ನೈನಿತಾಲ್: ಉತ್ತರಾಖಂಡ್ ಹೈಕೋರ್ಟ್ ಗುರುವಾರ ರಾಜ್ಯದಲ್ಲಿ ಜಾರಿಯಾಗಿದ್ದ ರಾಷ್ಟ್ರಪತಿ ಆಡಳಿತವನ್ನು ವಜಾಗೊಳಿಸಿ ಐತಿಹಾಸಿಕ ತೀರ್ಪು ನೀಡಿದ್ದು, ಇದರಿಂದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
ನಾಲ್ಕನೆ ದಿನವೂ ರಾಷ್ಟ್ರಪತಿ ಆಡಳಿತ ಪ್ರಶ್ನಿಸಿ ನಿರ್ಗಮಿತ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಬ್ರೇಕ್ ಹಾಕಿದೆ.
ವಿಚಾರಣೆ ವೇಳೆ, ಒಂದು ವೇಳೆ ಈಗ ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಡಳಿತ ಹಿಂಪಡೆದು ಮತ್ತೊಬ್ಬರಿಗೆ ಸರ್ಕಾರ ರಚಿಸಲು ಅವಕಾಶ ನೀಡಿದರೆ ನ್ಯಾಯದ ಅವಹೇಳನ ಮಾಡಿದಂತೆ ಎಂದು ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಹಾಗೂ ನ್ಯಾಯಮೂರ್ತಿ ವಿ.ಕೆ.ಬಿಸ್ಟ್ ಅವರನ್ನೊಳಗೊಂಡ ನ್ಯಾಯಪೀಠ, ಹರೀಶ್ ರಾವತ್ ಅವರ ಮನವಿಯನ್ನು ಪುರಸ್ಕರಸಿ, ಏಪ್ರಿಲ್ 29ರಂದು ವಿಧಾನಸಭೆಯಲ್ಲಿ ವಿಶ್ವಾಸಮತಯಾಚಿಸುವಂತೆ ಹರೀಶ್ ರಾವತ್ ಗೆ ಸೂಚಿಸಿದೆ.
ನಿನ್ನೆಯಷ್ಟೇ ರಾಷ್ಟ್ರಪತಿಗಳ ನಿರ್ಧಾರ ಕೂಡ ತಪ್ಪಾಗಬಹುದು ಎಂದಿದ್ದ ಉತ್ತರಾಖಂಡ್ ಹೈಕೋರ್ಟ್, ರಾಷ್ಟ್ರಪತಿಗಳ ನಿರ್ಧಾರ ಸಹ ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದು ಹೇಳಿತ್ತು.
ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರದ 9 ಮಂದಿ ಕೈ ಶಾಸಕರು ಬಂಡಾಯ ಎದ್ದು ಬಿಜೆಪಿ ಜೊತೆ ಕೈಜೋಡಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಶಿಫಾರಸು ಮಾಡಿತ್ತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಳ್ವಿಕೆಗೆ ಅಂಕಿತ ಹಾಕಿದ್ದರು. ಆದರೆ ರಾಷ್ಟ್ರಪತಿ ಆಳ್ವಿಕೆಯನ್ನು ಪ್ರಶ್ನಿಸಿ ಹರೀಶ್ ರಾವತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದು ರಾವತ್ ಗೆಲುವಲ್ಲ, ರಾಜ್ಯದ ಜನರ ಗೆಲುವು
ಹೈಕೋರ್ಟ್ ತೀರ್ಪುನ ನಂತರ ಸುದ್ದಿಗೋಷ್ಠಿ ನಡೆಸಿದ ನಿರ್ಗಮಿತ ಸಿಎಂ ಹರೀಶ್ ರಾವತ್ ಅವರು, ಹೈಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಇದು ಉತ್ತರಾಖಂಡ್ ಜನತೆಗೆ ಸಿಕ್ಕ ಜಯ ಎಂದರು. ಅಲ್ಲದೆ ರಾಜಕೀಯ ಬಿಕ್ಕಟ್ಟಿನ ವೇಳೆ ತಮಗೆ ಬೆಂಬಲ ನೀಡಿದ ಎಲ್ಲ ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಹೇಳಿದರು.