
ಬೆಂಗಳೂರು: ಪಠಾಣ್ ಕೋಟ್ ಉಗ್ರ ದಾಳಿ ಹಸಿರಾಗಿರುವಾಗಲೇ ಬೆಂಗಳೂರಿನಲ್ಲಿಯೂ ಶಂಕಿತ ವಸ್ತು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಅರಮನೆ ಮೈದಾನ ರಸ್ತೆಯಲ್ಲಿರುವ ಕಾವೇರಿ ಜಂಕ್ಷನ್ ಬಳಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೆಳಗೆ ಈ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಪೇಪರ್ ಬಾಕ್ಸ್ ನಲ್ಲಿ ಅನುಮಾನಾಸ್ಪದ ವಸ್ತು ಇರುವ ಕುರಿತು ಸ್ಥಳೀಯರು ಪೊಲೀಸರು ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಕ್ಸ್ ಅನ್ನು ಪರಿಶೀಲಿಸಿ, ರಸ್ತೆಯನ್ನು ಕೆಲ ಕಾಲ ಬಂದ್ ಮಾಡಿದ್ದರು. ಬಳಿಕ ಶ್ವಾನದಳದ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದರು.
ಶಂಕಿತ ವಸ್ತು ಪತ್ತೆಯಾದ ಹಿನ್ನಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಶಂಕಿತ ವಸ್ತುವನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಶಂಕಿತ ವಸ್ತುವಿದ್ದ ಬಾಕ್ಸ್ ಮೇಲೆ ಚೀನಿ ಭಾಷೆಯ ಅಕ್ಷರಗಳು ಇದ್ದವು ಎಂದು ತಿಳಿದುಬಂದಿದೆ.
Advertisement