

ಬೆಂಗಳೂರು: ವಿವಾದಿತ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಕುರಿತಂತೆ ಹೇಳಿಕೆ ನೀಡಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದ ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರು ಇದೀಗ ಯು-ಟರ್ನ್ ಹೊಡೆದಿದ್ದು, ಆಮ್ನೆಸ್ಟಿಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಆಮ್ನೆಸ್ಟಿ ವಿವಾದ ಕುರಿತಂತೆ ನಗರದಲ್ಲಿ ಮಾತನಾಡಿರುವ ಅವರು, ಆಮ್ನೆಸ್ಟಿಯವರು ಯಾವುದೇ ತಪ್ಪನ್ನು ಮಾಡಿಲ್ಲ, ಎಲ್ಲವೂ ಸರಿಯಿದೆ ಎಂದು ಹೇಳಲು ನಾನೇನು ಮೂರ್ಖನಲ್ಲ. ಆಮ್ನೆಸ್ಟಿ ಸಂಸ್ಥೆಗೆ ಯಾವುದೇ ರೀತಿಯ ಕ್ಲೀನ್ ಚಿಟ್'ನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ದೇಶದಾದ್ಯಂತ ಭುಗೆಲೆದ್ದಿರುವ ಆಮ್ನೆಸ್ಟಿ ವಿವಾದ ಕುರಿತಂತೆ ಶನಿವಾರವಷ್ಟೇ ಕೆಪಿಸಿಸಿ ಪುರಭವನದಲ್ಲಿ ನಡೆದ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪರಮೇಶ್ವರ್ ಅವರು, ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ದೇಶದ್ರೋಹದ ಕೆಲಸ ಮಾಡಿದೆ ಎಂದು ನನಗೆ ಅನಿಸುತ್ತಿಲ್ಲ.
ಯಮನೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದಾಗ ಗಲಾಟೆ ಆಗಿತ್ತು. ಪ್ರತಿಭಟನೆಯಿಂದ ಸಾಕಷ್ಟು ಹಾನಿಯುಂಟಾಗಿದ್ದು. ಅದೇ ರೀತಿ ಕಾಶ್ಮೀರದಲ್ಲಿ ಗಲಾಟೆ ಆಗುತ್ತಿದ್ದು, ಧೈರ್ಯ ತುಂಬುವ ಸಲುವಾಗಿ ಕಾರ್ಯಕ್ರಮವನ್ನು ಮಾಡಲಾಗಿದೆ ಎಂದು ಹೇಳಿದ್ದರು. ಪರಮೇಶ್ವರ್ ಅವರ ಈ ಹೇಳಿಕೆ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ಇದೀಗ ತಮ್ಮ ಹೇಳಿಕೆಯಿಂದ ಪರಮೇಶ್ವರ್ ಅವರು ಹಿಂದೆ ಸರಿದಿದ್ದು, ಸಂಸ್ಥೆಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿರುವ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯು ಆಗಸ್ಟ್ 13 ರಂದು ಬ್ರೋಕನ್ ಫ್ಯಾಮಿಲೀಸ್ (ಒಡೆದ ಕುಟುಂಬ) ಎಂಬ ಹೆಸರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾರತೀಯ ಯೋಧರ ವಿರುದ್ಧ ಹಾಗೂ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ವಿವಾದಾತ್ಮಕ ನಾಟಕ ಪ್ರದರ್ಶನವೊಂದನ್ನು ನೀಡಲಾಗಿತ್ತು ಎಂದು ಹೇಳಲಾಗುತ್ತಿತ್ತು. ಇದರಂತೆ ಆಮ್ನೆಸ್ಟಿ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಆಮ್ನೆಸ್ಟಿ ಸಂಸ್ಥೆ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದರು.