

ಇಂಫಾಲ್: ಜನವರಿ ೪ ರಂದು ಘಟಿಸಿದ ಭೂಕಂಪದ ಪರಿಹಾರ ಚಟುವಟಿಕೆಗಳಿಗೆ ಕೇಂದ್ರದಿಂದ ಮಣಿಪುರ ೨೦ ಕೋಟಿ ರೂ ಅನುದಾನ ಕೇಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮನವಿಗೆ ಇನ್ನೂ ಕೇಂದ್ರ ಸರ್ಕಾರ ಪ್ರತಿಕ್ರಿಸಿಲ್ಲ ಎಂದು ಮಣಿಪುರದ ಮುಖ್ಯ ಕಾರ್ಯದರ್ಶಿ ಆಯಿನಾಂ ನಬಕಿಶೋರ್ ಬುಧವಾರ ಸಂಜೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
"ಸದ್ಯಕ್ಕೆ ತುರ್ತು ಪರಿಹಾರ ಕಾರ್ಯಗಳಿಗೆ ಮಣಿಪುರ ಸರ್ಕಾರ ೨ ಕೋಟಿ ಬಿಡುಗಡೆ ಮಾಡಿದೆ ಅಲ್ಲದೆ ಅತಿ ಹೆಚ್ಚು ಹಾನಿಗೊಂಡ ನಾಲ್ಕು ಜಿಲ್ಲೆಗಳಿಗೆ ಹೆಚ್ಚುವರಿ ೫೦ ಲಕ್ಷ ರೂ ಬಿಡುಗಡೆ ಮಾಡಲಾಗಿದೆ" ಎಂದು ಕೂಡ ಅವರು ಹೇಳಿದ್ದಾರೆ.
ಜನವರಿ ೯ ರಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಇಂಫಾಲ್ ಗೆ ಭೇಟಿ ನೀಡಿ ಮಹಿಳಾ ಮಾರಾಟಗಾರರಿಗೆ ಕಟ್ಟಲಾಗಿದ್ದ ಎರಡು ಮಾರುಕಟ್ಟೆ ಸಂಕೀರ್ಣಗಳು ಹಾನಿಗೊಂಡಿರುವುದನ್ನು ಪರಿಶೀಲನೆ ಮಾಡಲಿದ್ದಾರೆ ಎಂದು ಕೂಡ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.
ಭೂಕಂಪದ ನಂತರ ಕೇಂದ್ರ ಹಾನಿಯ ಅಂದಾಜಿನ ಬಗ್ಗೆ ವರದಿ ಕೇಳಿದ್ದು ವರದಿ ಸಲ್ಲಿಸಿದ ನಂತರ ಅಗತ್ಯ ಸಹಾಯ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಗೃಹ ರಾಜ್ಯ ಸಚಿವ ಕಿರೇಣ್ ರಿಜಿಜು ಹೇಳಿದ್ದಾರೆ.