ನವದೆಹಲಿ: ಈ ವರ್ಷ ಮಳೆ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಯಾವ ಜಲಾಶಯಗಳು ಭರ್ತಿಯಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ರೈತರ ಭತ್ತದ ಬೆಳೆಗೆ ನೀರು ಬಿಡಲು ಸಾಧ್ಯವಿಲ್ಲ ಎನ್ನುತ್ತಿರುವಾಗ ತಮಿಳುನಾಡು ಸರ್ಕಾರ 50.52 ಟಿಎಂಸಿ ನೀರು ಬಿಡುವಂತೆ ಕೋರಿ ಸೋಮವಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಮುಂದಿನ 10 ದಿನಗಳಲ್ಲಿ ಕಾವೇರಿ ನದಿಯಿಂದ 50.52 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕು ಎಂದು ತಮಿಳುನಾಡು ಸರ್ಕಾರ ಇಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.
ಪ್ರಸ್ತೂತ ಕರ್ನಾಟಕದ ಬಳಿ ಇರುವುದೇ 65.15 ಟಿಎಂಸಿ ನೀರು ಅದರಲ್ಲಿ ತಮಿಳುನಾಡು ಬರೋಬ್ಬರಿ 50.52 ಟಿಎಂಸಿ ನೀರು ಕೇಳಿದ್ದು, ನೀರಿಗಾಗಿ ಉಭಯ ರಾಜ್ಯಗಳು ಮತ್ತೆ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶದ ಪ್ರಕಾರ ತಮಿಳುನಾಡಿಗೆ ಬಿಡಬೇಕಾಗಿದ್ದ ನೀರನ್ನು ಇದವರೆಗೂ ಕರ್ನಾಟಕ ಬಿಟ್ಟಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಮೂಲಕ ಕರ್ನಾಟಕದಿಂದ ನಮ್ಮ ಪಾಲಿನ ನೀರನ್ನು ಪಡೆದುಕೊಳ್ಳುವ ವಿಶ್ವಾಸ ಇದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ.