೂವರೆ ವರ್ಷದಲ್ಲಿ ಬಡ್ಡಿ ದರವನ್ನು ೧.೫% ಇಳಿಸಿ ಆರ್ ಬಿ ಐ ಒಳ್ಳೆಯ ಕೆಲಸ ಮಾಡಿದೆ, ಒಳ್ಳೆಯ ಮುಂಗಾರು ಮತ್ತು ಹಣದುಬ್ಬರ ನಿಯಂತ್ರಣದಲ್ಲಿದ್ದರೆ ಅದು ಇನ್ನೂ ಕಡಿಮೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.